ಜನ ಲೋಕಪಾಲ್ ಒಂದೇ ಸಾಲದು; ಸರ್ವರಿಗೂ ನೈಜ ಅಧಿಕಾರ ದೊರೆಯಲಿ

[dropcap]ನಾ[/dropcap]ವಿಂದು ಬಹು ದೊಡ್ಡ ಜನಾಂದೋಲನವನ್ನು ಕಾಣುತ್ತಿದ್ದೇವೆ. ಇದು ಪೂರ್ಣ ಸ್ವಾತಂತ್ರ್ಯದ ಎರಡನೇ ಆಂದೋಲನ ಎಂದು ಈಗಾಗಲೇ ಕರೆಯಲ್ಪಟ್ಟಿದೆ. ಈ ಆಂದೋಲನಕ್ಕೆ ದುರಾಳಿತ ನಡೆಸಿದ ಕಾಂಗ್ರೆಸ್ ಪಕ್ಷವು  ಕಾರಣವಾಗಿದ್ದರೆ ಅದರ ದುರ್ಲಾಭವನ್ನು ಪಡೆಯಲು ಅದಕ್ಕಿಂತಲೂ ಭ್ರಷ್ಠವಾದ, ಬಂಡವಾಳವಾದಿ ಪ್ರತಿಗಾಮಿ ಪಕ್ಷಗಳಾದ ಭಾಜಪ ಮತ್ತು ಸಂಘಪರಿವಾರಗಳು ಹೊಂಚುಹಾಕುತ್ತಿರುವುದನ್ನು ಕಾಣುತ್ತೇವೆ. ಅಣ್ಣಾ ಹಜಾರೆಯವರ ತಂಡದವರು ಸಚ್ಚಾರಿತ್ರರು ಎಂದಾದರೂ ಜನಾಂದೋಲನವು ಯಶಸ್ವಿಯಾಗಿ ಅಧಿಕಾರವು ಪ್ರತಿಗಾಮಿ ಪಕ್ಷಗಳ ಹಿಡಿತಕ್ಕೊಳಗಾದರೆ  ಜನರಿಗೆ ಜನಲೋಕಪಾಲ ಮಸೂದೆಯಿಂದ  ಎಷ್ಟು ಒಳಿತು ಆಗಬಲ್ಲುದೋ ಅದರ ಶತ ಪಾಲು ಸಂಕಷ್ಟಗಳು ಬಂದೊದಗಿ ಸರಿಮಾಡಲಾಗದ ದುಃಸ್ಥಿತಿಯು ಬಂದೊದಗಬಹುದೆಂದು ಈ ಸಂದರ್ಭದಲ್ಲಿ ಜನರಿಗೆ ಮನಗಾಣಿಸುವುದು ಅವಶ್ಯವಾಗಿದೆ.  ಇತ್ತೀಚೆಗೆ ರಾಮ್‌ದೇವ್ ರವರ ಸತ್ಯಾಗ್ರಹದ ಪ್ರಹಸನವನ್ನು  ನಾವು ಕಂಡಿದ್ದೇವೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿಯುವ ಸಂಚನ್ನು ಸಂಘಪರಿವಾರದವರು ರೂಪಿಸಿದ್ದದ್ದು ಬಯಲಾದುದನ್ನು ನಾವು ಅರಿತಿದ್ದೇವೆ. ಆ ಸಂಚಿನ ರೂವಾರಿಗಳಾದ ಅರೆಸ್ಸೆಸ್ ಮತ್ತು ಸಂಘಪರಿವಾರದವರು ಅಣ್ಣಾ ಹಜಾರೆಯವರ ಗುಂಪಿನೊಳಗೂ ನುಸುಳುವ ಪ್ರಯತ್ನವಾಗಿ ತಮ್ಮ ಸಹಕಾರವನ್ನು ಈಗಾಲೇ ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾಂತಿಪ್ರಿಯ ನಾಗರಿಕರು ಜಾಗೃತರಾಗಿದ್ದು ಅಂತಹ ವಿನಾಶಕಾರಿ ದುಃಶ್ಶಕ್ತಿಗಳನ್ನು ದೂರವಿಟ್ಟು ಶಾಂತ ರೀತಿಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಅಗತ್ಯವು ಬಹಳವಿದೆ.

ದೇಶದ ಸ್ವಾತಂತ್ರ್ಯದ ‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಎಂಬ ಆದರ್ಶವು ನಿಜವಾಗಬೇಕಿದ್ದರೆ ದೇಶದ ಸರ್ವ ಸಂಪತ್ತು, ನೆಲ, ಜಲ, ಉತ್ಪಾದನೆ, ರವಾನೆ, ವಿತರಣೆಗಳೆಲ್ಲವೂ ಸಂಪೂರ್ಣವಾಗಿ ಜನರ ನಿಯಂತ್ರಣಕ್ಕೆ ಒಳಪಡಬೇಕು. ಇವುಗಳ ಖಾಸಗೀಕರಣವನ್ನು ಕೈಬಿಟ್ಟು ಉತ್ಪತ್ತಿಯಾಗುವ ಸಂಪತ್ತಿನ ವಿತರಣೆಯು ಸಮಾನವಾಗಬೇಕು. ಆಡಳಿತಾಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಜನಹಿತ ಸಹಕಾರಿ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಆಗ ಮಾತ್ರ ಬಡತನವು ಇಲ್ಲವಾಗಿ ಭ್ರಷ್ಟಾಚಾರವು ಸಂಪೂರ್ಣವಾಗಿ ತೊಲಗುವುದು. ನಮ್ಮ ಸ್ವಾತಂತ್ರ್ಯದ ಗುರಿ ಅದಾಗಬೇಕು. ಆ ಗುರಿಯನ್ನಿಟ್ಟುಕೊಂಡು ಸರ್ವಸಮಾನತೆಯ ಸ್ವಾತಂತ್ರ್ಯ ಗಳಿಸುವವರೆಗೆ ಚಳುವಳಿಯನ್ನು ಮುನ್ನಡೆಸೋಣ. ವ್ಯತಿರಿಕ್ತವಾಗಿ ದೇಶದ ಉತ್ಪಾದನೆಯ ಸಂಪತ್ತಿನ ಬಹು ಪಾಲು  ಕೆಲವೇ ಜನರ ಸೊತ್ತಾಗುತ್ತಾ ಬಹು ಜನರ ಪಾಲಿಗೆ ಅಲ್ಪಾಂಶವೇ ದೊರಕಿ ಶ್ರೀಮಂತರ ಮತ್ತು ಬಡವರ ಅಂತರವು ಬಹು ವೇಗದಿಂದ ಹೆಚ್ಚುತ್ತಾ ಹೋದುದೇ ಭ್ರಷ್ಟಾಚಾರವು ತಾರಕಕ್ಕೇರುವುದಕ್ಕೂ, ಬಹು ಸಂಖ್ಯಾತ ಬಡ ಜನರ ಸಂಕಷ್ಟಗಳಿಗೂ ಕಾರಣವಾಯಿತು. ಇದು ಉದಾರಿಕರಣದ ಮತ್ತು ಜಾಗತೀಕರಣದ ಆರ್ಥಿಕ ನೀತಿಯಿಂದಾಗಿ ತೀವ್ರವಾಗಿ ವೃದ್ಧಿಯಾಯಿತು. ಭ್ರಷ್ಟಾಚಾರ ತಡೆ ಕಾನೂನುಗಳು ಎಷ್ಟೇ ಕಠಿಣವಾಗಿದ್ದರೂ ಬಡವರನ್ನು ಹಾಗೂ ನಿರ್ಗತಿಕರನ್ನು ಮಣಿಸಲು ಉಳ್ಳವರಿಗೆ ದಾರಿಗಳು ಹಲವಾರಿವೆ. ಕೋಟ್ಯಾಧೀಶರ ಎದುರು ಜನ ಸಾಮಾನ್ಯನಿಗೆ ಸ್ಪರ್ಧಿಸಲು ಕಾರ್ಯಥಾ ಅಸಾಧ್ಯ. ಕಳ್ಳತನ ಮತ್ತು ಭ್ರಷ್ಟಾಚಾರಕ್ಕೆ ಶಿಕ್ಷೆ ಎಷ್ಟು ಮುಖ್ಯವೋ ಅದಕ್ಕಿರುವ ಅವಕಾಶಗಳನ್ನು ಮತ್ತು ಅವಶ್ಯಕತೆಗಳನ್ನು ಇಲ್ಲವಾಗಿಸುವುದು ಅದಕ್ಕಿಂತಲೂ ಮುಖ್ಯವಾದುದು.

ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ನೆಲೆಗೊಂಡಿರುವುದೋ ಅಲ್ಲಿಯವರೆಗೆ ಭ್ರಷ್ಟಾಚಾರ ಒಂದಲ್ಲ ಒಂದು ರೂಪದಲ್ಲಿ ಮುಂದುವರಿಯುವುದು. ಇದನ್ನು ಶ್ರಮಜೀವಿಗಳು, ವಿದ್ಯಾರ್ಥಿಗಳು, ಯುವಜನರು,  ರೈತರು, ಸಾರ್ವಜನಿಕರೆಲ್ಲರೂ ಮನಗಂಡು ಕಾರ್ಯೋನ್ಮುಖರಾಗಬೇಕು. ಸರ್ವ ಸಮಾನತೆಯ ಸ್ವಾತಂತ್ರ್ಯದ ಆದರ್ಶವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಧೋರಣೆ ಮತ್ತು ಬದ್ದತೆ ಉಳ್ಳ ಪಕ್ಷಗಳೆಂದರೆ ಕಮ್ಯುನಿಸ್ಟ್ ಪಕ್ಷಗಳು ಮಾತ್ರ. ದುರದೃಷ್ಟವಶಾತ್ ಇವುಗಳು ಆ ಧೋರಣೆಗಳನ್ನು ಅನುಷ್ಠಾನಗೊಳಿಸುವ ಕಾರ್ಯತಂತ್ರಗಳಲ್ಲೇ ಭಿನ್ನಾಭಿಪ್ರಾಯ ಹೊಂದಿ ವಿಭಜನೆಗೊಂಡು ಬಳಿಕ ನಿಶ್ಶಕ್ತಗೊಂಡದ್ದು ನಮ್ಮ ದುರಂತ. ಈಗಿನ ಈ ಅಪಾಯಕಾರಿ ವಿಷಮಯ ಪರಿಸ್ಥಿತಿಯಲ್ಲಿ ಆ ಪಕ್ಷಗಳು ಕಾರ್ಯೋನ್ಮುಖರಾಗಬೇಕಾಗಿದೆ ಮತ್ತು ಪ್ರಭುತ್ವವನ್ನು ದುಷ್ಟ ಶಕ್ತಿಗಳು ಷಡ್ಯಂತ್ರಗಳ ಮೂಲಕ ವಶಪಡಿಸಿಕೊಳ್ಳುವ ಅಪಾಯವನ್ನು ತಡೆಯುವ ಪ್ರಯತ್ನವನ್ನು ಮಾಡಬೇಕಾಗಿದೆ. ವಿಭಜನೆಗೊಂಡ ಕಮ್ಯುನಿಸ್ಟ್ ಪಕ್ಷಗಳು ವಿಲೀನಗೊಂಡು ಪ್ರಜಾಪ್ರಭುತ್ವವಾದಿ ಮತ್ತು  ಸಮಾಜವಾದಿ ಪಕ್ಷಗಳ ಒಕ್ಕೂಟವನ್ನು ರಚಿಸಿ ಜನಪರ ಸರಕಾರದ  ರಚನೆಗೆ ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ ಮತ್ತು ಈ ಜನಾಂಧೋಲನದಲ್ಲಿ ಭಾಗವಹಿಸಿ ಅದರ ದಿಕ್ಕು ಸರಿದಾರಿಯಲ್ಲಿ ಸಾಗುವಂತೆ ಪ್ರಯತ್ನಿಸಿ ಜನಲೋಕಪಾಲ್ ಮಸೂದೆಯು ಲೋಕ ಸಭೆಯಲ್ಲಿ ಮಂಡನೆಯಾಗಿ ಅದು ಶಾಸನವಾಗುವಂತೆ ಸರ್ವ ಪ್ರಯತ್ನವನ್ನು ಮಾಡುವುದರೊಂದಿಗೆ ಸರ್ವಜನರಿಗೆ ಸರ್ವಸಮಾನತೆ ದೊರಕುವವರೆಗೆ ವಿರಮಿಸದಿರಲಿ ಎಂದು  ನಾವು ಹಾರೈಸುತ್ತೇವೆ.