B V Kakkilaya :: ಬಿ ವಿ ಕಕ್ಕಿಲ್ಲಾಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ 1940ರ ದಶಕದಲ್ಲಿ ದಕ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿ, ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುವ ಮೂಲಕ ದಕ ಜಿಲ್ಲೆಯಲ್ಲೂ, ಕರ್ನಾಟಕದ ಹಲವೆಡೆಗಳಲ್ಲೂ  ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್   ಗಳನ್ನು ಪ್ರಬಲವಾಗಿ ಬೆಳೆಸಿದ ಶ್ರೇಯ ಕಕ್ಕಿಲ್ಲಾಯರಿಗೂ, ಅವರ ಸಂಗಾತಿಗಳಿಗೂ ಸೇರುತ್ತದೆ.
ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿಯೂ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಕ್ಕಿಲ್ಲಾಯರು ಅದಕ್ಕಾಗಿ ಸೆರೆವಾಸವನ್ನೂ ಅನುಭವಿಸಿದ್ದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು.
ಮೊತ್ತ ಮೊದಲ ರಾಜ್ಯಸಭೆಗೆ 1952-1954ರವರೆಗೆ ಮದ್ರಾಸ್ ಅಸೆಂಬ್ಲಿಯಿಂದ ಆಯ್ಕೆಗೊಂಡಿದ್ದ ಕಕ್ಕಿಲ್ಲಾಯರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕಕ್ಕಿಲ್ಲಾಯರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ 1972 ಹಾಗೂ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದ ಕಕ್ಕಿಲ್ಲಾಯರು ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ  ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು.
ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.