ಉರುಳು ಸೇವೆಯ ಬದಲಿಗೆ ಜನಸೇವೆ ಮಾಡಿ

[dropcap]ಕಾಂ[/dropcap]ಗ್ರೆಸ್ ಅಧ್ಯಕ್ಷೆ  ಶ್ರೀಮತಿ ಸೋನಿಯಾ ಗಾಂಧಿ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪರಿಣತ ತಜ್ಞರ ಚಿಕಿತ್ಸೆಯನ್ನು ಪಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರಲ್ಲಿ ಸದ್ಭಾವನೆಯುಳ್ಳವರೆಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂಬ ಕಳಕಳಿಯನ್ನು ಹೊಂದಿರುವುದೂ ಪ್ರಕಟವಾಗಿದೆ. ಅದು ಸಹಜವೂ ಹೌದು. ಅಮೆರಿಕಾದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಾಗಲಿ, ಚಿಕಿತ್ಸೆಯನ್ನು ನೀಡುವ ವೈದ್ಯರಾಗಲಿ ಯಾವುದೇ ದೇವಾಲಯಗಳಲ್ಲಿ, ಇಗರ್ಜಿ, ಮಸೀದಿಗಳಲ್ಲಿ ಯಾವುದೇ ತರದ ಹರಕೆಯನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡಿಕೊಂಡ ವರದಿ ಪ್ರಕಟವಾಗಲಿಲ್ಲ. ವೈದ್ಯರು ವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಮಾತ್ರ ಅನುಸರಿಸಿ ಸೋನಿಯಾ ಗಾಂಧಿಯವರನ್ನು ಗುಣಪಡಿಸಲು ತಮ್ಮ ಶಕ್ತಿ ಮೀರಿ ವೈಜ್ಞಾನಿಕ ಕ್ರಿಯೆಗಳಲ್ಲಿ ಮಗ್ನರಾಗಿದ್ದಾರೆ.

ಆದರೆ ಸೋನಿಯಾ ಗಾಂಧಿಯವರು ಗುಣಮುಖರಾಗುವಂತೆ ನಮ್ಮಲ್ಲಿಯ ಕೆಲವು ದೇವಾಲಯಗಳಲ್ಲಿ ಉರುಳು ಸೇವೆ ನಡೆಸುವ ಹಾಸ್ಯಾಸ್ಪದ ಮತ್ತು ನಾಟಕೀಯ ಕ್ರಿಯೆಗಳು ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಮುಖ್ಯವಾಗಿ ಮಾಜೀ ಸಂಸತ್ ಸದಸ್ಯ ಮತ್ತು ಚುನಾವಣೆಗಳಲ್ಲಿ ಸೋತು ಈಗ ಬಹುತೇಕ ಮೂಲೆಗುಂಪಾಗಿರುವ ಜನಾರ್ಧನ ಪೂಜಾರಿಯವರು ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಇತರ ದೈವದೇವರುಗಳಿಗೆ ಪ್ರಾರ್ಥಿಸಿ, ಉರುಳು ಸೇವೆಯನ್ನು ಆರಂಭಿಸಿದ್ದಾರೆ. ಇದರ ಹಿಂದೆ ಸೋನಿಯಾ ಗಾಂಧಿಯವರು ಗುಣಮುಖರಾಗಬೇಕೆಂಬ ಕಾಳಜಿಗಿಂತಲೂ ತಮ್ಮ ರಾಜಕೀಯ ಪುನರುಜ್ಜೀವನಕ್ಕೆ ಈ ಸಂದರ್ಭವನ್ನು  ಬಳಸಿಕೊಳ್ಳುವ ಪ್ರಯತ್ನವು ಕಾಣುತ್ತಿದೆ. ಇವರಿಗೆ ಹಿಂದೆ ಜೆಡಿಯಸ್‌ನಲ್ಲಿ ಇದ್ದು ಅಲ್ಲಿ ಬೇಳೆ ಬೇಯಿಸಲಾಗದೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡು ಗುರುತಿಸಿಕೊಳ್ಳಲು ಹವಣಿಸಿ ಪ್ರಚಾರ ಮತ್ತು ಒಲವು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿರುವ ಐವನ್ ಡಿಸೋಜರೂ ಸಾಥ್ ನೀಡಿದ್ದಾರೆ. ಅಲ್ಲದೆ ಇತರ ಕೆಲವು ಚೇಲಗಳನ್ನೂ ಸೇರಿಸಿ ಉರುಳಿದ್ದಾರೆ. ಶಾಸಕ ಯುಟಿ ಖಾದರ್‌ರವರೂ ಜತೆಗಿದ್ದು ಕಾರ್ಯಗಳಿಗೆ ಮೆರಗು ನೀಡಿದ್ದಾರೆ. ರಾಜಕಾರಣವನ್ನು ಯಾವುದೇ ಧರ್ಮದ ಹರಕೆಯಿಂದ ಸಾಧಿಸುವ ಮನೋಧರ್ಮವನ್ನು ಅನ್ಯಧರ್ಮೀಯರು ಹೇಗೆ ಸಮರ್ಥಿಸುವರೋ ತಿಳಿಯದು.

ಮೂಢನಂಬಿಕೆಗಳನ್ನು ಇನ್ನೂ ಪ್ರಮಾಣಿಕವಾಗಿ ಬಳಕೆಮಾಡುವ ಅವಿದ್ಯಾವಂತ, ಬಡ ಜನ ಸಮುದಾಯದವರು ಅನುಸರಿಸಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು, ರಾಜಕೀಯ ಕಾರ್ಯಕರ್ತರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮೂಢ ಕಾರ್ಯಾಚರಣೆಗಳ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣುವಾಗ ಅಸಹ್ಯವೆನಿಸುತ್ತದೆ, ಅದು ಅಕ್ಷಮ್ಯವಾಗುತ್ತದೆ. ಜನಾರ್ಧನ ಪೂಜಾರಿಯವರ ಮೊದಲನೆಯ ಪಾರ್ಲಿಮೆಂಟರಿ ಚುನಾವಣೆಯಿಂದ ತೊಡಗಿ ಕೊನೆಯ ಸೋಲಿನ ತನಕ ಕೂಲಂಕಶವಾಗಿ ಅಧ್ಯಯನ ಮಾಡಿ ತಿಳಿದುಕೊಂಡಿರುವ ನಮ್ಮಂಥವರಂತೂ ಅವರ ಈ ವರ್ತನೆಯನ್ನು ಖಂಡಿಸದೆ ಬಿಟ್ಟರೆ, ಮೂಢನಂಬಿಕೆಗೆ ಚಾಲನೆ ನೀಡುವ ಇಂತಹ ಆಟಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದರೆ ಅದಕ್ಕೆಲ್ಲ ಪರೋಕ್ಷ ಪ್ರೋತ್ಸಾಹ ನೀಡಿದಂತಾದೀತು. ಇನ್ನಾದರೂ ಇಂಥಾ ಮೂಢ ಕಾರ್ಯಾಚರಣೆಗಳ ಮೂಲಕ ಪ್ರಚಾರಪ್ರಿಯತೆಗೆ ಹವಣಿಸದೆ, ನೇರ ಮಾರ್ಗಗಳಲ್ಲಿ ಜನಪರ ಕಾರ್ಯಗಳನ್ನು ಕೈಗೆತ್ತಿ ಬಡಜನರ ಮೌಢ್ಯತೆಯನ್ನು ಹೋಗಲಾಡಿಸುವಂಥಾ ಕಾರ್ಯ ವೈಖರಿಯನ್ನು ರೂಪಿಸಿಕೊಂಡು ಕಾರ್ಯನಿರತರಾಗುವರೆಂದು  ಹಾರೈಸುತ್ತೇವೆ.