ಬಿನಾಯಕ್ ಸೆನ್ ಅವರನ್ನು ಬೆಂಬಲಿಸಿ

[dropcap]ಮಾ[/dropcap]ನವ ಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್‌ಸೇನ್ ಅವರಿಗೆ ಚತ್ತೀಸ್‌ಘಡ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದುದಕ್ಕೆ ವಿರುದ್ದವಾಗಿ ದೇಶದಾದ್ಯಂತ ಖಂಡನೆಗಳು ವ್ಯಕ್ತವಾಗಿವೆ. ಈ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿಯನ್ನು ಉಚ್ಛ ನ್ಯಾಯಾಲಯವೂ ತಿರಸ್ಕರಿಸಿತ್ತು. ಆ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಅವರು ನೀಡಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಅವರಿಗೆ ಜಾಮೀನು ನೀಡಿದೆ ಮಾತ್ರವಲ್ಲದೆ ಅವರು ಯಾವುದೇ ದೇಶದ್ರೋಹದ ಕೆಲಸವನ್ನು ಮಾಡಿರುವುದು ತೋರುವುದಿಲ್ಲ ಎಂದು ಪರಿಗಣಿಸಿ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆಜ್ಞಾಪಿಸಿರುವುದು ಮಾನವ ಹಕ್ಕುಗಳ ಹೋರಾಟಗಾರರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿನಾಯಕ್‌ಸೇನ್ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದಕ್ಕೆ ಮತ್ತು ತನ್ನ ಬಿಡುಗಡೆಗೆ ಮಾನವ ಹಕ್ಕುಗಳ ಸಂರಕ್ಷಣೆಗೆ ತಾವು ನಡೆಸಿದ ಹೋರಾಟದ ಸಲುವಾಗಿ ತನಗೆ ದ.ಕೋರಿಯಾ ಸರಕಾರವು ನೀಡಿದ  ಪ್ರತಿಸ್ಠಿತ ಗ್ವಾಂಗ್ಜು ಪ್ರಶಸ್ತಿಯನ್ನು ಸ್ವೀಕರಿಸುವ ಸಂಧರ್ಭದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ನರಮೇಧ ಹಾಗೂ ಮಾನವ ಹಕ್ಕುಗಳ ದಮನದ ಬಗ್ಗೆ ತನ್ನ ಅನುಭವದ ಕಹಿ ಅನಿಸಿಕೆಗಳನ್ನು ವಿವರಿಸುತ್ತಾ ಮಾಡಿದ್ದ ಭಾಷಣವು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಓದಿರುವೆವು.

ಅವರು ಮಾಡಿದ್ದಾದರೂ ಏನು? ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರುವ ಹಾಗೆ ಮಾಡಲು ಪ್ರಭುತ್ವವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕೈಜೋಡಿಸಿ ಗಣಿಗಾರಿಕೆಗೆ ಅರಣ್ಯಭೂಮಿಯನ್ನು ನೀಡಿ ಶತಮಾನಗಳಿಂದ ಅಲ್ಲಿ ವಾಸಮಾಡಿಕೊಂಡಿದ್ದ  ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡು ನಿರ್ವಸಿತರನ್ನಾಗಿ ಮಾಡಿರುವುದನ್ನು ವಿರೋಧಿಸುವವರೊಡನೆ ಕೈ ಜೋಡಿಸಿದ್ದಾಗಿದೆ. ನಗರದಲ್ಲಿ ಸಿಗಬಹುದಾದ ಐಶಾರಾಮಿ ಬದುಕನ್ನು ನಿರ್ಲಕ್ಷಿಸಿ ಎಲ್ಲಾ ನಾಗರಿಕ ಸೌಕರ್ಯಗಳಿಂದ ವಂಚಿತರಾದ ಅರಣ್ಯವಾಸಿಗಳಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಅವರ ಸಾವು ನೋವುಗಳಿಗೆ ಸ್ಪಂದಿಸುತ್ತಾ ಅವರ ಹಕ್ಕುಗಳ ಅರಿವನ್ನು ಅವರಿಗೆ ನೀಡುತ್ತಾ ಅವರೊಂದಿಗೆ ಬದುಕಿರುವುದೇ ಅಗಿದೆ. ಅವರ ಆ ಉದಾತ್ತ ಸೇವೆಗೆ ಪ್ರಭುತ್ವದಿಂದ  ಅವರಿಗೆ ದಕ್ಕಿದ ಪುರಸ್ಕಾರ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾವೋವಾದಿ, ದೇಶದ್ರೋಹಿ ಎಂದು ಪರಿಗಣಿಸಿ ಜೀವಾವಧಿ ಜೈಲು ಶಿಕ್ಷೆ! ಇಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಬಣ್ಣಿಸಿ ದಮನಿಸುವ ಕಾರ್ಯ ವೈಖರಿಯನ್ನು ಭಾರತದಿಂದ ತೊಡೆದು ಹಾಕಬೇಕೆಂದು ದೇಶದಾದ್ಯಂತ ಪ್ರಗತಿಪರ ಸಾರ್ವಜನಿಕ ಸಂಘಸಂಸ್ಥೆಗಳು, ಎಡಪಕ್ಷಗಳು ಚಳುವಳಿಯನ್ನು ಕೈಗೆತ್ತಿಗೊಳ್ಳಬೇಕೆಂದು ನಾವು ಹಾರೈಸುತ್ತೇವೆ.