ಬಿನಾಯಕ್ ಸೇನ್ ಶಿಕ್ಷೆ ಖಂಡನಾರ್ಹ

ಡಾ. ಬಿನಾಯಕ್ ಸೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ನೀಡಿದ ಪತ್ರಿಕಾ ಪ್ರಕಟಣೆ (ದಿನಾಂಕ: ಜನವರಿ 7, 2011) (ವಾರ್ತಾಭಾರತಿ)

[dropcap]ಚ[/dropcap]ತ್ತೀಸಗಡ ನ್ಯಾಯಾಲಯವು ಇದೇ ಡಿ.24ರಂದು ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಹೋರಾಟಗಾರ ಡಾ.ಬಿನಾಯಕ ಸೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಭಾರತದ ಘನತೆಗೆ ಮತ್ತು ಪ್ರಜಾಪ್ರಭುತ್ವವಾದಿ ನಿಲುಮೆಗೆ ಕಳಂಕ ತರುವಂಥಾದ್ದು ಮತ್ತು ಮಾನವ ಹಕ್ಕು ವಂಚಿತರಾಗಿರುವ ಲಕ್ಷಾಂತರ ಭಾರತೀಯ ಬಡ ಜನರ ಮೇಲೆ ಸರ್ವಾಧಿಕಾರಿ ದಮನ ಕಾರ್ಯ ನಡೆಸುವ ಆಡಳಿತಾಂಗದ ಕ್ರಮಗಳನ್ನು ನ್ಯಾಯಾಂಗವು ಸಹಾ ಸಮರ್ಥಿಸುವಂಥಾಹದ್ದಾಗಿದೆ. ಇದು ಪ್ರಪಂಚದಲ್ಲೇ ಭಾರತದ ಘನತೆ ಗೌರವಗಳಿಗೆ ಕುಂದು ತರುವಂಥದ್ದಾಗಿದೆ. ಇದನ್ನು ನಾವು ಬಲವಾಗಿ ಖಂಡಿಸಬೇಕಾಗಿದೆ.

ಕಮ್ಯುನಿಸ್ಟ್ ಪಕ್ಷದ ಹಿರಿಯ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರ, ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕಾರ್ಮಿಕರ ಒಕ್ಕೂಟದ ಹಿರಿಯ ಉಪಾಧ್ಯಕ್ಷನ ನೆಲೆಯಲ್ಲಿ ಈ ಜೀವಾವಧಿ ಶಿಕ್ಷೆಯನ್ನು ನಾನು  ಖಂಡಿಸುತ್ತೇನೆ. ಈ ಬಗ್ಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕಾರ್ಮಿಕರ ಒಕ್ಕೂಟದ ಕೇಂದ್ರ ಕಾರ್ಯಕಾರಿ ಸಮಿತಿಯು ಒಕ್ಕೊರಳಿನ  ನಿರ್ಣಯವನ್ನು  ಅಂಗೀಕರಿಸಿ ಸರ್ವೋಚ್ಹ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಈಗಾಗಲೇ ಮನವಿಯೊಂದನ್ನು ಅರ್ಪಿಸಿದೆ. ಅಲ್ಲದೆ ಭಾರತದ ಎಲ್ಲ ವಿಚಾರವಾದಿಗಳು ಬಿನಾಯಕ ಸೇನರ ಬಿಡುಗಡೆಯಾಗುವುದು ಭಾರತದ ಪ್ರಜಾಪ್ರಭುತ್ವವಾದಿ ನಿಲುಮೆಗೆ ತಕ್ಕುದ್ದಾಗಿದೆ ಎಂದು ಅಭಿಪ್ರಾಯ ಪ್ರಕಟಿಸುತ್ತಿದ್ದಾರೆ. ಇದೇ ದಿ.21.1.2011 ರಂದು ದ.ಕ.ಜಿಲ್ಲಾಧಿಕಾರಿಯ ಕಛೇರಿಯ ಮುಂದೆ ಸಾರ್ವಜನಿಕ ಸಂಘ ಸಂಸ್ಥೆಗಳ ಸೇರುವಿಕೆಯಿಂದ ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗಿಗಳಾಗಬೇಕೆಂದು ಎಲ್ಲ ಮಾನವತಾದಿಗಳಿಗೆ ನಾನು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಮತ್ತು ನನ್ನ ಆರೋಗ್ಯ ಅನುವು ಮಾಡಿಕೊಟ್ಟಲ್ಲಿ ನಾನು ಸಹಾ ಅದರಲ್ಲಿ ಭಾಗಿಯಾಗಲು ಅಪೇಕ್ಷಿಸುತ್ತೇನೆ.