ರಷ್ಯಾದಲ್ಲಿ ಭಗವದ್ಗೀತೆಯ ವಿವಾದ

ಭಗವದ್ಗೀತೆಯ ಬಗ್ಗೆ ಎದ್ದಿರುವ ವಿವಾದದ ಕುರಿತು 2 ಮಾತುಗಳು: (ಬರೆದದ್ದು: ದಿಸೆಂಬರ್ 27, 2011)

[dropcap]ರ[/dropcap]ಷ್ಯದಲ್ಲಿ ಭಗವದ್ಗೀತೆ  ರಷ್ಯನ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಗೊಂಡಿದ್ದು, ಅದರಲ್ಲಿ  ಹೇಳಲ್ಪಟ್ಟ ಕೆಲವು ಅಪ್ರಿಯ ಬೋಧನೆ, ಹಿಂಸೆ ಮತ್ತು ಜಾತೀಯತೆಯ ಪ್ರತಿಪಾದನೆ ಇತ್ಯಾದಿಗಳಿಗಾಗಿ ಅದನ್ನು ನಿಷೇಧಿಸಲು ಅಲ್ಲಿನ ನ್ಯಾಯಾಲಯದಲ್ಲಿ ಕೆಲವು ನಾಗರಿಕರು ದಾವೆಯನ್ನು ಹೂಡಿದ್ದಾರೆ. ನ್ಯಾಯಾಲಯದ ತೀರ್ಮಾನವನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಲವು ಬಲ ಪಂಥೀಯ ಮತ್ತು ಧರ್ಮಾಂಧ ಸಂಸದರು ಸಂಸತ್ತಿನಲ್ಲಿ ಒಂದು ಸುಳಿಗಾಳಿಯನ್ನೇ ಎಬ್ಬಿಸಿದ್ದಾರೆ. ಪ್ರಾಮುಖ್ಯವಾದ ಲೋಕಪಾಲ ಮಸೂದೆ, ಆಹಾರ ಭದ್ರತಾ ಮಸೂದೆ ಮತ್ತಿತರ ಪ್ರಸ್ತುತ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ  ಪ್ರಮುಖ ವಿಧೇಯಕಗಳು ಚರ್ಚೆಗೆ ಬರುತ್ತಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಿದೆಂದು ತಿಳಿಯಬೇಕಾಗಿದೆ. ಎದುರಾಳಿಗಳನ್ನು ದಮನಿಸಲು ತಮ್ಮ ಬತ್ತಳಿಕೆಯಲ್ಲಿರುವ ಆಯುಧಗಳು ಬರಿದಾದಾಗ ಪ್ರತಿಗಾಮಿ ಶಕ್ತಿಗಳು ತಮ್ಮ ಕೊನೆಯ ಅಸ್ತ್ರವನ್ನಾಗಿ ಭಗವದ್ಗೀತೆಯನ್ನು ಉಪಯೋಗಿಸಿ ದಾರಿ ತಪ್ಪಿಸುವುದು ಸಾಮಾನ್ಯವಾಗಿದೆ. ಅದೇ ತಂತ್ರವನ್ನು ಈಗಲೂ ಉಪಯೋಗಿಸಿದಂತಿದೆ. ರಷ್ಯಾದ ಹಿಂದುಳಿದ ಸೈಬೀರಿಯ ಪ್ರದೇಶದ ಒಂದು ಸಣ್ಣ ಊರಲ್ಲಿ ಇಸ್ಕಾನ್ ಎಂಬ ಸಂಸ್ಥೆಯೊಂದು ನಡೆಸುತ್ತಿರುವ ಕಾರ್ಯಾಚರಣೆಯ ಅಂಗವಾಗಿ ಅಲ್ಲಿನ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಚರ್ಚೆಯಲ್ಲಿ ನಮ್ಮ ಸರಕಾರ ಮತ್ತು ಸಂಸತ್ತು ಮುಳುಗಬೇಕೇ? ಅಲ್ಲಿಯ ಜನರು ಮತ್ತು ನ್ಯಾಯಾಲಯಗಳು ನಮ್ಮ ಗ್ರಂಥಗಳಿಗೆ ನಿಷ್ಠರಾಗಿರಬೇಕೆಂದು ನಾವು ನಿರೀಕ್ಷಿಸಬಹುದೇ?

ಇಷ್ಟಕ್ಕೂ ಭಗವದ್ಗೀತೆಯಲ್ಲಿ ಭೋಧಿಸಲ್ಪಟ್ಟ ಕೆಲವು ಬೋಧನೆಗಳನ್ನು ಗಮನಿಸಿದರೆ ಅದು ಎಷ್ಟು ಹಿಂಸಾತ್ಮಕ, ಅಮಾನವೀಯ ಮತ್ತು ಪ್ರಸ್ತುತ ಜನಜೀವನಕ್ಕೆ ಮಾರಕವೆಂದು ಮನಗಾಣಬಹುದು.  ಅರ್ಜುನನು ಯುದ್ಧದಿಂದ ವಿಮುಖನಾದಾಗ ಶ್ರೀಕೃಷ್ಣನು ಅವನನ್ನು ಯುದ್ಧಕ್ಕೆ ಪ್ರಚೋದಿಸುತ್ತಾ “ಯುದ್ಧವನ್ನು ನೀನು ಮಾಡದೇ ಹೋದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀಯಾ; ಚಾತುರ್ವಣ್ಯವೆಂಬ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳನ್ನು  ಸೃಷ್ಟಿಸಿದವನು ನಾನು; ಯಾವಾಗಲೆಲ್ಲಾ (ಚಾತುರ್ವಣ್ಯ) ಧರ್ಮಕ್ಕೆ ಹಾನಿಯುಂಟಾಗುವುದೋ ಅವಾಗಲೆಲ್ಲಾ, ದುಷ್ಕರ್ಮಿಗಳನ್ನು ನಾಶಗೊಳಿಸಲು ಮತ್ತು  ಚಾತುರ್ವಣ್ಯ ಧರ್ಮವನ್ನು  ರಕ್ಷಿಸಲು ನಾನು ಕಾಲಕಾಲಕ್ಕೆ ಹುಟ್ಟಿಬರುತ್ತೇನೆ” ಎಂದ ಉಕ್ತಿಗಳು ಜಾತ್ಯಾತೀತ, ಧರ್ಮ ನಿರಪೇಕ್ಷಿತ, ವರ್ಗರಹಿತ ಸಮಾಜ ನಿರ್ಮಾಣದ ನಮ್ಮ ಸಂವಿಧಾನದ ಮೂಲ ಆಶಯಕ್ಕೇ ತದ್ವಿರುದ್ಧವಾಗಿದೆ.  ಚಾತುರ್ವಣ್ಯವನ್ನು ವಿರೋಧಿಸುವ ಅಹಿಂದುಗಳನ್ನು ದುಷ್ಕರ್ಮಿಗಳೆಂದೂ ಮತ್ತು ಅವರನ್ನು ನಾಶ ಮಾಡಲು ಶ್ರೀಕೃಷ್ಣನು ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ಎಂದು ಅರ್ಥೈಸಬೇಕಲ್ಲವೇ? ಹಾಗಿರುವಾಗ ಬೇರಾವುದೋ ದೇಶದಲ್ಲಿ ಅಲ್ಲಿಯ ಸಂವಿಧಾನಕ್ಕೆ ಅನುಗುಣವಾಗಿ ಹಿಂಸೆ, ಅನೀತಿ, ಅಮಾನವೀಯತೆಯನ್ನು ವೈಭವೀಕರಿಸುತ್ತಿರುವ ಭಗವದ್ಗೀತೆಯನ್ನು ಅಲ್ಲಿಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದುದ್ದನ್ನು ನಾವಿಲ್ಲಿ ಪ್ರತಿಭಟಿಸುವುದು  ಸಮಂಜಸವೇ? ನಮ್ಮಲ್ಲಾದರೂ ಇಷ್ಟ ಇದ್ದವರು ಅದನ್ನು ಪಠಿಸಲಿ. ಆದರೆ ಅದರಲ್ಲಡಗಿರುವ ಹಿಂಸೆಯನ್ನು ಮತ್ತು ಚಾತುರ್ವಣ್ಯ ಜಾತಿ ಪದ್ಧತಿಯನ್ನು ಬೋಧಿಸುವುದು ಮತ್ತು ಆಚರಿಸುವುದು ಸಂವಿಧಾನ ಬಾಹಿರವಾದುದು ಎಂದು ಮನಗಾಣಬೇಕು.

ಚುನಾವಣಾ ನಿಯಮಗಳ ಪರಿಷ್ಕರಣೆಯಾಗಲಿ

[dropcap]ಭ್[/dropcap]ರಷ್ಟಾಚಾರದ ವಿರುದ್ಧ ದೇಶದಾದ್ಯಂತ ಜನರು ರೊಚ್ಚಿಗೆದ್ದಿದ್ದಾರೆ ಮತ್ತು ಅದಕ್ಕೆ ಮೂಲ ಕಾರಣ ನಮ್ಮ ಚುನಾವಣಾ ನಿಯಮಗಳು ಎಂಬುದು ದೃಡಪಟ್ಟಿದೆ. ದೇಶದ  ಸಂಪತ್ತನ್ನು ಕೆಲವೇ ವ್ಯಕ್ತಿಗಳು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದು ಅದರ ಪ್ರಭಾವದಿಂದ ನಮ್ಮ  ಸರಕಾರ ಹಾಗೂ ಸಮಸ್ತ ಅಧಿಕಾರವನ್ನು ವಶಪಡಿಸಿ ದೇಶದ ಬಹುಪಾಲು ಜನರ ಬದುಕನ್ನೇ ದುಸ್ತರಗೊಳಿಸಿ ಅವರು ಕನಿಷ್ಟ ಜೀವನಾವಶ್ಯಕತೆಗಳಿಗೂ ಪರದಾಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳು ಕೋಟ್ಯಾಂತರ ರೂಪಾಯಿಗಳನ್ನು ಭ್ರಷ್ಟಾಚಾರದ ರೂಪದಲ್ಲಿ ಚುನಾವಣೆಗಳಲ್ಲಿ ಖರ್ಚುಮಾಡಿ, ಅವರ ಪ್ರತಿನಿಧಿಗಳೇ ಚುನಾಯಿತರಾಗಿ ಬರುವಂತೆ ಮಾಡಲು ಸಮರ್ಥರಾಗುತ್ತಾರೆ. ಅವರ ಎದುರು ಸಭ್ಯ ಉಮೇದುವಾರನಿಗೆ ಗೆಲ್ಲುವ ಸಾಧ್ಯತೆಗಳು ನಗಣ್ಯ. ನಮ್ಮ ರಾಜ್ಯದ ಭ್ರಷ್ಟ ರಾಜಕಾರಣಿಗಳು ಹೇಗೆ ದೇಶದ ಸಂಪತ್ತನ್ನು ದರೋಡೆ ಮಾಡಿ  ಅದನ್ನು ದೇಶ ವಿದೇಶಗಳಲ್ಲಿ  ಬಚ್ಚಿಟ್ಟು  ನಮ್ಮ ರಾಜ್ಯದ ರಾಜಕೀಯದಲ್ಲಿ ಅದರ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಭಿನ್ನ ಪಕ್ಷಗಳ ತಿಕ್ಕಾಟ, ಜಗ್ಗಾಟದಿಂದಾಗಿ ಮಾತ್ರ ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಯ್ತು ಎಂಬುದನ್ನು ನಾವು ಗಮನಿಸಬೇಕು.  ಅಪರೇಷನ್ ಕಮಲದ ಮೂಲಕ ಅನ್ಯ ಪಕ್ಷಗಳ ಸದಸ್ಯರನ್ನು ಸೆಳೆದು ಮರು ಚುನಾವಣೆಗೆ ನಿಲ್ಲಿಸಿ ಅವರನ್ನು ಗೆಲ್ಲಿಸಲು ಬೇಕಾಬಿಟ್ಟಿ ಭ್ರಷ್ಟಾಚಾರದ ಹಣವನ್ನು ಚೆಲ್ಲಿ ರಾಜ್ಯ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದ ಪ್ರಹಸನವು ನಮ್ಮ ಮುಂದಿದೆ. ಓಟಿಗಾಗಿ ನೋಟಿನ ಪ್ರಹಸನದ ಕಂತೆ ಕಂತೆ ನೋಟುಗಳ ಪ್ರದರ್ಶನವು ಲೋಕಸಭಾ ಸದನದಲ್ಲೇ ಏರ್ಪಟ್ಟಿದ್ದನ್ನು ನಾವು ಕಂಡಿದ್ದೇವೆ. 2-ಜಿ ಸ್ಪೆಕ್ಟಂ ಗುತ್ತಿಗೆ ನೀಡುವ  ಕಾಮಗಾರಿ ಒಂದರಲ್ಲೇ 1,76,000 ಕೋಟಿ ರೂಪಾಯಿಗಳ ಅವ್ಯವಹಾರ ಗೈದ ಮಂತ್ರಿವರ್ಯರು ಜೈಲು ಸೇರಿದ ಪ್ರಸಂಗವೂ ಹಸಿರಾಗಿಯೇ ಇದೆ. ಇವುಗಳು ಬೆಳಕಿಗೆ ಬರುವುದೇ ಅಪರೂಪಕ್ಕೊಂದೆರಡು. ನಮ್ಮ ಪ್ರಸ್ತುತ ಸಂಸತ್ತಿನ ಸದಸ್ಯರಲ್ಲಿ ಬಹುತೇಕ ಮಂದಿ ಕೋಟ್ಯಾಧಿಪತಿಗಳೇ ಆಗಿರಲು ಕಾರಣ ಇದುವೇ ಅಗಿರುತ್ತದೆ.  ಆದುದರಿಂದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರು ಚುನಾವಣಾ ನೀತಿ ಸಂಹಿತೆಯಲ್ಲಿನ ನಿಯಮಗಳ ಸುಧಾರಣೆಗೆ ಪ್ರಥಮ ಆಧ್ಯತೆಯನ್ನು ನೀಡಬೇಕಾಗಿದೆ. ಅಣ್ಣಾ ಹಜಾರೆಯವರ ತಂಡದವರೂ ಇದನ್ನು ತಿಳಿದು ಅದನ್ನು ಕೈಗೆತ್ತಿಕ್ಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದನ್ನು ಹೇಗೆ ಮತ್ತು ಯಾವ ರೂಪದಲ್ಲಿ  ರ್ಕಾರ್ಯಗತಗೋಳಿಸಬೇಕೆಂಬ ಬಗ್ಗೆ ಬಹಳಷ್ಟು ವಿಚಾರ ಗೋಷ್ಠಿಗಳು ಮತ್ತು ಸಾರ್ವಜನಿಕ ಚರ್ಚೆಗಳು ನಡೆಸಿ ಸಲಹೆ ಸೂಚನೆಗಳನ್ನು ಆಹ್ವಾನಿಸುವ  ಅವಶ್ಯಕತೆ ಇದೆ.

ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ವಿವಿಧ ಚುನಾವಣಾ ವ್ಯವಸ್ಥೆಗಳು ಜಾರಿಯಲ್ಲಿದ್ದು ಅವುಗಳಲ್ಲಿ ಅನುಪಾತ ವ್ಯವಸ್ಥೆಯು ಪ್ರಮುಖವಾಗಿದೆ.  93 ರಾಷ್ಟ್ರಗಳಲ್ಲಿ ಅದು ಜಾರಿಯಲ್ಲಿದ್ದು  ಕೆಲವು ರಾಷ್ಟಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊಂದಿದೆ. ಒಟ್ಟು ಸದಸ್ಯರ ಪೈಕಿ ಅರ್ಧಾಂಶ ಸದಸ್ಯರನ್ನು ಅನುಪಾತ ಮತದ ಪ್ರಕಾರ ಪಕ್ಷಗಳು ನೇಮಿಸಿ ಉಳಿದ ಅರ್ಧಾಂಶ ಸದಸ್ಯರನ್ನು ನೇರ ಬಹುಮತದಿಂದ ಚುನಾಯಿಸುವ ವ್ಯವಸ್ಥೆ ಸಹಾ ಜಾರಿಯಲ್ಲಿದೆ. ಫ್ರಾನ್ಸ್ ಇದಕ್ಕೆ ಒಂದು ಉತ್ತಮ ಮಾದರಿಯಾಗಿದೆ. ದ್ವಿತಿಯ ಮಹಾಯುದ್ಧದ ನಂತರ ಬ್ರಿಟನ್ ಹಾಗೂ ಇನ್ನಿತರ ದೇಶಗಳಲ್ಲಿರುವಂತೆ ನೇರ ಮತದಾನದ ಮೂಲಕ ಸಂಸತ್ತನ್ನು ಚುನಾಯಿಸುವ ಕ್ರಮವು ಅಲ್ಲಿ ಬಳಕೆಯಲ್ಲಿತ್ತು. ಅನೇಕ ವರ್ಷಗಳ ಕಾಲದ ಅಸ್ಥಿರತೆಯಿಂದಾಗಿ ದೇಶದ ರಾಜಕೀಯವು ದುರ್ಬಲಗೊಂಡು ಬಳಿಕ ಅನುಪಾತ ಮಾದರಿಯ ಚುನಾವಣಾ ವ್ಯವಸ್ಥೆ ಜಾರಿಗೊಂಡಿತು. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿ ತಮಗೆ ದೊರೆತ ಮತಗಳ ದಾಮಾಶಯದಲ್ಲಿ ಸಂಸತ್ತಿನಲ್ಲಿ ಸದಸ್ಯರನ್ನು ಹೊಂದಿ ಸರಕಾರದಲ್ಲಿಯೂ ಸಹಭಾಗಿಯಾಗುವ ಅವಕಾಶವನ್ನು ಪಡೆದು ಪ್ರಜಾಪ್ರಭುತ್ವವನ್ನು ಯತಾರ್ಥಗೊಳಿಸುವ ಸ್ಥಿತಿ  ನಿರ್ಮಾಣವಾಯಿತು. ನಮ್ಮ ದೇಶದಲ್ಲೂ ಈ ಅನುಪಾತ ವ್ಯವಸ್ಥೆಯನ್ನು ಜಾರಿಗೊಳಿಸಲು ಕಮ್ಯುನಿಷ್ಟ್ ಪಕ್ಷಗಳು ಮುಂಚಿನಿಂದಲೂ ಒತ್ತಾಯಿಸುತ್ತಿದ್ದು ವಾಜಪಾಯಿ ಸರ್ಕಾರವು 1996ರಲ್ಲಿ ಅದಕ್ಕೆ ಬೆಂಬಲ ಸೂಚಿಸಿತ್ತು ಮತ್ತು ಭಾರತದ ಕಾನೂನು ಆಯೋಗವು ಅದನ್ನು1999ರಲ್ಲಿ ಶಿಫಾರಸು ಮಾಡಿತು. ಅಲ್ಲದೆ ಅಕಾಲಿದಳ, ಶಿವಸೇನೆ, ಡಿಯಂಕೆ ಪಕ್ಷಗಳೂ ಅದಕ್ಕೆ ಬೆಂಬಲ ಸೂಚಿಸಿವೆ ಎಂಬುವುದನ್ನು ನಾವು ಇಲ್ಲಿ ಸ್ಮರಿಸಬಹುದು.

1930 ರ ದಶಕದಲ್ಲಿ ಯುರೋಪಿನಲ್ಲಿ ಫ್ರಾನ್ಸ್, ಇಟೆಲಿ, ಜರ್ಮನಿ ಮುಂತಾದ ಕಡೆಗಳಲ್ಲಿ ಮುಖ್ಯವಾಗಿ ಕಮ್ಯುನಿಸ್ಟ್ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಪ್ರಭಲವಾಗಿದ್ದ ಸಂದರ್ಭದಲ್ಲಿ ಅವರೊಳಗಿನ ಕಚ್ಚಾಟದಿಂದ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿ ಫಾಸಿಸ್ಟ್ ಸರ್ವಾಧಿಕಾರವನ್ನು ಹೇರಲು ಸಾಧ್ಯವಾಯಿತು ಎನ್ನುವುದನ್ನು ನಾವು ಮನಗಾಣಬೇಕು. ಅಂಥಾ ಕರಾಳ ಯುಗದ ಅನುಭವವನ್ನು ನಾವು ಪರಿಗಣಿಸಿ ಅದು ಮತ್ತೆಲ್ಲಿಯೂ ತಲೆ ಎತ್ತದಂತೆ ನೋಡಿಕೊಳ್ಳುವ ಅಗತ್ಯವಿದೆ.  ನಮ್ಮ ರಾಜ್ಯದಲ್ಲಿಯೂ ಜೆಡಿಯಸ್ ಮತ್ತು ಬಿಜೆಪಿ ಪಕ್ಷಗಳ 20:20 ರ ಒಡಂಬಡಿಕೆ  ಹೆಚ್ಚು ಕಡಿಮೆ ಯುರೋಪಿನ ಫಾಸಿಸ್ಟ್ ವಿಧಾನವನ್ನೇ ಹೋಲುತ್ತಿದ್ದು ಅಂತೆಯೇ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿರುವುದನ್ನೂ ಕಾಣಬಹುದು. ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರವನ್ನು ಕಬಳಿಸಲು ಪೈಪೋಟಿ ನಡೆಸುತ್ತಿರುವ ಈ ಸಂಧರ್ಭದಲ್ಲಿ ನಮ್ಮ ದೇಶದ ಎಲ್ಲಾ ಎಡ ಮತ್ತು ಪ್ರಜಾಪ್ರಭುತ್ವವಾದಿ ಸಮಾಜವಾದಿ ಪಕ್ಷಗಳು ಸಂದರ್ಭವಾದಿ ಸಾಧ್ಯತೆಗಳನ್ನು ತೊರೆದು ಅನುಪಾತ ವ್ಯವಸ್ಥೆಯ ಚುನಾವಣಾ ರೀತಿಯನ್ನು ಜಾರಿಗೊಳ್ಳುವಂತೆ ಮಾಡಿದರೆ ಪ್ರಜಾಪ್ರಭುತ್ವವನ್ನು ಈ ದೇಶದಲ್ಲಿ ಸುಸ್ಥಿರಗೊಳಿಸಬಹುದು ಮತ್ತು ಬಹುಪಾಲು ಜನರನ್ನು ನಿರ್ಗತಿಕರನ್ನಾಗಿ ಮಾಡಿ ಲಕ್ಷಾಂತರ ರೈತರು  ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಬಂಡವಾಳಶಾಹಿ ಧೋರಣೆಯನ್ನು ತೊಡೆದು ದೇಶವನ್ನು ಕೊಳ್ಳೆಹೊಡೆಯಲು ಅನುಕೂಲ ಮಾಡಿಕೊಡುತ್ತಿರುವ ಜಾಗತೀಕರಣ ವ್ಯವಷ್ಥೆಯನ್ನು ಹದ್ದು ಬಸ್ತಿನಲ್ಲಿ ಇಡಬಹುದು. ಅದಕ್ಕಾಗಿ ಅನುಪಾತ ವ್ಯವಸ್ಥೆಯ ಚುನಾವಣಾ  ರೀತಿಯು ಜಾರಿಗೊಳ್ಳುವಂತೆ  ಕೆಲವು ಸೂಚನೆಗಳನ್ನು ನೀಡಬಯಸುತ್ತೇವೆ.

  1. ಕ್ಷೇತ್ರಗಳಲ್ಲಿ ಪಡೆದ ಮತಗಳ ದಾಮಾಶಯಗಳ ಅಧಾರದಲ್ಲಿ ಪಕ್ಷಗಳೇ ಚುನಾವಣೆಯ ಬಳಿಕ ತಮ್ಮ ಅಭ್ಯರ್ಥಿಯನ್ನು ಸೂಚಿಸುವಂತಾಗಬೇಕು.
  2. ಪಕ್ಷಾತೀತ ಅಭ್ಯರ್ಥಿಗಳು ಚುನಾವಣೆಯ ಬಳಿಕ ಯಾವುದೇ ಪಕ್ಷಕ್ಕೂ ಸೇರಲಿಕ್ಕೆ ಅವಕಾಶವಿರಬಾರದು.
  3. ಪ್ರಾನ್ಸ್ ಹಾಗೂ ಮತ್ತಿತರ  ಕೆಲವು ದೇಶಗಳಲ್ಲಿ ಇರುವಂತೆ ಅಭ್ಯರ್ಥಿಯು ಆತನನ್ನು ಬೆಂಬಲಿಸುವ ಪಕ್ಷದ ಶಿಸ್ತಿಗೆ ಒಳಪಡುವಂತಿರಬೇಕು
  4. ಪಕ್ಷಾಂತರ ಮಾಡುವವರು ಮತ್ತು ಅದಕ್ಕೆ ಪ್ರೇರೇಪಣೆ ನೀಡುವ, ಹಣ ಒದಗಿಸುವ ಎಲ್ಲರೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಒಳಪಟ್ಟು ಮುಂದೆ ಚುನಾವಣೆಗೆ ಅನರ್ಹರಾಗುವಂತಾಗಬೇಕು.
  5. ದಂಡ ಸಂಹಿತೆಯಲ್ಲಿ ಅಪರಾಧಿ ಎಂದೆಣಿಸಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಬೇಕು
  6. ಅಭ್ಯರ್ಥಿಗಳು ತಮ್ಮ ಮತ್ತು ಕುಟುಂಬಿಕರ ಆಸ್ತಿ ಪಾಸ್ತಿಗಳ ದೃಢೀಕೃತ ವಿವರಗಳನ್ನು ಸ್ಪರ್ಧಿಸುವಾಗ ಮತ್ತು  ಗೆದ್ದ ಬಳಿಕ  ವರ್ಷಂಪ್ರತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ನೀಡದೇ ಇದ್ದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಅಧಿಕಾರವು ಸಂಬಂಧಪಟ್ಟ ಅಧಿಕಾರಿಗೆ ಇರಬೇಕು.
  7. ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ತಿನ ಆಯ್ಕೆಯ ನಿಯಮಗಳನ್ನು ಶಾಸನ ಸಭೆಗೂ, ಸಂಸತ್ ಸಭೆಗೂ ಅನ್ವಯಗೊಳಿಸಬಹುದು.

ವಾರ್ತಾಭಾರತಿ

ಅದ್ವಾನಿಯ ರಥಯಾತ್ರೆಯ ಪ್ರಹಸನ

[dropcap]ಆ[/dropcap]ಪರೇಶನ್ ಕಮಲದ ಮೂಲಕ ಅಧಿಕಾರದ ಪೀಠವನ್ನೇರಿದ ಮಾನ್ಯ ಯೆಡ್ಯೂರಪ್ಪನವರು ಏರಿದ್ದ ಪೀಠವನ್ನು ಉಳಿಸಿಕೊಳ್ಳುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ರಾಜ್ಯಪಾಲರು, ಲೋಕಾಯುಕ್ತರು, ನ್ಯಾಯಾಲಯಗಳು ಮುಂತಾದವರನ್ನೆಲ್ಲಾ ಕಡೆಗಣಿಸಿ, ತಮ್ಮ ಅಧಿಕಾರಕ್ಕೆ ಏನೆಲ್ಲಾ ಒಳಪಟ್ಟಿದೆಯೋ ಆ ಎಲ್ಲ ಕ್ರಮಗಳನ್ನು ಕೈಗೊಂಡರೂ ಸಹಾ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತನ್ನ ವರ್ತನೆಗೆ ತಕ್ಕ ಉತ್ತರ ನೀಡಬೇಕಾಗಿದೆ. ಅವರ ಜೊತೆಯಲ್ಲೇ ಅವರ ಮಂತ್ರಿಮಂಡಲದಲ್ಲಿ ಮುಖ್ಯ ಖಾತೆಗಳನ್ನು ವಹಿಸಿಕೊಂಡಿದ್ದ  ಜನಾರ್ಧನ ರೆಡ್ಡಿ ಮತ್ತವರ ಸಂಬಂಧಿ ಶ್ರೀನಿವಾಸ ರೆಡ್ಡಿಯವರು ಕರ್ನಾಟಕದಲ್ಲಿ ಎಷ್ಟು ಹಾರಾಡಿ ಕಣ್ಣ ಮುಚ್ಚಾಲೆ ಆಡಿದರೂ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅವ್ಯವ್ಯವಹಾರಗಳ ತನಿಖೆಗೆ ನೇಮಿಸಲ್ಪಟ್ಟ ಸಿಬಿಐ ತನಿಖಾ ತಂಡದ ಕ್ಷಿಪ್ರ ಕಾರ್ಯಾಚರಣೆಯಿಂದ ಅಕ್ರಮಗಳನ್ನು ಅಡಗಿಸಲಾಗದೆ ಬಂದನಕ್ಕೆ ಒಳಗಾಗಬೇಕಾಯ್ತು. ಅವರ  ಮೇಲಿರುವ ಆರೋಪಗಳು ಗಂಬೀರ ಸ್ವರೂಪದವುಗಳೂ, ಅಪಾರ ಮೊತ್ತದ ಅಂತರರಾಷ್ಟ್ರೀಯ ಅವ್ಯವಹಾರ, ಹವಾಲ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಭಂದಪಟ್ಟವುಗಳೂ ಆದುದರಿಂದ ಜಾಮೀನು ಕೂಡಾ ನಿರಾಕರಿಸಲ್ಪಟ್ಟು ಜೈಲಲ್ಲೇ ಬಹುಕಾಲ  ಬಂದನದಲ್ಲಿರಬೇಕಾಗಿ ಬಂದಿದೆ. ದೇಶದ ಸಂಪತ್ತನ್ನು ದರೋಡೆ ಮಾಡಿ ಚೈನಾ, ಪಾಕಿಸ್ಥಾನ, ಮುಂತಾದ ವಿದೇಶಗಳಿಗೆ ವಿವಿಧ ಬಂದರುಗಳ ಮೂಲಕ ರಫ್ತು ಮಾಡಿ ಆ ಹಣವನ್ನು ವಿವಿಧ ದೇಶಗಳಲ್ಲಿ ಬಚ್ಚಿಡಲಾಗಿದೆ. ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸಹಿತ 6 ವಿದೇಶಿ ಕಂಪೆನಿಗಳನ್ನು ಹೊಂದಿರುವುದು ತಿಳಿದುಬಂದಿದೆ. ಕರ್ನಾಟಕದಲ್ಲೂ ಅಪಾರ ಮೊತ್ತದ ನೈಸರ್ಗಿಕ ಸಂಪತ್ತಿನ ಲೂಟಿ, ಅಕ್ರಮ ಗಣಿಗಾರಿಕೆ, ಅರಣ್ಯ ಕಬಳಿಕೆ, ಜಲ ಸಂಪನ್ಮೂಲದ ದುರುಪಯೋಗ, ಬಡವರ ಆಸ್ತಿಗಳ ಕೊಳ್ಳೆ ಇತ್ಯಾದಿಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ ನಿರ್ಮಿಸಲ್ಪಟ್ಟ ಅರಮನೆಯಂಥಾ ಭವ್ಯ ಬಂಗಲೆ ಮತ್ತು ಅದರೊಳಗೆ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಸ್ವರ್ಣ ಖಚಿತ ಆಸನಗಳು, ಚಿನ್ನ ಬೆಳ್ಳಿ ಒಡವೆ, ಪಾತ್ರೆ ಪಗಡಿಗಳು, ಅನೇಕ ವಿದೇಶಿ ನಿರ್ಮಿತ ಐಷರಾಮೀ ಹೆಲಿಕಾಪ್ಟರು, ಕಾರುಗಳು ಇದ್ದವುಗಳನ್ನು ಸ್ವಾಧೀನಪಡಿಸಲಾಗಿವೆ. ಒಬ್ಬ ಸಾದಾ ಪೋಲೀಸ್ ಪೇದೆಯ ಮಗನಾಗಿದ್ದು ಸೈಕಲಿನಲ್ಲಿ ಓಡಾಡುತ್ತಿದ್ದ ಮತ್ತು ಕೇವಲ ಹೈಸ್ಕೂಲ್ ವಿದ್ಯೆಯನ್ನಷ್ಟೇ ಹೊಂದಿದ ಜನಾರ್ಧನ ರೆಡ್ಡಿ ಮತ್ತು ಅವನ ಸಹೋದರರು ಆರೇಳು ವರ್ಷಗಳ ಅವಧಿಯೊಳಗೆ ಇಷ್ಟೊಂದು ಸಂಪತ್ತನ್ನು ಸಂಪಾದಿಸಿದ್ದುದ್ದಾದರೂ ಹೇಗೆ ಎನ್ನುವುದರ ವಿವರಣೆಯನ್ನು ಅವರು ಕೊಡಬೇಕಿದೆ. ಮಾಜೀ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಮತ್ತು ಅವರ ಸುಪುತ್ರ ಕಟ್ಟಾ ಜಗದೀಶ್ ಕೂಡಾ ಭೂ ಹಗರಣದಲ್ಲಿ ಸದ್ಯಕ್ಕೆ ಜೈಲಲ್ಲೇ ನೆಲೆಯೂರ ಬೇಕಾಗಿದೆ. ಅರಣ್ಯ ಸಚಿವ ಯೋಗೇಶ್ವರ್ ರವರು ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಯೆಡ್ಯೂರಪ್ಪನವರೂ ಬಂಧನದ ಸರದಿಯಲ್ಲಿದ್ದಾರೆ. ಇಷ್ಟೆಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದರೂ ಅವರ ರಕ್ಷಣೆಗೆ ಬಿಜೆಪಿಯ ವರಿಷ್ಠರು ಮುಂದಾಗುತ್ತಿರುವುದು  ಆ ಪಕ್ಷದ ನೀತಿ ನಿಯಮಗಳಿಗೆ ಹಿಡಿದ ಕನ್ನಡಿಯಾಗಿದೆ.

ರಾಂ ದೇವ್‘ರವರನ್ನು ಮುಂದಿರಿಸಿ ವಿದೇಶಿ ಬೇಂಕುಗಳಲ್ಲಿರುವ ಹಣವನ್ನು ವಶ ಪಡಿಸಿಕೊಳ್ಳುವ ನೆಪದಲ್ಲಿ ದೇಶದಾದ್ಯಂತ ಅಶಾಂತಿ ಹುಟ್ಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿ ಅಧಿಕಾರವನ್ನು ಕಬಳಿಸುವ ಹುನ್ನಾರವನ್ನು ಬಿಜೆಪಿ ಹೊಂದಿತ್ತು ಎಂಬುದು ಅವರನ್ನು ಬಂಧಿಸಿದ ಪ್ರಹಸನದಲ್ಲಿ ಬಹಿರಂಗವಾಗಿತ್ತು. ಆ ಬಳಿಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದದ ಚಳುವಳಿಯಲ್ಲಿ ನುಸುಳಿಕೊಂಡು ಅವಕಾಶಕ್ಕಾಗಿ ಹವಣಿಸುತ್ತಿದ್ದುದೂ ಬೆಳಕಿಗೆ ಬಂತು. ಅಧಿಕಾರವಿರುವಲ್ಲೆಲ್ಲ ಮಂತ್ರಿವರ್ಯರ ಮತ್ತು  ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಪಕ್ಷ ಇದೀಗ ಭ್ರಷ್ಟಾಚಾರವನ್ನು ತೊಲಗಿಸುವ ನೆಪದಲ್ಲಿ ಅಧ್ವಾನಿಯವರ ನೇತೃತ್ವದಲ್ಲಿ ರಥಯಾತ್ರೆ ಪ್ರಾರಂಭಿಸುವುದಾಗಿ ಹೇಳುತ್ತಿದೆ. ಅಣ್ಣಾ ಹಜಾರೆಯವರು ಈ ಯಾತ್ರೆಯನ್ನು ಬರೇ ರಾಜಕೀಯ ಗಿಮಿಕ್ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರತು ಪಡಿಸಿ ಇತರ ಯಾವುದೇ ಭ್ರಷ್ಟಾಚಾರ ರಹಿತ ಪಕ್ಷಗಳಿಗೆ ತಾನು ಬೆಂಬಲ ನೀಡುವೆನು ಎಂಬ ಅಣ್ಣಾ ಹಜಾರೆಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ಕಮ್ಯುನಿಷ್ಟ್ ಪಕ್ಷಗಳು ಮತ್ತು ಎಡ ಪಕ್ಷಗಳು ಸಹಕರಿಸಿ ಜನಜಾಗೃತಿಯನ್ನು ಉಂಟುಮಾಡುವ ಅಗತ್ಯವಿದೆ. ಜನಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಾ ನಮ್ಮ ದೇಶವನ್ನು ಇಂದು ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಕೋಮುವಾದ ಪ್ರೇರಿತ ಬಲ ಪಂಥೀಯ ದಾಳಿ ದಬ್ಬಾಳಿಕೆಗಳನ್ನು ವಿಫಲಗೊಳಿಸಲು ಮುಂದಾಗಬೇಕೆಂದು ಅಪೇಕ್ಷಿಸುತ್ತೇವೆ.

ವಾರ್ತಾಭಾರತಿ