ಪೇಜಾವರ ಶ್ರೀಗಳವರಲ್ಲಿ ಒಂದೆರಡು ಪ್ರಶ್ನೆಗಳು

ಪೇಜಾವರ ಮಠಾಧೀಶರ ಅಸ್ಪೃಶ್ಯತಾ ನಿರ್ಮೂಲನ ಯೋಜನೆಯ ಬಗ್ಗೆ ಬಹಿರಂಗ ಪತ್ರ (ದಿನಾಂಕ ಸೆಪ್ಟೆಂಬರ್ 29, 2010)

[dropcap]ವಿ[/dropcap]ಶ್ವ ಹಿಂದು ಪರಿಷತ್ತಿನ ಸಂಸ್ಥಾಪಕ, ವರಿಷ್ಠ ನಾಯಕ ಹಾಗೂ ‘ಹಿಂದುಗಳು ಎಲ್ಲಾ ಒಂದು’ ಎಂದು ಪ್ರತಿಪಾದಿಸುತ್ತಿರುವ ಉಡುಪಿ ಅಷ್ಠ ಮಠಗಳಲ್ಲೊಂದಾದ  ಪೇಜಾವರ ಶ್ರೀಗಳವರಲ್ಲಿ ನನ್ನ ಒಂದೆರಡು ಪ್ರಶ್ನೆಗಳು.

ಶ್ರೀಗಳು ದೀಕ್ಷೆ ಮತ್ತು ಪೇಜಾವರ ಮಠದ ಅಧಿಕಾರ ವಹಿಸಿಕೊಂಡ ಸಮಯದಿಂದಲೇ ನನಗೆ ಪರಿಚಯ ಉಳ್ಳವರಾಗಿದ್ದಾರೆ.  ಎಷ್ಟೋ ಬಾರಿ ನಮ್ಮ ಹಿರಿಯರ ಮನೆಯಲ್ಲಿ ಪಾದ ಪೂಜೆ ಮಾಡಿಸಿ ಕೊಂಡಿದ್ದಾರೆ.  ಆಗ ಅವರು ಬಾಲ ಯತಿಗಳಾಗಿದ್ದರು. ಅಂದರೆ ಕಾನೂನು ಪ್ರಕಾರ ಅಪ್ರಾಪ್ತ ವಯಸ್ಕರಾಗಿದ್ದರು. ಬಿಂದ್ರನ್ ವಾಲೆಯ ಖಲಿಸ್ಥಾನ ಬೇಡಿಕೆಯನ್ನೂ,  ಭಾರತದ ಸಂವಿಧಾನಕ್ಕಿಂತಲೂ ಧರ್ಮವು ಶ್ರೇಷ್ಠ ಮತ್ತು ಮತ ಧರ್ಮಗಳ ಮೇಲೆ ಸಂವಿಧಾನವು ನಿಯಂತ್ರಣ ಹೊಂದಲಾಗದು ಎಂಬ ಅವನ ಪರಿಕಲ್ಪನೆಯನ್ನೂ ಶ್ರೀಗಳು  ಪ್ರೋತ್ಸಾಹಿಸಿ ಸಮರ್ಥಿಸಿ ಅಮೃತ್ ಸರದಲ್ಲಿ ಬಹಿರಂಗ ಭಾಷಣ ಮಾಡಿದ್ದುದ್ದನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ನಾವು ಅವರನ್ನು ದೂರವಿಟ್ಟೆವು.

ಭಾರತದ ಮತ ಧರ್ಮ ನಿರಪೇಕ್ಷೆ,  ಜಾತಿ ಬೇಧ ರಹಿತ ಚಾತುರ್ವರ್ಣದ ಕಟ್ಟು ಪಾಡು ಇಲ್ಲದ ಹಾಗೂ ಅಸ್ಪೃಶ್ಯತೆ, ದಲಿತ ಶೋಷಣೆ-ಮರ್ದನ ಇತ್ಯಾದಿಗಳಿಗೆ ಅವಕಾಶ ಇಲ್ಲದೆ ಮಾನವರಾಗಿ ಬಾಳುವ ಅವಕಾಶ ಇದೆ ಎಂಬುವುದನ್ನು ಶ್ರೀ ಗಳು ಒಪ್ಪಲಿ ಬಿಡಲಿ,  ಈ ದೇಶದ ಸರ್ವ ಧರ್ಮಿಯರೂ ಎಲ್ಲ ಜಾತಿಗಳವರೂ ಮೇಲು ಕೀಳು ಎಂಬ ಭಾವನೆ ಇಲ್ಲದೆ ಸರ್ವ ಸಮಾನತೆ ಯಲ್ಲಿ ಬಾಳುತ್ತಿರುವುದನ್ನು ನಾವು ಬೆಂಬಲಿಸುತ್ತೇವೆ. ಅದಕ್ಕೆ ಶ್ರೀಗಳಂಥವರ ಪಾದ ಯಾತ್ರೆ ಬೇಕಾಗಿಲ್ಲ. ಕೀಳು ಜಾತಿ ಮತ್ತು ದಲಿತರು ಎಂಬ ಶತಮಾನಗಳ ತುಳಿತಕ್ಕೆ ಒಳಗಾದವರಲ್ಲಿ ಒಬ್ಬನ ಸನ್ಯಾಸ ಸ್ವೀಕಾರವೋ, ಮೇಲ್ಜಾತಿಯವರ ಜೊತೆಗೆ ಸಹಭೋಜನವೂ ಅದಕ್ಕೆ ಪರಿಹಾರವಲ್ಲ.

ಕುವೆಂಪು ರವರ ಒಂದು ಕವನವನ್ನು ಶ್ರೀಗಳ ಅವಗಾಹನೆಗೆ ತರಬಯಸುತ್ತೇನೆ:

“ವಿಜಯ ನಗರ ಸಾಮ್ರಾಜ್ಯ ವಾದರೇನು? ಮೊಗಲರಾಳ್ವಿಕೆಯಾದರೇನು? ಬ್ರಿಟಿಷರ ಆಡಳಿತವೇನು? ನಮ್ಮವರ ಕಬ್ಬಿಣದ ಸಲಾಖೆಯ ತಿವಿತ ಹೂ ಗೊಂಚಲೇನು?”

ಶ್ರೀ ಕೃಷ್ಣನು ಬೋಧಿಸಿರುವ, ಶ್ರೀಗಳು ಸಮರ್ಥಿಸುವ ಚಾತುರ್ವರ್ಣ ಶ್ರೇಣಿ ಪದ್ದತಿಯಿಂದ ದಲಿತ ಸಮುದಾಯವು ದಮನ, ತುಳಿತ ಮತ್ತು ತಿವಿತಗಳಿಂದ ಘಾಸಿ ಗೊಂಡಿರುವುದು ನಿಜವಲ್ಲವೇನು? ನಿಜವಾದರೆ ನಿರ್ಮೂಲನೆ ಮಾಡಲು ಶ್ರೀಗಳು ಇನ್ನಾದರೂ ಸನ್ನದ್ಧರಾಗುವರೇ? ಮಠದಲ್ಲಿ ಮಾಡಲಾಗುವ ಶ್ರೀಕೃಷ್ಣನ ಭೋಧನೆಯ ಪ್ರವಚನ ..” ಚಾತುರ್ವಣ್ಯಂ ಮಯಾ ಶ್ರೇಷ್ಠ ಗುಣಕರ್ಮ ವಿಭಾಗಶಃ” ಎಂಬ ದುರ್ಗುಣಗಳ ಭೋಧನೆಗಳನ್ನು ಕೈ ಬಿಟ್ಟು “ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವೀ ನಾವದೀತ ಮಸ್ತು ಮಾ  ಒಂ ಶಾಂತಿಃ, ಶಾಂತಿಃ, ಶಾಂತಿಃ ..   ಎಂದರೆ ಎಲ್ಲರೂ ಜೊತೆಗೂಡಿ ನಡೆಯೋಣ, ಜೊತೆಗೂಡಿ ದುಡಿಯೋಣ, ಜೊತೆಗೂಡಿ ಉಂಡು ಜೊತೆಗೂಡಿ ಬಾಳೋಣ, ವಿದ್ವೇಶ ಸಲ್ಲದು, ಎಲ್ಲರೂ ತೇಜಸ್ವಿಗಳಾಗೋಣ, ವಿಶ್ವದಲ್ಲೆಡೆ ಶಾಂತಿ ನೆಲೆಗೊಳ್ಳಲಿ ಎಂದು ಸರ್ವರಿಗೂ ಸಮಾನತೆಯನ್ನು ಭೋಧಿಸುವ ಸರ್ವ ಶ್ರೇಷ್ಠ ಭೋಧನೆ ಗಳು ಉಳ್ಳ ಮಂತ್ರಗಳನ್ನು ಭೋಧಿಸಿ ಆಚರಿಸಲು ಶ್ರೀಗಳು ಒಪ್ಪುವರೇ?

ನಾನು ತಿಳಿದಂತೆ ಒಬ್ಬ ಸಜ್ಜನನಿಗೆ 4 ಧರ್ಮಗಳು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ. ಅವುಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ.

1ನೇಯದ್ದು ಧರ್ಮ – ಇಲ್ಲಿ ಧರ್ಮವೆಂದರೆ ಸನಾತನ ಧರ್ಮ. ನಮ್ಮ ಸಂವಿಧಾನದ್ದು ಮತ ಧರ್ಮ ನಿರಪೇಕ್ಷಣೀಯ ಬದುಕು.

2ನೇಯದ್ದು ಅರ್ಥ – ಅಂದರೆ ದುಡಿದು ಶೋಷಣೆಗೆ ಎಡೆಕೊಡದೆ ಅರ್ಥವನ್ನು ಸಂಪಾದಿಸಿ ಅದರ ಸದ್ವಿನಿಯೋಗ ಮಾಡುವ ಆರ್ಥಿಕತೆ,

3ನೇಯದ್ದು ಸಂತಾನ – ಅಂದರೆ ಸಮಾಜಗಳ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವುದು.

4ನೇಯದ್ದು ಪುನರ್ಜನ್ಮ – ಅಂದರೆ ಸಂಸಾರ ಎಲ್ಲವುಗಳಿಂದಲೂ ಬಿಡುಗಡೆಗೊಂಡು ಚಿರ ಶಾಂತಿ ಸಾಧಿಸುವುದು.

ಶ್ರೀಗಳಾಗಲಿ, ಈಗೀಗ ಅವತರಿಸುತ್ತಿರುವ ನಾನಾ ಸನ್ಯಾಸಿಗಳಾಗಲಿ ಧರ್ಮ ಎಂದರೆ ಸನಾತನ ಧರ್ಮ ಪಾಲಿಸುವುದರ ಜೊತೆಗೆ ಮೋಕ್ಷವನ್ನು ಸಾಧಿಸುವ ಕುರಿತು ಯೋಚಿಸುವುದು ಮತ್ತು ಭೋಧಿಸುವುದು ಮಾತ್ರವಾಗಿದೆ. ಉಳಿದೆರಡನ್ನು ಅಂದರೆ ಅರ್ಥ ಮತ್ತು ಕಾಮಗಳನ್ನು ನಿಷೇಧಿಸಲಾಗಿದೆ ಅಲ್ಲವೇ?  ನಮ್ಮ ಸನ್ಯಾಸಿಗಳಿಂದ, ಮಠಾಧಿಪತಿ, ಪೀಠಾಧಿಪತಿ, ಧರ್ಮಾಧಿಕಾರಿ, ಜಗದ್ಗುರು ಎಂಬಿತ್ಯಾದಿ ಬಿರುದಾಂಕಿತರವರಿಂದೆಲ್ಲ ಮೇಲೆ ಉಲ್ಲೇಖಿಸಿದ ಧರ್ಮ ಭೋಧನೆ ಗಳನ್ನು ನಿರೀಕ್ಷೀಸುತ್ತೇವೆ. ಇದು ಕಾರ್ಯಗತವಾದರೆ ಪಾದ ಯಾತ್ರೆ, ಸಹಯೋಗ, ಸಹಭೋಜನ .. ಇತ್ಯಾದಿಗಳು ಮಹತ್ವ ಕಳೆದುಕೊಂಡು ನೈಜ ಸಮಾನತೆ ಸ್ಥಾಪನೆಯಾಗಲು ಸಹಕಾರಿಯಾಗಬಲ್ಲವು. ಈ ಬಗ್ಗೆ ಗಂಬೀರವಾಗಿ ಚಿಂತಿಸಿ ಇದನ್ನು ಕಾರ್ಯಗತಗೊಳಿಸಲು ಶ್ರೀಗಳಲ್ಲಿ ನನ್ನ ವಿನಮ್ರ ಅರಿಕೆ.

47ರ ಸ್ವಾತಂತ್ರ್ಯ

63ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಆಗಸ್ಟ್ 13, 2010)

[dropcap]ನ[/dropcap]ಮ್ಮ 63ನೆಯ ಸ್ವಾತಂತ್ರ್ಯ ದಿನಾಚರಣೆ ಇದೇ ಆಗಸ್ಟ್ 15ನೇ ತಾರೀಕಿಗೆ ಜರಗುತ್ತದೆ. ‘ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯ’  ಎಂದು ದಲಿತ ಕವಿ ಸಿದ್ದಲಿಂಗಯ್ಯನವರು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಕಂಡು ರೋಸಿ ಹೋಗಿ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೀಗ ಎಲ್ಲಿಯೇ ಇರಲಿ ಯಾರ ಕೊಡೆಯೊಳಗೇ ಸೇರಿಕೊಳ್ಳಲಿ ನಮ್ಮನ್ನು ಆಳುವವರು ಆ ಪ್ರಶ್ನೆಗೆ ವಕ್ರ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್, ಭಾಜಪ, ಮತ್ತು ಸಂಘಪರಿವಾರಗಳ ಸಂದರ್ಭ ಸಾಧಕ ಎಡ ಬಿಡಂಗಿಗಳು, ವಿವಿಧ ಕೋಮುವಾದಿಗಳು ಎಲ್ಲರೂ 1947 ಆ 15 ರಂದು ದೊರಕಿದ ಸ್ವಾತಂತ್ರ್ಯವನ್ನು ವಿಕೃತಗೊಳಿಸಿದ್ದಾರೆ.   ಭವಿತವ್ಯದೊಂದಿಗೆ ಮುಖಾಮುಖಿ ಎಂಬ ಇತಿಹಾಸ ಪ್ರಸಿದ್ಧ ಭಾಷಣದೊಂದಿಗೆ ಜವಾಹರಲಾಲ್ ನೆಹರೂ ರವರು ಆರಂಭಿಸಿದ ಎಲ್ಲ ಪ್ರಗತಿಪರ ಭವಿಷತ್ತನ್ನು ನಿಜಗೊಳಿಸುವತ್ತಣ ಮೊದಲ ಹೆಜ್ಜೆಗಳನ್ನು ತ್ಯಜಿಸಿ ನಮ್ಮನ್ನು ಆಳುವವರು ನಮ್ಮ ದೇಶವನ್ನು  ಪರಾಧೀನಕ್ಕೆ, ದಾರಿದ್ರ್ಯಕ್ಕೆ ಮತ್ತು ಸರ್ವಾಧಿಕಾರಕ್ಕೆ ಗುರಿಪಡಿಸುವ ದಾರಿಯಲ್ಲಿ ಮುನ್ನುಗ್ಗುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ಗುರಿಯನ್ನು ಸಾಧಿಸುವತ್ತ ಹೇಗೆ ಸಫಲವಾದ  ಹೆಜ್ಜೆಗಳನ್ನು ಮುಂದಿಡಬಹುದು ಎನ್ನುವುದನ್ನು ಕಮ್ಯುನಿಸ್ಟ್ ಮತ್ತು ಅವರ ಜೊತೆಗಾರರಾದ ಎಡ ಶಕ್ತಿಗಳು ಕಾರ್ಯಥಾ ತೋರಿಸಿಕೊಟ್ಟಿದ್ದಾರೆ. ಈ ಎರಡರ ನಡುವಿನ ಆಯ್ಕೆ ಇಂದು ನಮ್ಮ ಅನುಭವಸ್ಥ ಮತ್ತು ಪ್ರಭುದ್ದ ಜನತೆಯ ಕೈಯಲ್ಲಿದೆ.

ದೇಶಾದ್ಯಂತ ಲಕ್ಷಾಂತರ ರೈತರ ಆತ್ಮಹತ್ಯೆ ಎಂದು ಕರೆಯಲಾಗುವುದರಲ್ಲಿ ನಿಜಾರ್ಥದಲ್ಲಿ ಆಡಳಿತಗಾರರು ನಡೆಸುವ ಮಾನವ ಸಂಪತ್ತಿನ ಕೊಲೆಯ ಮತ್ತು ಪೀಡನೆಯ ಚಿತ್ರಣ ಕಂಡುಬರುತ್ತಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ, ಸಾಮ್ರಾಜ್ಯವಾದಿಗಳ ಆರ್ಥಿಕ ಶಕ್ತಿಯ ವರ್ಧನೆಗೆ ಕಾರಣವಾಗಿರುವ ಉದಾರೀಕರಣ, ಜಾಗತೀಕರಣ, ಖಾಸಗೀಕರಣಗಳನ್ನು ನಮ್ಮ ದೇಶವನ್ನು ಆಳುವ ನಮ್ಮ ಈಗಿನ ಪ್ರಭುತ್ವವಾದಿಗಳು ತೀವ್ರಗಳಿಸುತ್ತಿದ್ದಾರೆ. ಇದನ್ನು ಕೊನೆಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಈ ಸಮಸ್ಯೆಗಳಿಗೆ ಉತ್ತರ ಒಂದೇ: ಸಾಮ್ರಾಜ್ಯವಾದಿಗಳ, ಬಹು ರಾಷ್ಟ್ರೀಯ ಸಂಸ್ಥೆಗಳ ಪರವಾಗಿರುವವರನ್ನು ಅಧಿಕಾರದಿಂದ ತೊಲಗಿಸುವ ‘2ನೆಯ ಕ್ವಿಟ್ ಇಂಡಿಯಾ’ – ಅಧಿಕಾರ ಬಿಟ್ಟು ತೊಲಗಿ – ಎಂಬ ಹೊಸ ಚಳುವಳಿಗೆ ಎಲ್ಲ ದೇಶ ಪ್ರೇಮಿಗಳು,  ಜನಪರ ಶಕ್ತಿಗಳು, ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು ಒಟ್ಟಿನಲ್ಲಿ ಸಮಸ್ತ ಜನರು ಒಂದಾಗಿ ಹೋರಾಟ ರೂಪಿಸಬೇಕಾಗಿದೆ. ಈ ಹೋರಾಟದ ಆರಂಭಕ್ಕೆ ಇಂದು ದೇಶದ ಸಂಸತ್ತಿನಲ್ಲಿ ಮತ್ತು ಗುಜರಾತ್, ಕರ್ನಾಟಕ, ಪ.ಬಂಗಾಲ, ಮೊದಲಾದ ಪ್ರಜಾಪ್ರಭುತ್ವದ ದೇಗುಲಗಳಲ್ಲಿ ನಡೆಯುತ್ತಿರುವ ಗೊಂದಲಗಳನ್ನು ಉದಾಹರಣೆಗಳಾಗಿ ನಾವು ಕಂಡು ತಿಳಿಯಬೇಕಾಗಿದೆ.

ಬೆಲೆ ಏರಿಕೆಯ ಪ್ರಶ್ನೆ ಸಮಸ್ತ ಜನತೆಯನ್ನು ಕಾಡುತ್ತಿರುವಾಗ ವಿವಿಧ ಪಕ್ಷಗಳು ಬೆಲೆ ಏರಿಕೆಯ ಮುಂದುವರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಹತ್ತು ಹಲವು ಸೂಚನೆಗಳನ್ನು ಸರಕಾರದ ಮುಂದಿಟ್ಟು ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ಮನಮೋಹನ್ ಸಿಂಗ್ ಹಾಗೂ ಅವರನ್ನು ಬೆಂಬಲಿಸುವ ಆಳುವ ಒಕ್ಕೂಟವು ಪ್ರತಿಪಕ್ಷಗಳೊಳಗಿನ ಭಿನ್ನಾಭಿಪ್ರಾಯವನ್ನು ಲೇವಡಿ ಮಾಡಿ ತಲೆ ತಪ್ಪಿಸಿಕೊಳ್ಳುವ ಮಾರ್ಗ ಹಿಡಿದಿರುವುದು ಪ್ರಜಾತಂತ್ರದ ಲೇವಡಿಯಲ್ಲದೆ ಮತ್ತೇನಲ್ಲ. ಸಂಸತ್ತಿನಲ್ಲಿ ಚರ್ಚೆ ಮಾಡಿ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಸಂಸತ್ತನ್ನೇ ಕಡೆಗಾಣಿಸಿ ತೈಲೋತ್ಪನ್ನಗಳ ಬೆಲೆಯನ್ನು ಮತ್ತೆ ಏರಿಸಿರುವುದು ಅಕ್ಷಮ್ಯವಾಗಿದೆ.

ನಮ್ಮ ರಾಜ್ಯದಲ್ಲಿ ನೋಡಿದರೆ ವಿಧಾನ ಮಂಡಲದಲ್ಲಿ ಗಣಿಗಾರಿಕೆ ಮತ್ತಿತರ ಬಹಿರಂಗಗೊಂಡಿರುವ ಭ್ರಷ್ಟಾಚಾರಗಳ ಬಗ್ಗೆ ಮತ್ತು ಲೋಕಾಯುಕ್ತರ ದಿಟ್ಟ ಕ್ರಮಗಳ ಬಗ್ಗೆ  ಚರ್ಚಿಸಿ ಭ್ರಷ್ಟ ಮಂತ್ರಿವರ್ಯರೊಳಗೊಂಡ ಅಧಿಕಾರಿಗಳನ್ನು ಶಿಕ್ಷಿಸುವುದರ ಬದಲು ಆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಕ್ರಮಗಳು ನಡೆದುವು. ಹಿಂದೆ ಆಳುತ್ತಿದ್ದವರು, ಈಗ ಆಳುತ್ತಿರುವವರು ಕೊಳ್ಳೆ ಹೊಡೆಯುವ ಭ್ರಷ್ಟಾಚಾರಕ್ಕೆ ವಿರುದ್ದವಾಗಿ ಯಾವ ಹೆಜ್ಜೆಯನ್ನೂ ಇರಿಸದೆ ಇದೀಗ ಪಾದ ಯಾತ್ರೆ, ಸಮಾವೇಶ, ಅತ್ತಿತ್ತ ಕೆಸರಾಟಗಳಲ್ಲಿ ಎರಡೂ ಕಡೆಯ ವರಿಷ್ಟರು ಭಾಗವಹಿಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಕೇಂದ್ರ ಸರಕಾರವು ಸಹಾ ಸಂಪತ್ತಿನ ಕೊಳ್ಳೆ ಹಾಗೂ ಭೂಮಿ, ಜನ ಅರಣ್ಯಗಳನ್ನೆಲ್ಲ ದೋಚಿ ತಮ್ಮದಾಗಿಸಿಕೊಳ್ಳುವವರ ವಿರುದ್ದ ಕ್ರಮವಹಿಸುವ ಬದಲಾಗಿ ತೋರಿಕೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಥಾ ಕಿರುಬೆರಳನ್ನೂ ಎತ್ತದಿರುವ ಸೋಗಲಾಡಿತನವನ್ನು ತೋರಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಲೋಕಾಯುಕ್ತರು, ರಾಜ್ಯಪಾಲರು, ಬುದ್ಧಿ ಜೀವಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಉಳ್ಳ ಪ್ರಮುಖರು ಎಲ್ಲರೂ ಈ ಹಗರಣದ ವಿರುದ್ದ ಧ್ವನಿ ಎತ್ತಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಆ 15, 2010 ರಂದು ಕೆಂಪು ಕೋಟೆಯ ಸ್ವಾತಂತ್ರ್ಯ ಸಮಾರಂಭದ ಕಟಕಟೆಯಲ್ಲಿ ಅಶೋಕ ಚಕ್ರ ಹೊತ್ತ ತ್ರಿವರ್ಣ ದ್ವಜ ಅರಳುತ್ತದೆ. ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   .. ಜನ ಗಣ ಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   ..’ ರಾಷ್ಟಗೀತೆ ಮೊಳಗುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಅಪ ಸಾಧನೆಗಳನ್ನು ಬಚ್ಚಿಟ್ಟು ಸಾಧನೆಗಳ ಕನಸುಗಳನ್ನು ಬಿತ್ತರಿಸುತ್ತಾರೆ. ಅದೇ ಸಮಯದಲ್ಲಿ ಕರ್ನಾಟಕ, ಗುಜರಾತ್ ಹಾಗೂ ಇನ್ನಿತರ ರಾಜ್ಯಗಳ ರಾಜಧಾನಿಗಳಲ್ಲಿ ಅದೇ ಬಾವುಟ, ಅದೇ ರಾಷ್ಟ್ರಗೀತೆ ಮೊಳಗಿದರೂ ಕೆಳಗೆ ನಿಂತು ಧ್ವಜ ವಂದನೆ ಸ್ವೀಕರಿಸುವವರು ಅವುಗಳನ್ನು ಕಾರ್ಯಥಾ ಗೌರವಿಸದೆ ಇರುವುದು ನಮ್ಮ ದುರಂತ. ಮೊದಲನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ವಸಾಹತುಶಾಹಿ ಆಡಳಿತದ ವ್ಯವಸ್ಥೆಯ ಸಂಪೂರ್ಣ ನಿರ್ಮೂಲನೆ, ಸ್ವಾವಲಂಬನೆ, ಔಧ್ಯಮೀಕರಣ, ವೈಜ್ಞಾನಿಕ ಶಿಕ್ಷಣದ ವ್ಯವಸ್ಥೆ, ಭೂಸುಧಾರಣೆ, ರಾಜ ನವಾಬರುಗಳ ಆಡಳಿತ ಮತ್ತು ರಾಜಧನ ರದ್ದತಿ, ಜೀವ ವಿಮೆಗಳ ರಾಷ್ಟ್ರೀಕರಣ, ಉಳುವವನಿಗೆ ಕೃಷಿ ಭೂಮಿ ಮತ್ತು ಕೃಷಿಗೆ ಆಧ್ಯತೆಯ ನೆಲೆಯಲ್ಲಿ ಸಹಾಯ, ಕೃಷಿ ಉತ್ಪನ್ನಗಳಿಗೆ ಸುವ್ಯಸ್ಥಿತ ಮಾರುಕಟ್ಟೆ ಮತ್ತು ಲಾಭದಾಯಕ ಬೆಲೆ, ಉತ್ತಮ ಗೊಬ್ಬರಗಳ ಪೂರೈಕೆ, ವಿದ್ಯುತ್ ಶಕ್ತಿ ಮತ್ತು ನೀರಾವರಿ ಸೌಲಬ್ಯಗಳ ವಿಸ್ತರಣೆ, ದುಡಿವ ಜನರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೈಜ್ಞಾನಿಕ ಶಿಕ್ಷಣ, ವಿದ್ಯಾಸಂಸ್ಥೆಗಳನ್ನು ಧಾರ್ಮಿಕ ಹಾಗೂ ಲಾಭಬಡುಕ ಖಾಸಗಿಯವರ ಕಪಿ ಮುಷ್ಟಿಯಿಂದ ಬಿಡಿಸಿ ಅರ್ಹತೆಯ ಆಧಾರದಲ್ಲಿ ಶಿಕ್ಷಣದ ವ್ಯವಸ್ಥೆ, ಇತ್ಯಾದಿಗಳ ಗುರಿಯನ್ನು ಇಟ್ಟುಕೊಂಡು ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈಗ ಅವುಗಳನ್ನು ಸಂಪೂರ್ಣವಾಗಿ ತೊರೆದು ದುಡಿದು ತಿನ್ನುವ ಬಹು ಸಂಖ್ಯಾತ ಜನರ ದಾರಿದ್ರ್ಯಕ್ಕೆ ಗುರಿಪಡಿಸುವ ದಾರಿಯಲ್ಲಿ ಆಳುವವರು  ಸಾಗುತ್ತಿರುವುದನ್ನು ನಾವಿಂದು ಕಾಣುತ್ತೇವೆ.

ಪರಮಾಣು ಅಸ್ತ್ರದ ಕೊಡೆಹಿಡಿಯುವ ಟೊಳ್ಳು ಆಸ್ವಾಸನೆಗೆ ಮರುಳಾಗಿ ದೇಶದ ವಿದೇಶಾಂಗ ನೀತಿಯ ಅಪಾಯಕಾರಿ ಬದಲಾವಣೆಗಳನ್ನು ತರಲು ಪಡುವ ಪ್ರಯತ್ನವನ್ನಂತೂ ಕೊನೆಗಾಣಿಸಬೇಕೆಂದು ಭವಿಷತ್ತಿನ ಬಗ್ಗೆ ಕಾಳಜಿ ಇರುವವರೆಲ್ಲರೂ ಅಪೇಕ್ಷಿಸುತ್ತಾರೆ. ಇದಕ್ಕೆ ನಮ್ಮ ಸಂಸತ್ತು ಮತ್ತು ವಿಧಾನ ಸಭೆಗಳು ಬದಲಾಗಬೇಕು. ಕೋಟ್ಯಾಧಿಪತಿಗಳು, ಭೂಕಬಳಿಕೆದಾರರು, ಗಣಿಗಳ್ಳರು, ಅರಣ್ಯ ಲೂಟಿಗಾರರು ಮತ್ತು ಅವರ ಪ್ರತಿನಿಧಿಗಳು ಅವುಗಳಲ್ಲಿ ತುಂಬಿಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಬಹುಸಂಖ್ಯಾತ ದುಡಿದು ತಿನ್ನುವ ಜನರ ಬದುಕು ದುಸ್ತರವಾಗುತ್ತಿದೆ. ಈ ವೈಪರೀತ್ಯಗಳನ್ನು ಕೊನೆಗಾಣಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಒಂದುಗೂಡಿ ಸಮಾಲೋಚನೆ ಮಾಡಿ ಒಂದು ಹೊಸ ಅಭಿಯಾನ ಆರಂಭಿಸುವತ್ತ ಹೆಜ್ಜೆ ಇಡುವ ಪ್ರತಿಜ್ಞೆ ಮಾಡೋಣ ಮತ್ತು ಅದಕ್ಕೆ ಕಾರ್ಯ ಸಿದ್ದತೆ ನಡೆಸೋಣ.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಸಂವಿಧಾನಬಾಹಿರ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಬ್ಬರ ಆಣೆ ಪ್ರಮಾಣ ಪ್ರಹಸನದ ಬಗ್ಗೆ ಲೇಖನ (ದಿನಾಂಕ ಜೂನ್ 23, 2011)

ಇದೇ ಜೂನ್ 27ರಂದು ಧರ್ಮಸ್ಥಳದಲ್ಲಿ ನಮ್ಮ ಹಾಲೀ ಮತ್ತು ಮಾಜೀ ಮುಖ್ಯಮಂತ್ರಿಗಳಾಗಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರು ಹಿಂದೆ ಜೊತೆಗಿದ್ದುಕೊಂಡು ತಮ್ಮೊಳಗೆ ಮಾಡಿಕೊಂಡ್ಡಿದ್ದ ಮತ್ತು ಬಹುಷಃ ತಮ್ಮಿಬ್ಬರಿಗೆ ಮಾತ್ರ ತಿಳಿದಿರುವ ತಮ್ಮ ತಮ್ಮ ದುರ್ವ್ಯವಹಾರಗಳ ಕುರಿತು ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಲಿದೆ ಎಂಬ ಪ್ರಚಾರ ನಡೆದಿತ್ತು. ಈಗ ಅದರ ಬದಲು ಕೇವಲ ಮನಸ್ಸಾಕ್ಷಿಯಷ್ಟೇ ನಡೆಯುತ್ತದೆ ಎಂಬ ಹೇಳಿಕೆಗಳು ಬರತೊಡಗಿವೆ. ಅವರಿಬ್ಬರ ದುರ್ವ್ಯವಹಾರಗಳೆಲ್ಲವೂ ಬಯಲುಗೊಳ್ಳುವುದೆಂಬ ಭೀತಿಯಿಂದ ಅವರು ಈ ನೆವನವನ್ನು ಮುಂದೊಡ್ಡಿದ್ದಾರೆ ಎಂದು ತೋರುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಮಠಾಧೀಶರು ತಮ್ಮ ಸಲಹೆಗಳನ್ನು ಕೊಟ್ಟಿರುವುದೂ ಪೂರ್ವ ಯೋಜಿತವೆಂಬಂತೆಯೇ ಭಾಸವಾಗುತ್ತದೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದರ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಒಂದು ಸುಂದರವಾದ ಮತ್ತು ಅರ್ಥ ಪೂರ್ಣವಾದ ಕವನವನ್ನೇ ಬರೆದಿರುವರು. ಅದು ಪ್ರಸ್ತುತ ಸಂದರ್ಭದಲ್ಲಿ ನೆನಪಿಸುವುದು ಸೂಕ್ತವೆನಿಸುತ್ತಿದೆ. ಕುವೆಂಪುರವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವೀರೇಂದ್ರ ಹೆಗ್ಡೆಯವರ ಹಿರಿಯರಾದ  ಮಂಜಯ್ಯ ಹೆಗ್ಡೆಯವರು ಆಡಳಿತೆಯನ್ನು ನಡೆಸುತ್ತಿದ್ದರು. ಇಂದಿಗಿಂತಲೂ ಅಂದು ಧರ್ಮಸ್ಥಳದ ಮಹತ್ವದ ಬಗ್ಗೆ ಜನರ ಭೀತಿ ಅಧಿಕವಿತ್ತು. ಧರ್ಮಸ್ಥಳದಲ್ಲಿ ಸಾಮಾನ್ಯ ಜನರು ಆಚರಿಸುತ್ತಿದ್ದ ಹರಕೆ ಸಂದಾಯಗಳ ರೀತಿ ನೀತಿಗಳನ್ನು ಖುದ್ದಾಗಿ ಕಂಡು ಅದು ಅಮಾನವೀಯವೆಂದು ಮನನೊಂದು ಧರ್ಮಸ್ಥಳ ಎಂಬ ಒಂದು ಕವನವನ್ನು ಸ್ಥಳದಲ್ಲೇ ರಚಿಸಿ ಅದನ್ನು ಇಕ್ಷು ಗಂಗೋತ್ರಿ ಎಂಬ ತನ್ನ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:

ಹೃದಯ  ಧರ್ಮಸ್ಥಳದಿ ನಿನ್ನಂತರಾತ್ಮನಿರೆ, ಅಂಜುತಿಹೆ ಏಕೆ?  ..   ..

ಅಲ್ಲಿ ದರ್ಮಸ್ಥಳದಿ ಹೇಳಿಗೆಯ ಹಾವಿನೊಲು, ದೇಗುಲಕೆ ವಶನೆ ಹೇಳ್ ಮಂಜುನಾಥ?

[ನಿನ್ನ ಅಂತರಾತ್ಮದಲ್ಲಿ ನಿಜವಾಗಿಯೂ ಮಂಜುನಾಥನು ಇರುವುದಾದರೆ ಹಾವಾಡಿಗನ ಹೇಳಿಗೆಯಂತಿರುವ ಧರ್ಮಸ್ಥಳದ ದೇಗುಲದಲ್ಲಿ ಮಂಜುನಾಥ ಬಂಧಿಯಾಗಿರುವನೇನು?]

ನಿನ್ನ  ಭಯದ ಉರಿಗೊಳ್ಳಿ ನಿನಗೆ ಅದುವೇ ಪಂಜುರ್ಲಿ; ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತ!

[ನಿನ್ನ ಭಯವೆಂಬ ಉರಿಯುವ ಕೊಳ್ಳಿಯೇ ನಿನ್ನನ್ನು ಪಂಜುರ್ಲಿಯಂತೆ ಕಾಡುತ್ತದೆ, ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತದಂತೆ ಕಾಡುತ್ತದೆ.]

ಎಲ್ಲಿ ಮತ್ಸರವುಅಳಿದು ಮೈತ್ರಿ ಮೂಡುವಲ್ಲಿ ಮೂಡಿತೆಂದೇ ತಿಳಿಯೋ ಧರ್ಮಸ್ಠಳ.

ಸುಲಿಗೆ ವಂಚನೆ ಕಳೆದವನ ಮನವೇ ಮಂಜುನಾಥನ ಮಂಚ, ಹೃದಯಕಮಲ!

[ಎಲ್ಲಿ ಮತ್ಸರವು ಆಳಿದು ಗೆಳೆತನವು ಮೂಡುವುದೋ ಅಲ್ಲಿ ನಿಜವಾದ ಧರ್ಮಸ್ಥಳ ಮೂಡುತ್ತದೆ ಎಂದು ತಿಳಿ. ಸುಲಿಗೆ, ವಂಚನೆ, ಹಿಂಸೆಗಳನ್ನು ಕಳೆದವನ ಮನಸ್ಸೇ ಮಂಜುನಾಥನ ಪೀಠ!]

ಮೂಢ ಹೃದಯದ ಗೂಢ ಗಾಢಾಂಧಕಾರವನು ಹೊರ ದೂಡದೆಯೆ ರೂಢಿ ಎಂಬ ನೆವನದಿ ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದುಕೊಳೆ ಜ್ಯೋತಿ ಮೂಡುವುದೆಂದೋ ಜಡದ ಜಗದಿ?

[ಮೂಢರ ಹೃದಯಗಳ ನಿಗೂಢ ಗಾಢಾಂಧಕಾರವನ್ನು ಕಾಣಿಕೆ ಎಂಬ ಹೆಸರಲ್ಲಿ ಕಾಂಚನವನ್ನು ಸೆಳೆಯುವ ತಂತ್ರಕ್ಕೆ ಪ್ರೋತ್ಸಾಹ ಕೊಟ್ಟರೆ ಜಗತ್ತಿನಲ್ಲಿ ಜ್ಞಾನ ಜ್ಯೊತಿ ಮೂಡುವುದು ಎಂದು?]

ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ! ನಿನ್ನಂತೆ ಸಂಸ್ಥೆಯೂ ನಶ್ವರವದು!

[ಧರ್ಮಸ್ಥಳದ ಹಿರಿಯನೇ,  ಅಹಂಭಾವವನ್ನು ತೊರೆದು ಜಿನನಿಗೆ ಶರಣಾಗು, ನೀನಾಗಲಿ ನಿನ್ನ ಸಂಸ್ಥೆಯಾಗಲಿ ಶಾಶ್ವತವೇನಲ್ಲ!]

ಧರ್ಮಕ್ಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ; ಧರ್ಮವೇಷದ ಅಧರ್ಮಕ್ಕೆ ಮುನಿದೆ, ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೋ ಕೈ ಮುಗಿದೆ, ಮಣಿದೆ, ಹಿರಿದು ಕಿರಿದೆನ್ನದೆ!

[ಧರ್ಮ ಮತ್ತು ಧರ್ಮ ಸಂಸ್ಥೆಗಳಿಗೆ ನಾನು ನಿಂದಿಸುವುದಿಲ್ಲ, ಧರ್ಮದ ಹೆಸರಲ್ಲಿ ನಡೆಯುವ ಅಧರ್ಮಕ್ಕೆ ನನ್ನ ಮುನಿಸು, ನಿಜವಾದ ಧರ್ಮಕ್ಕೆ ನಾನು ತಲೆ ಬಾಗುತ್ತೇನೆ ಮತ್ತು ಕೈ ಮುಗಿಯುತ್ತೇನೆ]

ಇದು ಕುವೆಂಪುರವರ ಶ್ರೇಷ್ಠ ಕವನಗಳಲ್ಲೊಂದು ಎಂದೆನಿಸಿದೆ. ಧರ್ಮಸ್ಥಳದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು, ಆಣೆ ಇಡುವುದು  ಧರ್ಮದ ಹೆಸರಲ್ಲಿ ನಡೆಯುವ ಅಧರ್ಮವೆಂದೂ, ಜನರನ್ನು ಮೌಡ್ಯಕ್ಕೆ ತಳ್ಳುವ ಕ್ರಿಯೆಯೆಂದೂ ಅರ್ಧ ಶತಮಾನಗಳ ಹಿಂದೆಯೇ ಕುವೆಂಪುರವರು ಸಾರಿದ್ದರು. ಹಾಗಿರುವಾಗ ಜನ ನಾಯಕರೆಂದೆನಿಸಿಕೊಂಡಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರ ಕುಕೃತ್ಯಕ್ಕೆ ಅಸಹ್ಯ ಪಡುತ್ತೇವೆ ಮತ್ತು ಅದನ್ನು ಖಂಡಿಸುತ್ತೇವೆ. ಏನಿದ್ದರೂ ಎಲ್ಲ ಅವ್ಯವಹಾರಗಳನ್ನು ಬಯಲು ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಅವುಗಳನ್ನು ನಮ್ಮ ಸಂವಿಧಾನಕ್ಕನುಗುಣವಾಗಿ ಶಾಸನ ಸಭೆಗಳಲ್ಲಿಯೋ, ನ್ಯಾಯಲಯಗಳಲ್ಲಿಯೋ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಅವರದ್ದಾಗಿರುತ್ತದೆ. ಮತ್ತು ಇವುಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗಿದೆ. ಇದಕ್ಕೆ ಅವರು ಬದ್ಧರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ಪಾಲಿಸುತ್ತಾರೆ ಎಂದು ಹಾರೈಸುತ್ತೇವೆ.