ಲೋಕಾಯುಕ್ತವನ್ನು ಬಲಪಡಿಸಲು ಸರಕಾರಕ್ಕೆ ಒತ್ತಾಯ

ಕರ್ನಾಟಕ ಲೋಕಾಯುಕ್ತರ ಬಗ್ಗೆ ಜೂನ್ 15, 2010 ರಂದು ಬರೆದ ಲೇಖನ

[dropcap]ನ[/dropcap]ಮ್ಮ ಪ್ರಸ್ತುತ ಸಂವಿಧಾನಬದ್ದವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತಗಳು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುವಂತೆ ನಿಯೋಜಿಸಲಾಗಿದೆ. ಆದರೆ ಕೇಂದ್ರಕ್ಕೆ ಸಂಭಂದಿಸಿದ ಲೋಕಪಾಲವು ನಿಜವಾಗಿ 63 ವರ್ಷಗಳಲ್ಲಿಯೂ ಅಸ್ತಿತ್ವಕ್ಕೆ ಬಂದಿಲ್ಲ. ಅದಕ್ಕೆ ಒಂದೇ ಒಂದು ಕಾರಣ ಲೋಕಪಾಲದ ವ್ಯಾಪ್ತಿಯಿಂದ ಪ್ರಧಾನ ಮಂತ್ರಿಯವರನ್ನು ಹೊರಗೆ ಇರಿಸಬೇಕೆಂಬ ಕೇಂದ್ರ ಸರಕಾರದ ನಿಲುವು. ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತಗಳು ಇವೆ. ಆದರೆ ಅವುಗಳ ವ್ಯಾಪ್ತಿಯಿಂದ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಹೊರಗೆ ಇಡಲಾಗಿದೆ. ಎಂದರೆ ಕೇಂದ್ರ ಸರಕಾರವು ನಿಜವಾದ ಅರ್ಥದಲ್ಲಿ ಲೋಕಪಾಲ ಎಂಬ ಸಂಸ್ಥೆಯ ವ್ಯಾಪ್ತಿಯಿಂದ ಸಂಪೂರ್ಣ ಅಬಾಧಿತವಾಗಿದೆ ಹಾಗೂ ರಾಜ್ಯ ಸರಕಾರಗಳೂ ಆಯಾ ರಾಜ್ಯಗಳ ಲೋಕಾಯುಕ್ತರಿಂದ ಅಬಾಧಿತವಾಗಿವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಿ ಕೆಲಸ ಮಾಡಲು ಸಾಕಷ್ಟು ಅವಕಾಶವನ್ನು ನಮ್ಮ ದೇಶವನ್ನು ಆಳಿರುವ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡಿವೆ. ಈ ಕೊರತೆಯು ಕಳೆದ 63 ವರ್ಷಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಮ್ಮನ್ನು ಆಳಿರುವ ಎಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಣ್ಣು ಮುಚ್ಚಾಲೆಯಿಂದ ನಡೆದಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸರಕಾರದ ಉನ್ನತ ಅಧಿಕಾರಿಗಳು ಅವರ ಬಲೆಗೆ ಬಿದ್ದು ಪ್ರಾಥಮಿಕ ತನಿಖೆಯಿಂದ  ಪೂರ್ಣ ನ್ಯಾಯಾಂಗ ವಿಚಾರಣೆಗೆ ಗುರಿಪಡಿಸಲು ಸಾಕಷ್ಟು ಪುರಾವೆಗಳು ದೊರೆತ ಸಂಧರ್ಭಗಳಲ್ಲಿ ಸಹಾ ಸರಕಾರದ ಕೃಪಾಕಟಾಕ್ಷದಿಂದ ಭೃಷ್ಟ ಅಧಿಕಾರಿಗಳು ತಪ್ಪಿಸಿಕೊಂಡಿರುವಂಥಾ ಉದಾಹರಣೆಗಳು ಸಾಕಷ್ಟಿವೆ.  ಈ ಮುಖ್ಯ ಪ್ರಶ್ನೆಯನ್ನು ಒಂದು ವೇಳೆ ಬದಿಗಿರಿಸಿದರೂ ಸಹಾ ಇದ್ದ ವ್ಯವಸ್ಥೆಯಲ್ಲಿಯೇ ರಾಜ್ಯಗಳ ಲೋಕಾಯುಕ್ತಗಳು ಉತ್ತಮ ಕಾರ್ಯ ನಿರ್ವಹಿಸಿವೆ ಎನ್ನುವುದು ಗಮನಾರ್ಹವಾಗಿದೆ.

ನನ್ನ ಸ್ವ ಅನುಭವದಿಂದ ಹೇಳಬಹುದಾದ ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಸರಕಾರಿ ರಸ್ತೆ ಸಾರಿಗೆ ಸಂಸ್ಥೆಗೆ  ನಷ್ಟ ಉಂಟಾಗುವಂತೆ ಹಾಗೂ ಅದರ ಕಾರ್ಯವ್ಯಾಪ್ತಿಯ ಮೇಲೆ ಅಕ್ರಮವಾಗಿ ಒಳ ನುಸುಳಿ ಆತಂಕ ಉಂಟು ಮಾಡುವಂತೆ ವರ್ತಿಸುತ್ತಿದ್ದ ಖಾಸಗಿ ರಸ್ತೆ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕಾನೂನನ್ನು ದುರ್ಬಳಕೆ ಮಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪರವಾನಿಗೆ ನೀಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಕಾರ್ಮಿಕ ಮತ್ತು ನೌಕರರ AITUC ಸಂಘಟಣೆಯ ಆಧ್ಯಕ್ಷ ಎಂಬ ನೆಲೆಯಲ್ಲಿ ಪ್ರಶ್ನಾತೀತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ನಾನೊಮ್ಮೆ ಮನವಿ ಸಲ್ಲಿಸಿದ್ದೆ. ಆ ಮನವಿಯನ್ನು ಸ್ವೀಕರಿಸಿ ಖಾಸಗಿಯವರಿಗೆ ಈ ರೀತಿ ಅವಕಾಶ ನೀಡುವುದನ್ನು 15 ದಿನಗಳೊಳಗೆ ತಡೆಗಟ್ಟದಿದ್ದರೆ ಅದಕ್ಕೆ ಕಾರಣರಾದ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಕೋರ್ಟು ನಿಂದನೆ ಕ್ರಮವನ್ನು ಜರುಗಿಸಬೇಕೆಂಬ ಆದೇಶವನ್ನು ಲೋಕಾಯುಕ್ತರು ನೀಡಿದ್ದು ಒಂದು ಶ್ಲಾಘನೀಯ ಉದಾಹರಣೆ.

ಅಲ್ಲದೆ ಲೋಕಾಯುಕ್ತರ ಇತ್ತೀಚಿಗಿನ ಕಾರ್ಯವಿಧಾನಗಳು ಅತ್ಯಂತ ಪ್ರಸಂಶನೀಯವಾಗಿವೆ. ನ್ಯಾಯಮೂರ್ತಿ.UL ಭಟ್ ಅವರಿಗೆ ಗಣಿಗಾರಿಕೆಗೆ ಸಂಭಂಧಿಸಿದ ಅಕ್ರಮಗಳ ತನಿಖೆಯನ್ನು ರಾಜ್ಯಸರಕಾರ ಒಪ್ಪಿಸಿತ್ತು. ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದ ಆರೋಪಗಳ ತನಿಖೆಯನ್ನು CBI ಗೆ ಒಪ್ಪಿಸಬೇಕೆಂಬ ನ್ಯಾ.ಮೂ.ಗಳ ಆದೇಶವನ್ನು ಕೇಂದ್ರ ಸರಕಾರ ಜಾರಿಗೆ ತರುವುದರ ಬದಲು ನ್ಯಾ.ಮೂ.ಗಳೇ ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆ ವಿಷಯವೀಗ  ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಲೋಕಾಯುಕ್ತದ ಮುಂದಿದ್ದು  ಅವರು ಗಣಿಗಾರಿಕೆಯ ಬಗ್ಗೆ ತನಿಖೆ ಮುಂದುವರಿಸಿ ವರದಿಯನ್ನು ಪೂರ್ಣಗೊಳಿಸಿ ಸರಕಾರಕ್ಕೆ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಣಿ ದೊರೆಗಳ ಪ್ರಭಾವದಿಂದಲೋ ಮಾಜೀ ಅಥವಾ ಹಾಲೀ ಮು.ಮಂತ್ರಿಗಳ ಕೈವಾಡದಿಂದಲೋ ಗಣಿ ಹಗರಣದ ವರದಿಯನ್ನು ಸರಕಾರವು ಇನ್ನೂ ವಿಚಾರಣೆಗೆ ಒಪ್ಪಿಸಲಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಹಾಗೆಯೇ ಅರಣ್ಯ ನಾಶದ ಬಗ್ಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದಿರುವಂಥಾ ಭೂಹಗರಣಗಳ ಬಗ್ಗೆ ನಡೆಸಿರುವ ತನಿಖೆಗಳು ಎಲ್ಲಿಗೆ ತಲುಪಿವೆ ಮತ್ತು ಅವುಗಳ ಫಲಿತಾಂಶವೇನು ಎಂಬ ಸುದ್ದಿ ಕೂಡಾ ಹೊರಗೆ ಬಾರದಂತೆ ತಡೆ ಹಿಡಿಯಲಾಗಿದೆ ಎಂಬುದು ಸಂಶಯಕ್ಕೆ ಎಡೆಯಾಗಿದೆ.

ಇಂತಹ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಚುರುಕಾಗಿದೆ ಹಾಗೂ ಜನರ ಸೊತ್ತುಗಳ ಅಪಹರಣಗಳ ವಿರುದ್ದ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು  ಅಯೋಗಗಳು ತಯಾರಾಗಿವೆ ಎಂಬ ಭರವಸೆ ಜನರಿಗೆ ಬೇಕಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿರುವ ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಮುಂದಾಳುತನದಲ್ಲಿರುವ ಲೋಕಾಯುಕ್ತವು ಸಲ್ಲಿಸಿರುವ ವರದಿಗಳೆಲ್ಲವೂ ಬಹಿರಂಗಗೊಳ್ಳಬೇಕು ಮತ್ತು ಅಂಗೀಕೃತವಾಗಬೇಕು ಹಾಗೂ ಮುಂದಿನ ಕ್ರಮ ಜರುಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಲೋಕಾಯುಕ್ತವು ಇನ್ನಷ್ಟು ಹೆಚ್ಹು ಕಾಲ ಅಧಿಕಾರದಲ್ಲಿ ಮುಂದುವರಿದು ಭ್ರಷ್ಟಾಚಾರದ ನಿರ್ಮೂಲನೆಗೆ ಭದ್ರವಾದ ಬುನಾದಿಯನ್ನು ನಿರ್ಮಿಸಬೇಕೆಂಬ ಸಾರ್ವಾಜನಿಕರ ಅಪೇಕ್ಷೆಯನ್ನು ಅವರ ಚಟುವಟಿಕೆಗಳನ್ನು ಕಂಡು ತಿಳಿದಿರುವ ನಾನು ಹಾರೈಸುತ್ತೇನೆ.

ಲೋಕಾಯುಕ್ತರನ್ನು ಬಲಪಡಿಸುವ ದೃಷ್ಟಿಯಿಂದ ಅವರ ವರದಿಗಳಲ್ಲಿ ತಪ್ಪಿತಸ್ಥರೆಂದು ಉಲ್ಲೇಖಿಸಲಾಗಿರುವ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಅಪಾದಿತರನ್ನಾಗಿ ವಿಚಾರಣೆಗೆ ಒಳಪಡಿಸುವ ಕ್ರಮವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಸರಕಾರ ಜಾರಿಗೆ ತರಬೇಕು ಅಲ್ಲದೆ ಆಪಾದಿತರನ್ನು ಲೋಕಾಯುಕ್ತದ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಿ ಪ್ರಾಥಮಿಕ ತೀರ್ಪು ನೀಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು. ಈ ಕ್ರಮಗಳನ್ನು ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿಯೇ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ಸರಕಾರವೇ ಪೌರ ಕಾರ್ಮಿಕರನ್ನು ಆತ್ಮಹತ್ಯೆಗೆ ತಳ್ಳಿದೆ

[dropcap]ಗು[/dropcap]ಲ್ಬರ್ಗ ಪೌರ ಆಡಳಿತ ಕಛೇರಿಯ ಮುಂದೆ ಇಂದಿಗೆ 27 ದಿನಗಳಿಂದ ನಗರದ ಪೌರ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಯಾಕೆ?  2 ವರ್ಷಗಳಿಂದ ಕಾನೂನಿನ ಪ್ರಕಾರ ನೀಡಬೇಕಿದ್ದ ಯಾವ ಸವಲತ್ತುಗಳನ್ನೂ ಅವರಿಗೆ ನೀಡದೆ, ದುಡಿಸಿ ಸಂಬಳವನ್ನೂ ಕೊಡದೆ, ಉಪವಾಸ ಕೆಡವಿರುವ ನಗರ ಸಭಾ ಆಡಳಿತದ ವಿರುದ್ಧ ಅವರು ತಮ್ಮ ಜೀವವನ್ನೇ ಪಣವಿಟ್ಟು ಉಪವಾಸ ಹೂಡಿದ್ದಾರೆ. ಸರಕಾರವೇ ಅವರನ್ನು ಆತ್ಮಹತ್ಯೆಗೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಸಹಾ ಆತ್ಮಹತ್ಯೆಗೆ ಪ್ರೇರಣೆ ಮತ್ತು ಒತ್ತಡ ಹೇರಿದ ಅಪರಾಧಕ್ಕೆ ಹೊಣೆಗಾರರಾಗಿದ್ದಾರೆ.  ಶಿಕ್ಷಾರ್ಹರೂ ಆಗುತ್ತಾರೆ. ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಗುಲ್ಬರ್ಗ ಜಿಲ್ಲೆಯವರೇ ಆಗಿದ್ದು ಕಾನೂನು ಪ್ರಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಉಪವಾಸ ಸತ್ಯಾಗ್ರಹದ ನಡುವೆ ಮರಣ ಹೊಂದಿರುವ ದಲಿತ ಕಾರ್ಮಿಕ ಮಹಿಳೆಯ ವಿಚಾರವನ್ನು ಕೇಂದ್ರ ಸರಕಾರ ತನಿಖೆಗೆ ಒಳಪಡಿಸಿ ಅದಕ್ಕೆ ಕಾರಣರಾಗಿರುವರ ಅಸಡ್ಡೆ ಇನ್ನು ಮರುಕಳಿಸದಂತೆ ಕಾನೂನನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ಕಾರ್ಮಿಕರನ್ನು ದುಡಿಸಿ ನ್ಯಾಯವಾದ ವೇತನ ಮತ್ತಿತರ ಸವಲತ್ತುಗಳನ್ನು ಕೊಡದೆ ಸಾಯಿಸುವ ಮಂದಿ ಕರ್ನಾಟಕದಲ್ಲಿ ಅಧಿಕಾರದ ಮರೆಯಲ್ಲಿ ಸಾಕಷ್ಟು ಇದ್ದಾರೆ ಎಂಬ ವಿಚಾರ ಬಯಲಾಗಿದೆ. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅಂಬವ್ವ ಎಂಬ ದಲಿತ  ಮಹಿಳೆ ಸತ್ಯಾಗ್ರಹದ ಮೊದಲನೆಯ ಹುತಾತ್ಮರಾಗಿದ್ದಾರೆ. ಅವರನ್ನು ಬೆಂಬಲಿಸಿದ ಮತ್ತು ನ್ಯಾಯಕ್ಕಾಗಿ ಶಾಂತಿಯುತ ಸುಸಂಘಟಿತ ನ್ಯಾಯಬದ್ದ ಹೋರಾಟ ನಡೆಸಿದವರಿಗೆ ಬೆಂಬಲ ನೀಡಿದ್ದ ಮಾಜಿ ಕಾರ್ಮಿಕ ಸಚಿವ ಹಿರಿಯ ರಾಜಕಾರಿಣಿ ಎಸ್. ಕೆ. ಕಾಂತಾ ಅವರು ಮತ್ತು ಅವರ ಬೆಂಬಲಿಗರು ಬಂಧನಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ಆದ್ಯಂತವಾಗಿ ಎಲ್ಲ ಕಾರ್ಮಿಕ ಸಂಘಟಣೆಗಳು, ಎಲ್ಲ ಜನಪರ ಸಂಘ ಸಂಸ್ಥೆಗಳು, ಎಡ ಪಂಥೀಯ ವಿಚಾರವಂತರು, ಕಾರ್ಯಕರ್ತರು ಈ ಕಡೆಗೆ ಕಾಲ ವಿಳಂಬವಿಲ್ಲದೆ ದೃಷ್ಟಿ ಹರಿಸಬೇಕೆಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಕರ್ನಾಟಕದಲ್ಲಿ ಕಾರ್ಮಿಕ ಚಳುವಳಿಯ ಆರಂಭದ ಕಾಲದಲ್ಲಿಯೇ ಗುಲ್ಬರ್ಗ, ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ. ದಾರವಾಡ, ಉಡುಪಿ ಹಾಗೂ ಇತರ ಅನೇಕ ಕೇಂದ್ರಗಳಲ್ಲಿ ಪೌರ ಕಾರ್ಮಿಕರು ಕೆಂಬಾವುಟದ ಕೆಳಗೆ ಸಂಘಟಿತರಾಗಿ ಹೋರಾಟ ನಡೆಸಿ ಪಡೆದಿದ್ದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಹಾಗೂ ತಲೆಯ ಮೇಲೆ ಮಲ ಹೊರಿಸುವ ಅಮಾನುಷ ಕ್ರಮಗಳ ನಿಷೇಧವನ್ನು ಜಾರಿ ಗೊಳಿಸಿದ್ದು ನಮಗೆ ಇನ್ನೂ ಮರೆತಿಲ್ಲ. ಕರ್ನಾಟಕ ಸರಕಾರವು ಅಮಾನುಷವಾದ ಕಾರ್ಮಿಕ ವಿರೋಧಿ ಮತ್ತು ದಲಿತ ವಿರೋಧಿ ಮಾರ್ಗವನ್ನು ಕೈ ಬಿಟ್ಟು ದುಡಿಯುವವರ ಹಕ್ಕು ಭಾದ್ಯತೆಗಳನ್ನು ಕಾನೂನು ಕ್ರಮಗಳಿಂದ ಸಂರಕ್ಷಿಸಬೇಕು. ಅಂಬವ್ವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕರ್ನಾಟಕದ ಕಾರ್ಮಿಕ ಸಂಘಟಣೆಗಳು ಈ ವಿಚಾರದಲ್ಲಿ ರಾಜ್ಯವ್ಯಾಪಕ ಚಳುವಳಿಯನ್ನು ನಡೆಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ವಾರ್ತಾಭಾರತಿ ಈ ಬಗ್ಗೆ ತನ್ನ ದಿ.26.5.10 ರ ಸಂಪಾದಕೀಯದ ಮೂಲಕ  ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ತುತ್ಯರ್ಹ.

ಈ ಪ್ರಕರಣಕ್ಕೆ ಸಂಭದಿಸಿ  ಸರಕಾರ ಹೂಡಿರುವ ಎಲ್ಲ ಮೊಕ್ಕದ್ದಮೆಗಳನ್ನು ಹಿಂದೆಗೆದುಕೊಳ್ಳಬೇಕೆಂದೂ, ಬಂಧನದಲ್ಲಿರಿಸಿರುವ ಎಲ್ಲರನ್ನೂ  ಬಿಡುಗಡೆ ಮಾಡಬೇಕೆಂದೂ, ಕಾರ್ಮಿಕರಿಗೆ ಸಲ್ಲಬೇಕಾಗಿರುವ ಎಲ್ಲವನ್ನೂ ಸಲ್ಲಿಸಬೇಕೆಂದೂ ಈ ಮೂಲಕ ಒತ್ತಾಯಿಸುತ್ತೇನೆ.

ಮೇ ದಿನಾಚರಣೆ

[dropcap]ಮೇ[/dropcap] ದಿನಾಚರಣೆಯನ್ನು ಇಂದು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಕಾರ್ಮಿಕ ವರ್ಗದ ಕ್ರಾಂತಿಕಾರಿ ಹೋರಾಟದ ವಾರ್ಷಿಕ ಜಾಗತಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾಗಿರುವ ಐತಿಹಾಸಿಕ ಘಟಣೆಯು ಘಟಿಸಿದ್ದು ಮೇ ತಿಂಗಳ ತಾ.1, 1786 ರಂದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಶಿಕಾಗೊ ನಗರದ ಹೇ ಚೌಕ ಎಂಬಲ್ಲಿ. ಸಾಮ್ರಾಜ್ಯಶಾಹಿ ಅಮೆರಿಕದ ಒಂದು ಪ್ರಮುಖ ನಗರದಲ್ಲಿ ನಡೆದ ಕಾರ್ಮಿಕ ದಮನದ ಈ ಘಟನೆಯು ಅಂತಹ ಮೊತ್ತ ಮೊದಲನೆಯ ಕ್ರೌರ್ಯವಾಗಿತ್ತು,  ಶ್ರಮಜೀವಿಗಳ ಮರ್ದನ, ದೌರ್ಜನ್ಯ ಹಾಗೂ ಮಾನವೀಯ ಮೌಲ್ಯಗಳ ದಮನ ಇತ್ಯಾದಿಗಳ ಆ ಆರಂಭದ ಹೆಜ್ಜೆಯ ಕರಿ ಛಾಯೆಯುಇಂದಿಗೂ ಪ್ರಕಟಗೊಳ್ಳುತ್ತಿರುವುದನ್ನು ಕಾಣಬಹುದು. ಸಾಮ್ರಾಜ್ಯವಾದದ ತುತ್ತ ತುದಿಗೆ ಏರಿ ಜಗತ್ತಿನ ಮೇಲೆ ಪರಮಾಣು ಆಯುಧದಂತಹ ವಿನಾಶಕಾರಿ ಸಾರ್ವಭೌಮ ಅಧಿಕಾರ ಹೊಂದಿರುವ ಸಾಮ್ರಾಜ್ಯವಾದವು ಖಾಸಗಿ ಲಾಭದ ಗಳಿಕೆ ಮತ್ತು ಅಧಿಕಾರ ಒಂದೇ ಪರಮ ಗುರಿಯಾಗಿ ಇರುವಂತಹ ನೆಲೆಗೆ ಬಂದು ತಲುಪಿದೆ. ಅಂದಿನ ಸಾಮ್ರಾಜ್ಯವಾದಕ್ಕೂ ಇಂದಿನ ಒಬಾಮ ನಿರ್ದೇಶಿತ ವಿಶ್ವರಾಜಕಾರಣದ ಪ್ರದರ್ಶನಕ್ಕೂ ಬಹಳ ವ್ಯತ್ಯಾಸವಿದೆ. ಅಂದು ಸಾಮ್ರಾಜ್ಯವಾದದ ಗುರುತು ಇನ್ನೂ ಸ್ಪಷ್ಟ ಸ್ವರೂಪ ಹೊಂದಿರಲಿಲ್ಲ. ಪ್ರಜಾಪ್ರಭುತ್ವದ ಮೊಸಳೆ ಕಣ್ಣೀರಿನ ವಿಷ ಎಂತಹುದೆಂಬುದು ಅಂದು ಪ್ರತ್ಯಕ್ಷವಾಗಿರಲಿಲ್ಲ. ಆದರೆ ಬಂಡವಾಳಶಾಹಿಯೆಂಬ ಒಂದು ಮನುಷ್ಯ ನಿರ್ಮಿತ ಸಮಾಜದ ಸ್ವರೂಪ ಹಾಗೂ ಉತ್ಪಾದನಾ ವಿಧಾನಗಳ ಅಮಾನುಷ ಸ್ವರೂಪ  ಸಾಕಷ್ಟು ಬೆಳಕಿಗೆ ಬಂದಿತ್ತು. ಇಂದು ಎಲ್ಲ ದೇಶಗಳ ಪ್ರಭುತ್ವಗಳು ಸಹಾ ಕಾರ್ಮಿಕರಿಗೆ ಮಾನವೀಯ ಮೌಲ್ಯಗಳ ಅಧಿಕಾರ ಇದೆ ಎಂಬುದಕ್ಕೆ ಬರೇ ಮಾತಿನ ಅಂಗೀಕಾರ ದೊರಕಿರುವುದೇನೋ ನಿಜ. ಆದರೆ ಕಾರ್ಯದಲ್ಲಿ ವಿಶ್ವದ ಮಾನವ ಕೋಟಿಯ ಬದುಕನ್ನು ಸಾಮ್ರಾಜ್ಯವಾದವೆಂಬ ಆಡಳಿತ ಕ್ರಮವು, ರಾಜಕೀಯ ವಿಚಾರವು, ಸಂವಿಧಾನಿಕ ಪ್ರಭುತ್ವಗಳ ಸ್ವರೂಪಗಳು ಎಂತೆಂತಹ ಅಂದ-ಚೆಂದದ ವೇಷಗಳನ್ನು ಧರಿಸಿ ಈ ಧರೆಯಲ್ಲಿ ತಾಂಡವ ನೃತ್ಯ ಆಡುತ್ತಿದೆ. ಭಾರತದ ಮಟ್ಟಿಗಂತೂ ಒಂದೇ ಒಂದು ಪ್ರತ್ಯಕ್ಷ ನಿದರ್ಶನದಿಂದಲೇ  ಅದರ ನಿಜ ಬಣ್ಣವನ್ನು ಬಯಲುಗೊಳಿಸುವುದು ಸಾಧ್ಯವಾಗುತ್ತದೆ.

ಅತೀ ಹಿರಿಯ ಹಾಗೂ ಅತ್ಯಂತ ಉತ್ಕೃಷ್ಟವಾದ ಪ್ರಜಾಪ್ರಭುತ್ವ ಎಂದುಕೊಳ್ಳುವ ಈ ನಾಡಿನಲ್ಲಿ ಒಟ್ಟು ಜನ ಸಂಖ್ಯೆಯ ಶೇ.80 ಮಂದಿ ಪ್ರಜೆಗಳು ತಮ್ಮ ಮತದಾನದಿಂದಲೇ ತಮ್ಮ ಮೇಲೆ ಹೇರಿಕೊಂಡಿರುವ ವ್ಯವಸ್ಥೆಯಲ್ಲಿ ದಿನಕ್ಕೆ 20 ರೂ.ಗಳಲ್ಲಿ ಇಡೀ ದಿನದ ಕಷ್ಟಕಾರ್ಪಣ್ಯಗಳನ್ನು ತುಂಬಿದ ಬದುಕನ್ನು ನಿಭಾಯಿಸಬೇಕಾದ ಶಾಪವನ್ನು ಸುತ್ತಿಕೊಂಡಿದ್ದಾರೆ. ಅದೇ ಸಮಯದಲ್ಲಿ ದಿನಕ್ಕೆ 20 ಕೋಟಿ ರೂ.ಗಳನ್ನೂ ಮೀರಿದ ಆದಾಯ ಮತ್ತು ಐಶಾರಾಮಿ ಜೀವನ ನಡೆಸುವ ಮನುಷ್ಯ ಪ್ರಾಣಿಗಳ ಅಧಿಕಾರದ ಅಡಿಯಲ್ಲಿ ಈ ಜನರು ನರಳುತ್ತಿರುವುದು ಕಂಡುಬರುತ್ತಿದೆ. ಇದು ವಿಶ್ವದ ಬಂಡವಾಳಶಾಹಿ ವ್ಯವಸ್ಥೆಯ ಒಟ್ಟು ಫಲಿತಾಂಶ ಎನ್ನುವಾಗ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಪಥದಲ್ಲಿ ಶೋಷಣೆ ಮರ್ದನೆಗಳನ್ನೆಲ್ಲಾ ಅಳಿಸಿ  ಮಾನವ ಸಂಕುಲದ ಅತ್ಯಂತ ಸುಂದರವಾದ ಕನಸುಗಳನ್ನು ನನಸಾಗಿಸುವ ಪಥದಲ್ಲಿ ಮುಂದೆ ಹೆಜ್ಜೆ ಹಾಕುವುದಕ್ಕೆ ಶ್ರಮಜೀವಿ ವರ್ಗ ಸನ್ನದ್ಧರಾಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಿಚ್ಚಳವಾಗುತ್ತದೆ. ಕಾಲವೇನೋ ಇಂತಹ ಅನೇಕ ಸನ್ನಿಹಿತ ಸಂಧಿ ಘಟ್ಟಗಳನ್ನು ದಾಟಿ ದಾಟಿ ಸಫಲತೆ ಕಾಣದ ಹೆಜ್ಜೆ ಗುರುತುಗಳನ್ನಷ್ಟೇ ಬಿಟ್ಟು ಹೋಗಿದೆ. ಇಂದಿನ ಪರಿಸ್ಥಿತಿಯನ್ನು ಅಂತಹ ಒಂದು ಹೆಜ್ಜೆ ಗುರುತೆಂದು ಹೇಳಬಹುದೆಂದಾದರೂ ಸಹಾ ಅದು ಮಾನವ ಸಂಕುಲದ ಕ್ರಾಂತಿಕಾರಿ ಯುಗ ಪರಿವರ್ತನೆಯ  ಯಶಸ್ಸನ್ನು ಕಾಣುತ್ತದೆಯೋ ಅಥವಾ ಬರಿ ಗುಲ್ಲುಗಳ ಮತ್ತು ಹೊಸ ಸಂಕೋಲೆಗಳ ಸೃಷ್ಟಿಯಾಗಿ ಇನ್ನೂ ದೀರ್ಘ ಕಾಲ ಮನುಷ್ಯನನ್ನು ಪೀಡಿಸುತ್ತಿದೆಯೋ ಎನ್ನುವುದರ ಬಗ್ಗೆ ಆಳವಾಗಿ ಮತ್ತು ವ್ಯಾಪಕವಾಗಿ ಸಮಸ್ತ ಮಾನವ ಸಂಕುಲದ ಇರವು ಅರಿವು ಗಳ ಅವಲೋಕನದಿಂದಷ್ಟೇ ಊಹಿಸಲು ಸಾಧ್ಯವಾಗಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಇಂದಿನ ದುರಂತಗಳಲ್ಲಿ ಒಂದು ಎಂದರೆ ತಪ್ಪಾಗದು, ಮನುಷ್ಯ ಸಂಕುಲವು ಕ್ರಾಂತಿಕಾರಿ ಪರಿವರ್ತನೆಯ ಹಲವಾರು ಮಜಲುಗಳನ್ನು ದಾಟಿ ಬಂದಿದೆ. ಆದರೆ ಮನುಷ್ಯನು ತನ್ನ ಒಡಲೊಳಗಿನ ಚೇತನದ ಚೇತನ ಎನ್ನಬಹುದಾದ ಉತ್ಕೃಷ್ಟ ಉತ್ಪಾದನಾ ಸಾಮರ್ಥ್ಯ ಮತ್ತು ಶ್ರಮ ಶಕ್ತಿಯನ್ನು ಒಂದು ಅಗ್ಗದ ಸರಕಾಗಿ 3 ಕಾಸಿಗೆ ವಿಕ್ರಯಿಸಿ ಬದುಕಬೇಕಾದಂತಹ ದಾಸ್ಯ ಸಂಕೋಲೆಗಳಿಂದ ಪಾರಾಗುವುದಕ್ಕೆ ಅನೇಕ ಪ್ರಯತ್ನಗಳನ್ನು ನಡೆಸಿ ಜಯಗಳಿಸಿ ದೀರ್ಘ ಕಾಲ ಉಳಿಸಿ ಬೆಳೆಸಿ ಭವ್ಯವಾದ ಸಮಾಜವಾದಿ ವ್ಯವಸ್ಥೆಯೊಂದನ್ನು ಕಟ್ಟಿ ಬೆಳೆಸಿ ಹಿಟ್ಲರ್ ನಂಥಹ ಪಿಶಾಚಿಯೊಂದನ್ನು ನಿರ್ಮೂಲನಗೊಳಿಸಿ ಜಾಗತಿಕ ಜಯದ ಹಂತಕ್ಕೆ ತಲುಪಿದ್ದನ್ನು ಇಂದು ನಾವು ನೆನಪಿಸಿಕೊಳ್ಳಬೇಕು. ವಿಶ್ವಕಾರ್ಮಿಕರು ಒಗ್ಗಟ್ಟಾಗಿ ಸಮಾಜವಾದಿ ವ್ಯವಸ್ಥೆಯನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ಒಂದಾಗಿ ಮಾನವನ ಇರವು ಅರಿವುಗಳು  ಹೋರಾಟದ ಕೆಂಬಾವುಟವಾಗಿ ನಭೋಮಂಡಳದಲ್ಲಿ ಎಂದೆಂದಿಗೂ ಹಾರಾಡುತ್ತಿರುವಂತೆ ಮಾಡುವ ಗುರಿಯನ್ನು ನಮ್ಮದಾಗಿಸೋಣವೇ ಎಂಬ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಬೇಕಾಗಿದೆ. ನಮ್ಮೊಳಗಿನ ಕಚ್ಚಾಟದಿಂದ ಕೈ ಕೊಡವಿ ದಾಸ್ಯ ಸಂಕೋಲೆಗೆ ಹತ್ತು ಹಲವು ನಾಮಗಳ ಪಟ್ಟಿಗಳನ್ನು ಬೆಸೆಯುವುದರಲ್ಲಿ ತೃಪ್ತಿ ಗೊಂಡು ಸಾಗುತ್ತಿರುವ ದುರವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಯಾವುದು 224 ನೆಯ ಶಿಕಾಗೋ ಹೋರಾಟದ ಸಂಸ್ಮರಣೆಯ ದಿನಾಚರಣೆಯ ಆಯ್ಕೆ ಎಂಬ ಪ್ರಶ್ನೆ ಇಂದು ನಮ್ಮನ್ನು ದಿಟ್ಟಿಸಿ ನೋಡುತ್ತಿದೆ. ಈ ಕಿರು ಬರಹದಲ್ಲಿ ಅದನ್ನು ಸಮರ್ಪಕವಾಗಿ ಮತ್ತು ಸವಿಸ್ತಾರವಾಗಿ ನಿರೂಪಣೆ  ಮಾಡುವ ಸಾಹಸ ಇದು ಆಗಲಾರದು. ಅದರ ಒಂದು ಕಿರು ಇಣುಕು ನೋಟ ಮಾತ್ರ ಇದಾಗಬಹುದೇನೋ.

2010 ರ ಈ ವರ್ಷದ ಮೇ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಂಘಟಿತ ಕಾರ್ಮಿಕ ವರ್ಗವು ಬೆಲೆ ಏರಿಕೆಯ ವಿರುದ್ದ ಮತ್ತು ಬೆಲೆ ಏರಿಕೆಯನ್ನು ಸರಿದೂಗಿಸುವ ಕನಿಷ್ಠ ವೇತನ ಸಹಿತ ತುಟ್ಟಿ ಭತ್ತೆಯ ಹಕ್ಕನ್ನು ಎಲ್ಲ ಶ್ರಮಜೀವಿಗಳು ಪಡೆಯುವಂತೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾರ್ಯ ತಂತ್ರ ರೂಪಿಸೋಣ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಎಲ್ಲ ಹಕ್ಕುಗಳನ್ನು, ಸೌಲಭ್ಯಗಳನ್ನು ಕಾರ್ಯತ: ಇನ್ನೂ ಪಡೆಯದ ವಿಭಾಗದ ಜನರನ್ನು ಸಂಘಟಿತ ಕಾರ್ಮಿಕ ವಲಯವನ್ನಾಗಿ ಹೋರಾಟಕ್ಕೆ ಇಳಿಸುವುದು ಇಂದಿನ ರಾಷ್ಟೀಯ ಕಾರ್ಮಿಕ ಸಂಘಟಣೆಗಳ ಅಂಗೀಕೃತ ಕರ್ತವ್ಯವಾಗಿದೆ. ಶ್ರಮಜೀವಿಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಇದ್ದಾರೆ. ಅವರು ಮಹಿಳೆಯಾಗಿ ಮಾತ್ರವಲ್ಲ ಶ್ರಮಜೀವಿಗಳಾಗಿಯೂ ಎಲ್ಲ ಬಗೆಯ ಮಾನವೀಯ ಹಕ್ಕುಗಳ ಸೌಲಭ್ಯಗಳ ಗಳಿಕೆಗೂ ಅರ್ಹರಾಗಿದ್ದಾರೆ. ಅವರ ಪೋಷಣೆ, ರಕ್ಷಣೆ, ಸಬಲೀಕರಣ ಇತ್ಯಾದಿಗಳು ಇಂದು ಕಾರ್ಮಿಕ ಸಂಘಟಣೆಗಳ ಚಳುವಳಿಗಳ ಆದ್ಯ ಕರ್ತವ್ಯವೆನಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಪೌಷ್ಟಿಕ ಹಾಗೂ ಸಾಕಷ್ಸ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುವ ಆಹಾರ ಪೂರೈಕೆಯ ಭದ್ರತೆಯು ಇಂದು ಸರಕಾರದ ಕೃತಕ ಬಿಪಿಯಲ್, ಯೆಪಿಯಲ್ ರೇಖೆಗಳಿಂದ ವಿರಹಿತವಾಗಿ ದುಡಿಯುವವರಿಗೆಲ್ಲರಿಗೂ ಕ್ರಮಬದ್ದವಾದ ಪೂರೈಕೆಯ ಹಕ್ಕನ್ನು ಇಂದಿನ ಆಡಳಿತಗಾರರು ಯಾವ ಸಬುಬೂ ನೀಡದೆ ಅನುಸರಿಸಬೇಕಾಗಿದೆ. ಕೊನೆಯದಾಗಿ ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ. ಪ್ರಸ್ತುತ ಮೇ ದಿನ ಈ ದಿಸೆಯಲ್ಲಿ ನಮಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವಂತಾಗಲಿ.