Writings : ಕೃತಿಗಳು

BV Kakkilaya was also an accomplished writer. ಬಿವಿ ಕಕ್ಕಿಲ್ಲಾಯರು ಓರ್ವ ಅತ್ಯುತ್ತಮ ಲೇಖಕರೂ ಆಗಿದ್ದರು.

He was one of the first to introduce left and progressive literature in Kannada. By establishing Navakarnataka Publications, he played a key role in spreading progressive literature to every household in Karnataka. His books have been awarded several prizes, including the Kannada Sahitya Academy honours.

ಎಡ ಹಾಗೂ ಪ್ರಗತಿಪರ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಷ್ಟೇ ಅಲ್ಲದೆ, ನವಕರ್ನಾಟಕ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಕನ್ನಡಿಗರ ಮನೆಮನೆಗೆ ವೈಚಾರಿಕ ಸಾಹಿತ್ಯವು ತಲುಪುವುದಕ್ಕೆ ಅವರು ನೀಡಿರುವ ಕೊಡೂಗೆ ಅತ್ಯಪಾರವಾದುದು. ಕಕ್ಕಿಲ್ಲಾಯರು ಬರೆದಿರುವ ಹಾಗೂ ಅನುವಾದಿಸಿರುವ ಕೃತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿಯದೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಬಿ ವಿ ಕಕ್ಕಿಲ್ಲಾಯರ ಕೃತಿಗಳು

1. ಕಮ್ಯುನಿಸಂ (1954,1978,1984,2006)

2.ಭೂಮಿ ಮತ್ತು ಆಕಾಶ (ಅನುವಾದ; ಮೂಲ: ವೋಲ್ಕೋವ್) (1963)

3.ಮಾನವನ ನಡಿಗೆ, ವಿಜ್ಞಾನದೆಡೆಗೆ

4. ದ್ವಂದ್ವಮಾನ ಚಾರಿತ್ರಿಕ ಭೌತಿಕವಾದ


5.ಕಾರ್ಲ್ ಮಾರ್ಕ್ಸ್ : ಬದುಕು, ಬರಹ (1985, ಎರಡನೇ ಮುದ್ರಣ: 2019) (ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ ಪಡೆದ ಕೃತಿ)

6. ಫ್ರೆಡರಿಕ್ ಎಂಗೆಲ್ಸ್: ಜೀವನ, ಚಿಂತನ (1986) (ಕರ್ನಾಟಕ ಸಾಹಿತ್ಯ ಅಕಾಡೆಮಿಯ 1986ರ ಉತ್ತಮ ಕೃತಿ [ಜೀವನ ಚರಿತ್ರೆ] ಪ್ರಶಸ್ತಿ)

7.ಇರವು ಮತ್ತು ಅರಿವು (ಅನುವಾದ) (1988,2004)

8. ಭಾರತೀಯ ಚಿಂತನೆ, ಹಿಂದೂ ಧರ್ಮ, ಕಮ್ಯೂನಿಸಂ (1989)

9.ಪ್ರಾಚೀನ ಭಾರತದಲ್ಲಿ ಭೌತಿಕವಾದ (1989,2006) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1989ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ-ಸೃಜನೇತರ] ಪ್ರಶಸ್ತಿ)

10.ಬಾಬ್ರಿ ಮಸೀದಿ, ರಾಮಜನ್ಮ ಭೂಮಿ ವಿವಾದ (1989) (ಅನುವಾದ; ಮೂಲ:ಸಿ. ರಾಜೇಶ್ವರ ರಾವ್)

11. ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ (1990) (ಅನುವಾದ; ಮೂಲ: ಇರ್ಫಾನ್ ಹಬೀಬ್)

12.ಭಾರತೀಯ ದರ್ಶನಗಳು (1994,1996) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1994ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ – 2] ಪ್ರಶಸ್ತಿ)

13. ಭಾರತಕ್ಕೊಂದು ಬದಲು ದಾರಿ (1997)

14. ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು (1997)

15. ಬರೆಯದ ದಿನಚರಿಯ ಮರೆಯದ ಪುಟಗಳು (ಆತ್ಮಕಥೆ) (2003)

16. ಅಸ್ವಸ್ಥ ಬಂಡವಾಳಶಾಹಿ ಸಮಾಜದ ನಿಜರೂಪ

17. ದಲಿತರ ಸಮಸ್ಯೆಗಳು ಮತ್ತು ಪರಿಹಾರ  (2008, ಅನುವಾದ; ಮೂಲ: ಡಿ. ರಾಜಾ)
18. ಭಾರತದ ಮುಸ್ಲಿಮರು (ಸಾಚಾರ್ ಸಮಿತಿ ವರದಿ) (2008, ಅನುವಾದ: ಮೂಲ: ಶಮೀಮ್ ಫೈಜೀ)

ಮೊದಲ ಪಾರ್ಲಿಮೆಂಟಿನ ಸದಸ್ಯನಾಗಿ ನನ್ನ ಅನುಭವಗಳು

(ಕೃಪೆ: ಹೊಸತು ಮಾಸ ಪತ್ರಿಕೆ, ಜೂನ್ 2012) (ಬರೆದದ್ದು: ಮೇ 18, 2012; ಇದು ಬಿ ವಿ ಕಕ್ಕಿಲ್ಲಾಯರ ಕೊನೆಯ ಲೇಖನ)

[dropcap]ಭಾ[/dropcap]ರತ ಕಮ್ಯೂನಿಸ್ಟ್ ಪಕ್ಷದ, ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರದ ನಿರ್ದೇಶನದಂತೆ ನನ್ನನ್ನು ಮದ್ರಾಸ್ ಎಸೆಂಬ್ಲಿಯಿಂದ 1952ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ನನ್ನ ವಯಸ್ಸು ಮೂವತ್ತ ಮೂರು ವರ್ಷಗಳು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ದೃಢವಾದ ನಂಬಿಕೆಯಿದ್ದ ಪಂಡಿತ್ ಜವಾಹರಲಾಲ್ ನೆಹರೂರವರು ಪ್ರಧಾನಿಯಾಗಿಯೂ, ಮಹಾನ್ ವಿದ್ವಾಂಸರಾಗಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ ಉಪರಾಷ್ಟ್ರಪತಿಗಳೂ, ರಾಜ್ಯಸಭೆಯ ಸಭಾಪತಿಗಳೂ ಆಗಿದ್ದ ಆ ಸಂದರ್ಭದಲ್ಲಿ ಆ ಸದನದ ಸದಸ್ಯನಾದುದು ಯುವಕನಾಗಿದ್ದ ನನ್ನಂತಹವನೊಬ್ಬನಿಗೆ ಪಕ್ಷವು ಒದಗಿಸಿದ ಸದವಕಾಶವೇ ಆಗಿತ್ತು. ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ನನಗೆ ರಾಜ್ಯ ಸಭೆಯ ಸದಸ್ಯತ್ವವನ್ನು ನೀಡಲಾಗಿದ್ದುದರಿಂದ ನಾನು ರಾಜ್ಯ ಸಭೆಯಲ್ಲಿ ಓರ್ವ ಕನ್ನಡಿಗನಾಗಿ ಆ 2 ವರ್ಷಗಳ ಕಾಲಾವಧಿಯನ್ನು ಸದುಪಯೋಗ ಪಡಿಸಿಕೊಂಡಿರುವೆನೆಂಬ ತೃಪ್ತಿಯು ನನಗಿದೆ. ಆ ಎರಡು ವರ್ಷಗಳಲ್ಲಿ ರಾಜ್ಯದ ಬರಗಾಲದ ಬಗ್ಗೆ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯಿಸಿ ವಿವಿಧ ಚರ್ಚೆಗಳಲ್ಲಿ ನಾನು ಭಾಗವಹಿಸಿದ್ದೆ. ರಾಜ್ಯದ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿಯೂ, ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದಲೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆ; ಬರ ಪರಿಹಾರವನ್ನು ಒತ್ತಾಯಿಸುವುದಕ್ಕಾಗಿ, ಆಹಾರ ಪೂರೈಕೆಯನ್ನು ಉತ್ತಮ ಪಡಿಸಬೇಕೆಂದು ಒತ್ತಾಯಿಸುವುದಕ್ಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಪಕ್ಷವು ಸಂಘಟಿಸಿದ್ದ ಚಳುವಳಿಗಳಲ್ಲೂ ನಾನು ಭಾಗವಹಿಸಿದ್ದೆ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್ ಕೆ ಉಪಾಧ್ಯಾಯ ಮತ್ತು ಸಂಗಡಿಗರೊಂದಿಗೆ ರಾಜ್ಯದಾದ್ಯಂತ ಪ್ರವಾಸಗೈದ ಆ ಅನುಭವವು ಮರೆಯಲಾಗದ್ದು.

ಹಿಂದಿಯ ಮತ್ತು ಆಂಗ್ಲಭಾಷೆಯ ಜ್ಞಾನವಿರದ, ಮಲೆಯಾಳಿ ಭಾಷೆಯನ್ನು ಮಾತ್ರ ಮಾತನಾಡಬಲ್ಲ ನಮ್ಮ ಪಕ್ಷದ ಸದಸ್ಯರೊಬ್ಬರು ಮದ್ರಾಸ್ ಎಸೆಂಬ್ಲಿಯಿಂದಲೇ ಚುನಾಯಿತರಾಗಿ ರಾಜ್ಯ ಸಭೆಯಲ್ಲಿದ್ದರು. ಅಧ್ಯಕ್ಷರ ಅನುಮತಿಯನ್ನು ಕೋರಿ, ತನ್ನ ವಿಷಯಗಳನ್ನು ಮಂಡಿಸುತ್ತಾ ಮಲೆಯಾಳಿ ಭಾಷೆಯಲ್ಲಿ ಅವರು ಮಾಡಿದ್ದ ಭಾಷಣವನ್ನು ನಾನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದೆನು. ಆ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್‘ರವರು ಸಭಾಧ್ಯಕ್ಷರಾಗಿಯೂ, ಪಂಡಿತ್ ಜವಾಹರಲಾಲ್ ನೆಹರೂರವರು ಸಭಾನಾಯಕರಾಗಿಯೂ ಸಭೆಯಲ್ಲಿ ಉಪಸ್ಥಿತರಾಗಿದ್ದರು. ನೆಹರೂರವರು ನನ್ನ ಆಂಗ್ಲ ಭಾಷಣದ ಧಾಟಿಯನ್ನೂ, ಮಂಡಿಸಿದ ಬೇಡಿಕೆಗಳ ವಿವರಣೆಗಳ ಕ್ರಮವನ್ನೂ ಕೇಳಿ ಅವರ ಭಾಷಣದಲ್ಲಿ ನನ್ನ ಕೃತ್ಯಕ್ಕೆ ಮುಕ್ತ ಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಮ್ಮ ಕೋರಿಕೆಗೆ ಅವರ ಒಪ್ಪಿಗೆಯನ್ನು ಸೂಚಿಸಿದ್ದರು. ಇದು ನನಗೆ ದೊರೆತ ಅಪೂರ್ವ ಸುಸಂಧರ್ಭವೆಂದು ನಾನು ಭಾವಿಸುತ್ತೇನೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ನಾನು ಕಾಂಗ್ರೆಸೇತರರು ಸಂಘಟಿಸಿದ್ದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ (ಅಕರಾನಿಪ) ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವೆನು. ಹುಬ್ಬಳ್ಳಿಯಲ್ಲಿ ಅಕರಾನಿಪ ಸದಸ್ಯರು ಹಮ್ಮಿ ಕೊಂಡಿದ್ದ ಒಂದು ಚಳುವಳಿಯನ್ನು ಅಲ್ಲಿನ ಕಾರ್ಯಕರ್ತರು ಬೃಹತ್ ಚಳುವಳಿಯಾಗಿ ನಡೆಸಿದ ಸಂದರ್ಭದಲ್ಲಿ,  ಸಮಿತಿಯ ಮುಖ್ಯ ಸಂಘಟಕರಾಗಿದ್ದ ಸಿಪಿಐ ನಾಯಕ ಎ ಜೆ ಮುಧೋಳ್ ಮತ್ತಿತರ  ಹಲವಾರು ಸದಸ್ಯರನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಮೂಲಕ ವಿಷಯವನ್ನು  ಮಂಡಿಸಿ ಬಂಧಿತರಾಗಿದ್ದ ಎಲ್ಲರ ಬಿಡುಗಡೆ ಮತ್ತು ಕರ್ನಾಟಕ ಏಕೀಕರಣಕ್ಕೆ ಸಹಾನುಭೂತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದೆನು. ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸುತ್ತಾ ಕೇರಳದವನಾಗಿ ಪರಿಚಯಿಸಿಕೊಳ್ಳುವ ಅಭಿಲಾಷೆಯನ್ನು ನಾನು ಎಂದೂ ಪ್ರಕಟಿಸಿರಲಿಲ್ಲ. ನನ್ನ ಪಕ್ಷವು ಸಹಾ ನನ್ನನ್ನು ಒಬ್ಬ ಕರ್ನಾಟಕದ ಕಾರ್ಯಕರ್ತನೆಂದು ಪರಿಗಣಿಸಿತ್ತಲ್ಲದೆ ಬೇರಾವುದೇ ಭಾಷೆ, ಯಾ ಪ್ರಾಂತ್ಯಕ್ಕೆ ಸೇರಿದವನೆಂದು ಪರಿಗಣಿಸಿರಲಿಲ್ಲವಾದ್ದರಿಂದ ನಾನು ಇಂದಿಗೂ ಕರ್ನಾಟಕದವನಾಗಿಯೇ ಉಳಿದಿದ್ದೇನೆ.

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

(ಬರೆದದ್ದು ಜನವರಿ 10, 2012)

ಮಾನ್ಯ ಜಿಲಾಧಿಕಾರಿಗಳು,
ದ ಕ ಜಿಲ್ಲೆ, ಮಂಗಳೂರು.
ಇವರಿಗೆ

ಮಾನ್ಯರೇ,

ವಿಷಯ: 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

ತಮ್ಮ ಆಶ್ರಯದಲ್ಲಿ ಇದೇ ತಿಂಗಳ ದಿ.12 ರಿಂದ 16 ರವರೆಗೆ ಜರುಗುವ 17ನೇಯ ರಾಷ್ಟ್ರೀಯ ಯುವಜನೋತ್ಸದಲ್ಲಿ ಪಾಲ್ಗೊಳ್ಳಲು ತಾವು ನನಗೆ ಕಳುಹಿಸಿದ ಆಮಂತ್ರಣವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಅನಾರೋಗ್ಯದ ನಿಮಿತ್ತ ಸದರಿ ಉತ್ಸವಕ್ಕೆ ಖುದ್ದಾಗಿ ಹಾಜರಾಗಲು ಅಸಮರ್ಥನಾದುದರಿಂದ ತಮ್ಮ ಕಾರ್ಯಕ್ಕೆ ಈ ಶುಭಕಾಮನೆಗಳನ್ನು ಕಳುಹಿಸುತ್ತಿದ್ದೇನೆ.

ನಮ್ಮ ಯುವಜನರು ದೇಶದ ಪ್ರಗತಿಪರ, ರಚನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಮೂಢನಂಬಿಕೆ, ಜಾತಿಬೇಧ, ಕೋಮು ವೈಷಮ್ಯ, ಪ್ರಾಂತೀಯ ಸಂಕುಚಿತ ಭಾವನೆಗಳೆಲ್ಲವುಗಳನ್ನು ಹಿಮ್ಮಟ್ಟಿ, ಜಾತ್ಯಾತೀತ, ವರ್ಗಬೇಧ, ಶೋಷಣೆ  ಭ್ರಷ್ಟಾಚಾರ ರಹಿತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಈ ಉತ್ಸವವು ಪ್ರೇರೇಪಣೆಯಾಗಲಿ ಎಂಬ ಹೆಬ್ಬಯಕೆಯಿಂದ ಉತ್ಸವಕ್ಕೆ ನನ್ನ ಶುಭಕಾಮನೆಗಳನ್ನು ಕೋರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಬಿ ವಿ ಕಕ್ಕಿಲ್ಲಾಯ.