ಮೊದಲ ಪಾರ್ಲಿಮೆಂಟಿನ ಸದಸ್ಯನಾಗಿ ನನ್ನ ಅನುಭವಗಳು

(ಕೃಪೆ: ಹೊಸತು ಮಾಸ ಪತ್ರಿಕೆ, ಜೂನ್ 2012) (ಬರೆದದ್ದು: ಮೇ 18, 2012; ಇದು ಬಿ ವಿ ಕಕ್ಕಿಲ್ಲಾಯರ ಕೊನೆಯ ಲೇಖನ)

[dropcap]ಭಾ[/dropcap]ರತ ಕಮ್ಯೂನಿಸ್ಟ್ ಪಕ್ಷದ, ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರದ ನಿರ್ದೇಶನದಂತೆ ನನ್ನನ್ನು ಮದ್ರಾಸ್ ಎಸೆಂಬ್ಲಿಯಿಂದ 1952ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ನನ್ನ ವಯಸ್ಸು ಮೂವತ್ತ ಮೂರು ವರ್ಷಗಳು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ದೃಢವಾದ ನಂಬಿಕೆಯಿದ್ದ ಪಂಡಿತ್ ಜವಾಹರಲಾಲ್ ನೆಹರೂರವರು ಪ್ರಧಾನಿಯಾಗಿಯೂ, ಮಹಾನ್ ವಿದ್ವಾಂಸರಾಗಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ ಉಪರಾಷ್ಟ್ರಪತಿಗಳೂ, ರಾಜ್ಯಸಭೆಯ ಸಭಾಪತಿಗಳೂ ಆಗಿದ್ದ ಆ ಸಂದರ್ಭದಲ್ಲಿ ಆ ಸದನದ ಸದಸ್ಯನಾದುದು ಯುವಕನಾಗಿದ್ದ ನನ್ನಂತಹವನೊಬ್ಬನಿಗೆ ಪಕ್ಷವು ಒದಗಿಸಿದ ಸದವಕಾಶವೇ ಆಗಿತ್ತು. ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ನನಗೆ ರಾಜ್ಯ ಸಭೆಯ ಸದಸ್ಯತ್ವವನ್ನು ನೀಡಲಾಗಿದ್ದುದರಿಂದ ನಾನು ರಾಜ್ಯ ಸಭೆಯಲ್ಲಿ ಓರ್ವ ಕನ್ನಡಿಗನಾಗಿ ಆ 2 ವರ್ಷಗಳ ಕಾಲಾವಧಿಯನ್ನು ಸದುಪಯೋಗ ಪಡಿಸಿಕೊಂಡಿರುವೆನೆಂಬ ತೃಪ್ತಿಯು ನನಗಿದೆ. ಆ ಎರಡು ವರ್ಷಗಳಲ್ಲಿ ರಾಜ್ಯದ ಬರಗಾಲದ ಬಗ್ಗೆ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯಿಸಿ ವಿವಿಧ ಚರ್ಚೆಗಳಲ್ಲಿ ನಾನು ಭಾಗವಹಿಸಿದ್ದೆ. ರಾಜ್ಯದ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿಯೂ, ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದಲೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆ; ಬರ ಪರಿಹಾರವನ್ನು ಒತ್ತಾಯಿಸುವುದಕ್ಕಾಗಿ, ಆಹಾರ ಪೂರೈಕೆಯನ್ನು ಉತ್ತಮ ಪಡಿಸಬೇಕೆಂದು ಒತ್ತಾಯಿಸುವುದಕ್ಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಪಕ್ಷವು ಸಂಘಟಿಸಿದ್ದ ಚಳುವಳಿಗಳಲ್ಲೂ ನಾನು ಭಾಗವಹಿಸಿದ್ದೆ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್ ಕೆ ಉಪಾಧ್ಯಾಯ ಮತ್ತು ಸಂಗಡಿಗರೊಂದಿಗೆ ರಾಜ್ಯದಾದ್ಯಂತ ಪ್ರವಾಸಗೈದ ಆ ಅನುಭವವು ಮರೆಯಲಾಗದ್ದು.

ಹಿಂದಿಯ ಮತ್ತು ಆಂಗ್ಲಭಾಷೆಯ ಜ್ಞಾನವಿರದ, ಮಲೆಯಾಳಿ ಭಾಷೆಯನ್ನು ಮಾತ್ರ ಮಾತನಾಡಬಲ್ಲ ನಮ್ಮ ಪಕ್ಷದ ಸದಸ್ಯರೊಬ್ಬರು ಮದ್ರಾಸ್ ಎಸೆಂಬ್ಲಿಯಿಂದಲೇ ಚುನಾಯಿತರಾಗಿ ರಾಜ್ಯ ಸಭೆಯಲ್ಲಿದ್ದರು. ಅಧ್ಯಕ್ಷರ ಅನುಮತಿಯನ್ನು ಕೋರಿ, ತನ್ನ ವಿಷಯಗಳನ್ನು ಮಂಡಿಸುತ್ತಾ ಮಲೆಯಾಳಿ ಭಾಷೆಯಲ್ಲಿ ಅವರು ಮಾಡಿದ್ದ ಭಾಷಣವನ್ನು ನಾನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದೆನು. ಆ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್‘ರವರು ಸಭಾಧ್ಯಕ್ಷರಾಗಿಯೂ, ಪಂಡಿತ್ ಜವಾಹರಲಾಲ್ ನೆಹರೂರವರು ಸಭಾನಾಯಕರಾಗಿಯೂ ಸಭೆಯಲ್ಲಿ ಉಪಸ್ಥಿತರಾಗಿದ್ದರು. ನೆಹರೂರವರು ನನ್ನ ಆಂಗ್ಲ ಭಾಷಣದ ಧಾಟಿಯನ್ನೂ, ಮಂಡಿಸಿದ ಬೇಡಿಕೆಗಳ ವಿವರಣೆಗಳ ಕ್ರಮವನ್ನೂ ಕೇಳಿ ಅವರ ಭಾಷಣದಲ್ಲಿ ನನ್ನ ಕೃತ್ಯಕ್ಕೆ ಮುಕ್ತ ಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಮ್ಮ ಕೋರಿಕೆಗೆ ಅವರ ಒಪ್ಪಿಗೆಯನ್ನು ಸೂಚಿಸಿದ್ದರು. ಇದು ನನಗೆ ದೊರೆತ ಅಪೂರ್ವ ಸುಸಂಧರ್ಭವೆಂದು ನಾನು ಭಾವಿಸುತ್ತೇನೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ನಾನು ಕಾಂಗ್ರೆಸೇತರರು ಸಂಘಟಿಸಿದ್ದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ (ಅಕರಾನಿಪ) ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವೆನು. ಹುಬ್ಬಳ್ಳಿಯಲ್ಲಿ ಅಕರಾನಿಪ ಸದಸ್ಯರು ಹಮ್ಮಿ ಕೊಂಡಿದ್ದ ಒಂದು ಚಳುವಳಿಯನ್ನು ಅಲ್ಲಿನ ಕಾರ್ಯಕರ್ತರು ಬೃಹತ್ ಚಳುವಳಿಯಾಗಿ ನಡೆಸಿದ ಸಂದರ್ಭದಲ್ಲಿ,  ಸಮಿತಿಯ ಮುಖ್ಯ ಸಂಘಟಕರಾಗಿದ್ದ ಸಿಪಿಐ ನಾಯಕ ಎ ಜೆ ಮುಧೋಳ್ ಮತ್ತಿತರ  ಹಲವಾರು ಸದಸ್ಯರನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಮೂಲಕ ವಿಷಯವನ್ನು  ಮಂಡಿಸಿ ಬಂಧಿತರಾಗಿದ್ದ ಎಲ್ಲರ ಬಿಡುಗಡೆ ಮತ್ತು ಕರ್ನಾಟಕ ಏಕೀಕರಣಕ್ಕೆ ಸಹಾನುಭೂತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದೆನು. ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸುತ್ತಾ ಕೇರಳದವನಾಗಿ ಪರಿಚಯಿಸಿಕೊಳ್ಳುವ ಅಭಿಲಾಷೆಯನ್ನು ನಾನು ಎಂದೂ ಪ್ರಕಟಿಸಿರಲಿಲ್ಲ. ನನ್ನ ಪಕ್ಷವು ಸಹಾ ನನ್ನನ್ನು ಒಬ್ಬ ಕರ್ನಾಟಕದ ಕಾರ್ಯಕರ್ತನೆಂದು ಪರಿಗಣಿಸಿತ್ತಲ್ಲದೆ ಬೇರಾವುದೇ ಭಾಷೆ, ಯಾ ಪ್ರಾಂತ್ಯಕ್ಕೆ ಸೇರಿದವನೆಂದು ಪರಿಗಣಿಸಿರಲಿಲ್ಲವಾದ್ದರಿಂದ ನಾನು ಇಂದಿಗೂ ಕರ್ನಾಟಕದವನಾಗಿಯೇ ಉಳಿದಿದ್ದೇನೆ.