ಅದ್ವಾನಿಯ ರಥಯಾತ್ರೆಯ ಪ್ರಹಸನ

[dropcap]ಆ[/dropcap]ಪರೇಶನ್ ಕಮಲದ ಮೂಲಕ ಅಧಿಕಾರದ ಪೀಠವನ್ನೇರಿದ ಮಾನ್ಯ ಯೆಡ್ಯೂರಪ್ಪನವರು ಏರಿದ್ದ ಪೀಠವನ್ನು ಉಳಿಸಿಕೊಳ್ಳುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ರಾಜ್ಯಪಾಲರು, ಲೋಕಾಯುಕ್ತರು, ನ್ಯಾಯಾಲಯಗಳು ಮುಂತಾದವರನ್ನೆಲ್ಲಾ ಕಡೆಗಣಿಸಿ, ತಮ್ಮ ಅಧಿಕಾರಕ್ಕೆ ಏನೆಲ್ಲಾ ಒಳಪಟ್ಟಿದೆಯೋ ಆ ಎಲ್ಲ ಕ್ರಮಗಳನ್ನು ಕೈಗೊಂಡರೂ ಸಹಾ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತನ್ನ ವರ್ತನೆಗೆ ತಕ್ಕ ಉತ್ತರ ನೀಡಬೇಕಾಗಿದೆ. ಅವರ ಜೊತೆಯಲ್ಲೇ ಅವರ ಮಂತ್ರಿಮಂಡಲದಲ್ಲಿ ಮುಖ್ಯ ಖಾತೆಗಳನ್ನು ವಹಿಸಿಕೊಂಡಿದ್ದ  ಜನಾರ್ಧನ ರೆಡ್ಡಿ ಮತ್ತವರ ಸಂಬಂಧಿ ಶ್ರೀನಿವಾಸ ರೆಡ್ಡಿಯವರು ಕರ್ನಾಟಕದಲ್ಲಿ ಎಷ್ಟು ಹಾರಾಡಿ ಕಣ್ಣ ಮುಚ್ಚಾಲೆ ಆಡಿದರೂ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅವ್ಯವ್ಯವಹಾರಗಳ ತನಿಖೆಗೆ ನೇಮಿಸಲ್ಪಟ್ಟ ಸಿಬಿಐ ತನಿಖಾ ತಂಡದ ಕ್ಷಿಪ್ರ ಕಾರ್ಯಾಚರಣೆಯಿಂದ ಅಕ್ರಮಗಳನ್ನು ಅಡಗಿಸಲಾಗದೆ ಬಂದನಕ್ಕೆ ಒಳಗಾಗಬೇಕಾಯ್ತು. ಅವರ  ಮೇಲಿರುವ ಆರೋಪಗಳು ಗಂಬೀರ ಸ್ವರೂಪದವುಗಳೂ, ಅಪಾರ ಮೊತ್ತದ ಅಂತರರಾಷ್ಟ್ರೀಯ ಅವ್ಯವಹಾರ, ಹವಾಲ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಭಂದಪಟ್ಟವುಗಳೂ ಆದುದರಿಂದ ಜಾಮೀನು ಕೂಡಾ ನಿರಾಕರಿಸಲ್ಪಟ್ಟು ಜೈಲಲ್ಲೇ ಬಹುಕಾಲ  ಬಂದನದಲ್ಲಿರಬೇಕಾಗಿ ಬಂದಿದೆ. ದೇಶದ ಸಂಪತ್ತನ್ನು ದರೋಡೆ ಮಾಡಿ ಚೈನಾ, ಪಾಕಿಸ್ಥಾನ, ಮುಂತಾದ ವಿದೇಶಗಳಿಗೆ ವಿವಿಧ ಬಂದರುಗಳ ಮೂಲಕ ರಫ್ತು ಮಾಡಿ ಆ ಹಣವನ್ನು ವಿವಿಧ ದೇಶಗಳಲ್ಲಿ ಬಚ್ಚಿಡಲಾಗಿದೆ. ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸಹಿತ 6 ವಿದೇಶಿ ಕಂಪೆನಿಗಳನ್ನು ಹೊಂದಿರುವುದು ತಿಳಿದುಬಂದಿದೆ. ಕರ್ನಾಟಕದಲ್ಲೂ ಅಪಾರ ಮೊತ್ತದ ನೈಸರ್ಗಿಕ ಸಂಪತ್ತಿನ ಲೂಟಿ, ಅಕ್ರಮ ಗಣಿಗಾರಿಕೆ, ಅರಣ್ಯ ಕಬಳಿಕೆ, ಜಲ ಸಂಪನ್ಮೂಲದ ದುರುಪಯೋಗ, ಬಡವರ ಆಸ್ತಿಗಳ ಕೊಳ್ಳೆ ಇತ್ಯಾದಿಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ ನಿರ್ಮಿಸಲ್ಪಟ್ಟ ಅರಮನೆಯಂಥಾ ಭವ್ಯ ಬಂಗಲೆ ಮತ್ತು ಅದರೊಳಗೆ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಸ್ವರ್ಣ ಖಚಿತ ಆಸನಗಳು, ಚಿನ್ನ ಬೆಳ್ಳಿ ಒಡವೆ, ಪಾತ್ರೆ ಪಗಡಿಗಳು, ಅನೇಕ ವಿದೇಶಿ ನಿರ್ಮಿತ ಐಷರಾಮೀ ಹೆಲಿಕಾಪ್ಟರು, ಕಾರುಗಳು ಇದ್ದವುಗಳನ್ನು ಸ್ವಾಧೀನಪಡಿಸಲಾಗಿವೆ. ಒಬ್ಬ ಸಾದಾ ಪೋಲೀಸ್ ಪೇದೆಯ ಮಗನಾಗಿದ್ದು ಸೈಕಲಿನಲ್ಲಿ ಓಡಾಡುತ್ತಿದ್ದ ಮತ್ತು ಕೇವಲ ಹೈಸ್ಕೂಲ್ ವಿದ್ಯೆಯನ್ನಷ್ಟೇ ಹೊಂದಿದ ಜನಾರ್ಧನ ರೆಡ್ಡಿ ಮತ್ತು ಅವನ ಸಹೋದರರು ಆರೇಳು ವರ್ಷಗಳ ಅವಧಿಯೊಳಗೆ ಇಷ್ಟೊಂದು ಸಂಪತ್ತನ್ನು ಸಂಪಾದಿಸಿದ್ದುದ್ದಾದರೂ ಹೇಗೆ ಎನ್ನುವುದರ ವಿವರಣೆಯನ್ನು ಅವರು ಕೊಡಬೇಕಿದೆ. ಮಾಜೀ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಮತ್ತು ಅವರ ಸುಪುತ್ರ ಕಟ್ಟಾ ಜಗದೀಶ್ ಕೂಡಾ ಭೂ ಹಗರಣದಲ್ಲಿ ಸದ್ಯಕ್ಕೆ ಜೈಲಲ್ಲೇ ನೆಲೆಯೂರ ಬೇಕಾಗಿದೆ. ಅರಣ್ಯ ಸಚಿವ ಯೋಗೇಶ್ವರ್ ರವರು ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಯೆಡ್ಯೂರಪ್ಪನವರೂ ಬಂಧನದ ಸರದಿಯಲ್ಲಿದ್ದಾರೆ. ಇಷ್ಟೆಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದರೂ ಅವರ ರಕ್ಷಣೆಗೆ ಬಿಜೆಪಿಯ ವರಿಷ್ಠರು ಮುಂದಾಗುತ್ತಿರುವುದು  ಆ ಪಕ್ಷದ ನೀತಿ ನಿಯಮಗಳಿಗೆ ಹಿಡಿದ ಕನ್ನಡಿಯಾಗಿದೆ.

ರಾಂ ದೇವ್‘ರವರನ್ನು ಮುಂದಿರಿಸಿ ವಿದೇಶಿ ಬೇಂಕುಗಳಲ್ಲಿರುವ ಹಣವನ್ನು ವಶ ಪಡಿಸಿಕೊಳ್ಳುವ ನೆಪದಲ್ಲಿ ದೇಶದಾದ್ಯಂತ ಅಶಾಂತಿ ಹುಟ್ಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿ ಅಧಿಕಾರವನ್ನು ಕಬಳಿಸುವ ಹುನ್ನಾರವನ್ನು ಬಿಜೆಪಿ ಹೊಂದಿತ್ತು ಎಂಬುದು ಅವರನ್ನು ಬಂಧಿಸಿದ ಪ್ರಹಸನದಲ್ಲಿ ಬಹಿರಂಗವಾಗಿತ್ತು. ಆ ಬಳಿಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದದ ಚಳುವಳಿಯಲ್ಲಿ ನುಸುಳಿಕೊಂಡು ಅವಕಾಶಕ್ಕಾಗಿ ಹವಣಿಸುತ್ತಿದ್ದುದೂ ಬೆಳಕಿಗೆ ಬಂತು. ಅಧಿಕಾರವಿರುವಲ್ಲೆಲ್ಲ ಮಂತ್ರಿವರ್ಯರ ಮತ್ತು  ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಪಕ್ಷ ಇದೀಗ ಭ್ರಷ್ಟಾಚಾರವನ್ನು ತೊಲಗಿಸುವ ನೆಪದಲ್ಲಿ ಅಧ್ವಾನಿಯವರ ನೇತೃತ್ವದಲ್ಲಿ ರಥಯಾತ್ರೆ ಪ್ರಾರಂಭಿಸುವುದಾಗಿ ಹೇಳುತ್ತಿದೆ. ಅಣ್ಣಾ ಹಜಾರೆಯವರು ಈ ಯಾತ್ರೆಯನ್ನು ಬರೇ ರಾಜಕೀಯ ಗಿಮಿಕ್ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರತು ಪಡಿಸಿ ಇತರ ಯಾವುದೇ ಭ್ರಷ್ಟಾಚಾರ ರಹಿತ ಪಕ್ಷಗಳಿಗೆ ತಾನು ಬೆಂಬಲ ನೀಡುವೆನು ಎಂಬ ಅಣ್ಣಾ ಹಜಾರೆಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ಕಮ್ಯುನಿಷ್ಟ್ ಪಕ್ಷಗಳು ಮತ್ತು ಎಡ ಪಕ್ಷಗಳು ಸಹಕರಿಸಿ ಜನಜಾಗೃತಿಯನ್ನು ಉಂಟುಮಾಡುವ ಅಗತ್ಯವಿದೆ. ಜನಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಾ ನಮ್ಮ ದೇಶವನ್ನು ಇಂದು ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಕೋಮುವಾದ ಪ್ರೇರಿತ ಬಲ ಪಂಥೀಯ ದಾಳಿ ದಬ್ಬಾಳಿಕೆಗಳನ್ನು ವಿಫಲಗೊಳಿಸಲು ಮುಂದಾಗಬೇಕೆಂದು ಅಪೇಕ್ಷಿಸುತ್ತೇವೆ.

ವಾರ್ತಾಭಾರತಿ