ಉತ್ಸವಗಳ ಅಬ್ಬರಕ್ಕಿಂತ ಅವಶ್ಯಕತೆಗಳ ಈಡೇರಿಕೆಗೆ ಸರಕಾರ ಗಮನ ಹರಿಸಲಿ: ಸರಕಾರಿ ಖಜಾನೆ ದೇಶದ ಆಸ್ತಿ, ಖಾಸಗಿ ಸೊತ್ತು ಅಲ್ಲ.

ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ: 28 ಜನವರಿ 2010)

ಇಂದು ಕರ್ನಾಟಕದಲ್ಲಿ ದಿನನಿತ್ಯ ಒಂದಲ್ಲ ಒಂದು ಊರಲ್ಲಿ ಒಂದಲ್ಲ ಒಂದು ಹೆಸರಲ್ಲಿ ಜನಮರುಳೋ ಜಾತ್ರೆ ಮರುಳೋ ಎಂಬಂಥ ನಿತ್ಯೋತ್ಸವಗಳು ನಡೆಯುತ್ತಿರುತ್ತವೆ. ಈ ಅಬ್ಬರಗಳು ನಿತ್ಯೋತ್ಸವ ತಾಯೇ ನಿತ್ಯೋತ್ಸವ ಎಂದು ನಿಸ್ಸಾರ್ ಅಹ್ಮ್‌ದ್‌ರವರು ಎದೆ ತುಂಬಿ ಹಾಡಿರುವ ಕನ್ನಡ ನಾಡಿನ ಸಹಜ ನಿತ್ಯೋತ್ಸವಗಳಲ್ಲ. ಈ ನಿತ್ಯೋತ್ಸವಗಳು ಅಧಿಕಾರ ಗಳಿಸಲಿಕ್ಕೆ ಮತ್ತು ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವುದಕ್ಕೆ ಆಳುವವರು ಸರಕಾರಿ ವೆಚ್ಚದಲ್ಲಿ ನಡೆಸುವಂಥಹ ಕೃತಕ ಉತ್ಸವಗಳಾಗಿವೆ. ಈ ಉತ್ಸವಗಳು ನಿಜವಾಗಿ ಹಿಂದೆ ಎಂದೋ ಒಂದು ಕಾಲದಲ್ಲಿ ಇದ್ದಂತಹ ಗತ ವೈಭವಗಳೆಂಬ ಬರೇ ಕಲ್ಪನೆಗಳ ಕೃತಕ ಮನರಂಜನೆಯ ಆಡಂಬರಗಳಾಗಿವೆ. ಉಜಿರೆಯ ತುಳುವರ ಉತ್ಸವ ಎಂಬ ಹೆಸರಲ್ಲಿ ವರ್ಣಭೇಧ, ಜಾತಿ ಬೇಧ, ಶ್ರೀಮಂತಿಕೆಯ ಕಾಲ್ಪನಿಕ ವೈಭವ ಇವುಗಳ ಪ್ರದರ್ಶನ ನಡೆಯಿತು. ಅದಕ್ಕೆ ಸರಕಾರದ ಬೊಕ್ಕಸದಿಂದ ನಮಗೆ ಗೊತ್ತಿರುವಂತೆ ಒಂದು ಕೋಟಿ ರೂ. ದೇಣಿಗೆ ಸಂದಿತು. ಅದರ ಮರುದಿನವೇ ಉಡುಪಿಯಲ್ಲಿ ಹಿಂದೂ ಧರ್ಮದ ಒಂದು ಪಂಥದ ಪ್ರಚಾರಕ್ಕೋಸ್ಕರ ನಡೆಯುವ ಪರ್ಯಾಯ ಉತ್ಸವಕ್ಕೆ ಧರ್ಮ ನಿರಪೇಕ್ಷ ಪ್ರಭುತ್ವ ಎಂದುಕೊಳ್ಳುವ ಸರಕಾರದ ಖಜಾನೆಯಿಂದ ಐದು ಕೊಟಿಯಷ್ಟು ಸಂದಿತು ಮತ್ತು ಐವತ್ತು ಕೋಟಿಯ ದೇಣಿಗೆಯ ಭರವಸೆ ಪ್ರಕಟವಾಯ್ತು. ಅದು ಮುಗಿಯುವಷ್ಟರೊಳಗೆ ವಿಜಯನಗರ ಸಾಮ್ರಾಜ್ಯದ ಒಬ್ಬ ಧೀರ ಹಾಗೂ ಧೀಮಂತ ಅರಸನ ಪಟ್ಟಾಭಿಷೇಕದ 500 ವರ್ಷಗಳ ಪುನಾರಾವರ್ತನೆಯ ಉತ್ಸವಕ್ಕೆ ಪ್ರಕಟವಾಗಿರುವಂತೆ 13 ಕೋಟಿ ರೂ.ಗಳು ಸಂದಿವೆ. ಹಂಪಿಯ ಪುನರುಜ್ಜೀವನ ಮತ್ತು ಅಭಿವೃಧ್ದಿಗೆ ಮತ್ತು ಸ್ಮಾರಕಗಳ ಪುನರ್ನಿರ್ಮಾಣಕ್ಕೆ ಯೋಜನಾಬದ್ದವಾಗಿ ಆಗಬೇಕಾದ ಖರ್ಚು ಆಗುವುದರಲ್ಲಿ ಆಕ್ಷೇಪವಿಲ್ಲ. ಅವುಗಳು ಜನರ ಮತ್ತು ರಾಜ್ಯದ ಅಮೂಲ್ಯ ಸಾಂಸ್ಕೃತಿಕ ಸ್ಮರಣಿಕೆಗಳಾಗಿ ಉಳಿಯುತ್ತವೆ. ಆದರೆ ಶ್ರೀಕೃಷ್ಣ ದೇವರಾಯರು ಎಷ್ಟೇ ಸ್ಮರಣೀಯರಾದರೂ ಸಹಾ  ಅವರ ಪಟ್ಟಾಭಿಶೇಕದ ಮಹೋತ್ಸವದ ಹೆಸರಲ್ಲಿ ಜನ ಜಾತ್ರೆ ನಡೆಸುವುದು ದುರ್ವ್ಯಯ ಅಲ್ಲದೆ ಮತ್ತೇನಲ್ಲ. ಹಳೆಯ ಕಾಲದ ಅನೇಕ ಅರಸೊತ್ತಿಗೆಗಳು, ಅರಸೊತ್ತಿಗೆಗಳ ಮೇಲಿನ ಸಾಮ್ರಾಜ್ಯಾಧಿಪತಿಗಳು ಕರ್ನಾಟಕದಲ್ಲಿ ಆಗಿ ಹೋಗಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ಯುರೋಪಿನ ವ್ಯಾಪಾರಿ ಬಂಡವಾಳಿಗರು ಭಾರತಕ್ಕೆ ಬಂದು ಇಲ್ಲಿನ ಆಳುವವರ ಒಳಜಗಳದಲ್ಲಿ ಒಳ ನುಸುಳಿ ಇಡೀ ದೇಶವನ್ನೇ ತಮ್ಮ ವಸಾಹತನ್ನಾಗಿ ಮಾರ್ಪಡಿಸಿದ್ದನ್ನು ಜ್ಞಾಪಿಸುವಾಗ ಗತಕಾಲದ ಸಾಮ್ರಾಜ್ಯಗಳ ವೈಭವವನ್ನು ಮೆರೆಸುವುದಕ್ಕಿಂತಲೂ ಅನ್ಯರ ಅಧಿಪತ್ಯಕ್ಕೆ ಈ ದೇಶವನ್ನು ಒಪ್ಪಿಸಿ ತಾವುಗಳು ಆಳರಸರಾಗಿ ರೂಪಾಂತರಗೊಂಡ ಕಥೆ ಆಡಂಬರದಿಂದ  ಆಚರಿಸಬೇಕಾದದ್ದೇನಲ್ಲ. ಅದರ ಬದಲು ಇಲ್ಲಿನ ಉಳುಮೆದಾರರು, ಕುಶಲಕರ್ಮಿಗಳು, ಅರಣ್ಯವಾಸಿಗಳು, ಮೂಲನಿವಾಸಿಗಳು ತಮ್ಮ ನೆಲ, ಜಲ, ನೈಸರ್ಗಿಕ ಸಂಪತ್ತು, ಬದುಕು, ಬಾಳ್ವೆಗಳ ರಕ್ಷಣೆಗೋಸ್ಕರ ಹೋರಾಡಿದಂಥಹ ವೀರಗಾಥೆಯನ್ನು ನೆನಪಿಗೆ ತರುವ ಮಹತ್ಕಾರ್ಯಕ್ಕೆ ಸರಕಾರ ಪ್ರೋತ್ಸಾಹಿಸಿದರೆ ಮತ್ತು ಜನಜಾತ್ರೆ ಗಳನ್ನಾಚರಿಸಿದರೆ ಒಂದು ವೇಳೆ ಸಮಂಜಸವೆನಿಸಬಹುದೇನೋ.

ಸ್ವಾತಂತ್ರ್ಯ ಪಡೆದು ಗಣತಂತ್ರವಾಗಿ ರೂಪು ತಳೆದ ನಮ್ಮ ದೇಶದಲ್ಲಿ ಪರಾಧೀನತೆಯ ಹಾಗೂ ವೈವಿಧ್ಯತೆಗಳನ್ನು ವೈರುಧ್ಯಗಳಾಗಿ ಮಾರ್ಪಡಿಸುವ ಉದ್ದೇಶದಿಂದ ನಡೆಯುವ ಯಾವುದೇ ಜನಮರುಳು ಕಾರ್ಯಕ್ರಮಗಳು ದೇಶಕ್ಕೆ ದಾಸ್ಯವನ್ನು ಪುನ: ತಂದುಕೊಳ್ಳುವ ದೊಂಬರಾಟವಾಗುತ್ತದೆ ಎಂಬುದು ಅಧಿಕಾರದ ಲಾಲಸೆಯ ಆಳುವ ಪಕ್ಷಗಳಿಗೆ ಗೊತ್ತಿರಬೇಕು.

ಪ್ರತ್ಯೇಕವಾಗಿ 2010 ನೇ ವರ್ಷದ ಗಣತಂತ್ರೋತ್ಸವದ ಸಂದರ್ಭದಲ್ಲಿ ಆಳುವವರಿಂದ ನಾವು ಸಾಮಾನ್ಯ ಜನರು ನಿಜವಾಗಿ ನಿರೀಕ್ಷಿಸುವುದೇನೆಂದರೆ ನೈಸರ್ಗಿಕ ವಿಕೋಪಗಳಿಗೆ, ಅತಿವೃಷ್ಟಿ, ಅನಾವೃಷ್ಟಿ ಗಳಿಗೆ ಮುಖ್ಯವಾಗಿ ಕರ್ನಾಟಕದಲ್ಲಿ ನೆರೆ ಹಾವಳಿಗೆ ಗುರಿಯಾಗಿ ಅನಾಥ ಸ್ಥಿತಿಯನ್ನು ಅನುಭವಿಸುತ್ತಿರುವ ಜನರ ಕಣ್ಣೀರು ಒರಸುವ ಮತ್ತು ಜೀವ ಉಳಿಸುವ ಹಾಗೂ ಸಂಕಷ್ಟಗಳನ್ನು ನಿವಾರಣೆ ಮಾಡುವ ಯೋಜನೆಗಳನ್ನು ಈಗ ಎಷ್ಟು ಬೇಗ ಪೂರ್ತಿ ಗೊಳಿಸಲಿದ್ದೀರಿ ಎಂಬ ವಿವರಗಳನ್ನು ಸಾರ್ವಜನಿಕರ ಮುಂದೆ ಸಾಕ್ಷಾಧಾರಗಳ ಮತ್ತು ಅಂಕೆ-ಸಂಖ್ಯೆಗಳ ಮೂಲಕ ಪ್ರಕಟಿಸುವುದು ಇಂದಿನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಲು ಇಚ್ಹಿಸುತ್ತೇವೆ. ಆದು ಕೈಲಾಗದಿದ್ದರೆ ತೊಲಗಬೇಕಾಗುತ್ತದೆ ಅಥವಾ ತೊಲಗಿಸಬೇಕಾಗುತ್ತದೆ ಎಂಬ ಎಚ್ಹರಿಕೆಯ ಮಾತುಗಳನ್ನು ಹೇಳಿದರೆ ಕೋಪಿಸಿಕೊಳ್ಳಬಾರದು.