ವಿಠಲ ಹಾಗೂ ಲಿಂಗಪ್ಪ ಮಲೆಕುಡಿಯರ ಬಿಡುಗಡೆಯನ್ನು ಆಗ್ರಹಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಂಸದ ಬಿ.ವಿ. ಕಕ್ಕಿಲ್ಲಾಯರ ಭಾಷಣ (ಇದು ಕಕ್ಕಿಲ್ಲಾಯರ ಕೊನೆಯ ಭಾಷಣ)
ಮೇ 18, 2012; ದಕ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಬಿ ವಿ ಕಕ್ಕಿಲ್ಲಾಯ, ವಿಶ್ವನಾಥ ನಾಯಕ್ ಮತ್ತಿತರರು
ಪತ್ರಿಕಾ ವರದಿಗಳು
- http://www.thehindu.com/news/cities/Mangalore/article3435804.ece
- http://www.deccanherald.com/content/250539/drop-cases-against-vittal.html
- http://vijaykarnataka.indiatimes.com/articleshow/13271663.cms
- http://mangaloretoday.com/mt/index.php?action=mn&type=5917
- http://www.coastaldigest.com
ಪ್ರತಿಭಟನೆಗೆ ಪೂರ್ವಭಾವಿಯಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ಹೇಳಿಕೆ
ಬೆಳ್ತಂಗಡಿಯ ಕುತ್ಲೂರಿಗೆ ಸೇರಿದ, ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯ ಅವರನ್ನು ದೇಶದ್ರೋಹದಂತಹ ಗಂಭೀರವಾದ, ಮರಣದಂಡನೆಗೂ ಕಾರಣವಾಗಬಲ್ಲ ಆರೋಪಗಳಡಿ ಬಂಧಿಸಿ ಜಾಮೀನನ್ನು ನಿರಾಕರಿಸಿ ಜೈಲಲ್ಲಿಟ್ಟಿರುವ ಸರಕಾರದ ಕ್ರಮವನ್ನು ಉಗ್ರವಾಗಿ ಖಂಡಿಸುವುದಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿಗಳ ಆಶ್ರಯದಲ್ಲಿ, ಪಕ್ಷದ ಅತಿ ಹಿರಿಯ ನಾಯಕರಲ್ಲೊಬ್ಬರೂ, ಸ್ವಾತಂತ್ರ್ಯ ಹೋರಾಟಗಾರರೂ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಮಾಜಿ ಸದಸ್ಯರೂ ಆಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಇದೇ ತಾ. ಮೇ 18ರಂದು ಶುಕ್ರವಾರ ಬೆಳಗ್ಗೆ 10.30ರಿಂದ 11.30ರವರೆಗೆ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯೆದುರು ಹಮ್ಮಿಕೊಳ್ಳಲಾಗಿದೆ.
ನಮ್ಮ ದೇಶದ ಹಲವೆಡೆ, ಅದರಲ್ಲೂ ಮುಖ್ಯವಾಗಿ ಜಾರ್ಖಂಡ್, ಛತ್ತೀಸಗಢ, ಬಿಹಾರ್, ಒರಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿರುವ, ನೈಸರ್ಗಿಕ ಸಂಪತ್ತಿನ ಖನಿಜಗಳಿಂದ ತುಂಬಿರುವ ದಂಡಕಾರಣ್ಯದಂತಹ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿರುವ ನಮ್ಮ ದೇಶದ ಆದಿವಾಸಿಗಳನ್ನೂ, ಮೂಲನಿವಾಸಿಗಳನ್ನೂ, ಬುಡಕಟ್ಟುಗಳಿಗೆ ಸೇರಿದ ಜನರನ್ನೂ ಒಕ್ಕಲೆಬ್ಬಿಸಿ, ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಮರಗಳನ್ನು ಕಡಿದು ಸಾಗಿಸುವುದು, ಬೃಹತ್ ಉದ್ದಿಮೆಗಳ ಸ್ಥಾಪನೆ, ವಿದ್ಯುತ್ ಉತ್ಪಾದನೆ, ಪ್ರವಾಸಿ ಧಾಮಗಳ ನಿರ್ಮಾಣ ಇವೇ ಮುಂತಾದ ನಿಸರ್ಗ ವಿರೋಧಿ ಚಟುವಟಿಕೆಗಳಿಗಾಗಿ ನಮ್ಮ ದೇಶದೊಳಗಿನ ಹಾಗೂ ಇತರ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಧೀನಕ್ಕೆ ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಒಪ್ಪಿಸುತ್ತಿರುವುದನ್ನು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದೇವೆ. ಇದರಿಂದಾಗಿಸಹಸ್ರಾರು ವರ್ಶಃಅಗಳಿಂದ ನಿಸರ್ಗದ ಸಂಪತ್ತನ್ನು ಕಾಯುತ್ತಿದ್ದು, ಕಡು ಬಡತನದಿಂದ ಅಲ್ಲೇ ಜೀವಿಸುತ್ತಿರುವ ನಮ್ಮ ಕೋಟಿಗಟ್ಟಲೆ ಜನರು ದಿಕ್ಕು ಪಾಲಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಪೋಲೀಸರು ಹಾಗೂ ಅರೆ ಸೇನಾ ತುಕಡಿಗಳನ್ನೂ, ಸಲ್ವಾ ಜುಡುಂನಂತಹ ನ್ಯಾಯಬಾಹಿರವಾದ ಸಂಘಟನೆಗಳನ್ನೂ ಬಳಸಿಕೊಂಡು ಅಮಾಯಕ ಅರಣ್ಯವಾಸಿಗಳನ್ನು ಬೆದರಿಸಿ ಅವರ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅವರನ್ನು ಒಕ್ಕಲೆಬ್ಬಿಸುವ ದೌರ್ಜನ್ಯವನ್ನು ಸರಕಾರಗಳೇ ನಡೆಸುತ್ತಿದ್ದು, ಅಂತಹದನ್ನು ಎದುರಿಸುವ ಧೈರ್ಯ ತೋರುವ ಹಲವರನ್ನು ನಕ್ಸಲ್ ಗಳೆಂಬ ಹಣೆಪಟ್ಟಿ ಹಚ್ಚಿ ದೇಶದ್ರೋಹದ ಆರೋಪದಲ್ಲಿ ಕಾರಾಗೃಹಕ್ಕೆ ತಳ್ಳುತ್ತಿರುವುದನ್ನೂ ನಾವಿಂದು ಕಾಣುತ್ತಿದ್ದೇವೆ.
ಕುದುರೆಮುಖ ಅರಣ್ಯ ಪ್ರದೇಶದಿಂದಲೂ ಅಲ್ಲಿ ಶತಮಾನಗಳಿಂದಲೂ ವಾಸಿಸುತ್ತಿರುವ ಮಲೆಕುಡಿಯರಂತಹ ಬುಡಕಟ್ಟುಗಳವರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ನಮ್ಮ ರಾಜ್ಯ ಸರಕಾರವು ಕೈ ಹಾಕಿರುವುದು ಸರ್ವವೇದ್ಯವಾಗಿದೆ. ಇದನ್ನು ವಿರೋಧಿಸುವವರ ಮೇಲೆ ನಕ್ಸಲ್ ನಿಗ್ರಹ ದಳದ ಹೆಸರಿನಲ್ಲಿ ಅವ್ಯಾಹತವಾಗಿ ದೌರ್ಜನ್ಯಗಳಾಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಪ್ಪ ಮಲೆಕುಡಿಯರನ್ನೂ ಕೂಡ ಇದೇ ಕಾರಣಕ್ಕೆ ಬಂಧಿಸಿ ಅವರ ಮೇಲೆಯೂ ದೇಶದ್ರೋಹದ ಆರೋಪವನ್ನು ಹೊರಿಸಿ ಜೈಲಲ್ಲಿರಿಸಲಾಗಿದ್ದು, ಕೇವಲ ಕ್ಷುಲ್ಲಕವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದರೂ ಬಹಿರಂಗ ಪಡಿಸಲಾಗದಂತಹ ಭಯಂಕರವಾದ ಸಾಕ್ಷ್ಯಗಳು ಇನ್ನೂ ಇವೆ ಎಂದೆಲ್ಲ ಹೇಳುವ ಮೂಲಕ ಸಾರ್ವಜನಿಕರನ್ನು ದಿಕ್ಕು ತಪ್ಪಿಸಲಾಗುತ್ತಿದೆ.
ಇಷ್ಟೇ ಅಲ್ಲದೆ, ಪರಿಶಿಷ್ಟ ವರ್ಗದಿಂದ ಬಂದಿರುವ ವಿಠಲನಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಪತ್ರಿಕೋದ್ಯಮದಂತಹ ಅತ್ಯಂತ ಪ್ರಮುಖವಾದ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುವುದು ಸಾಕಷ್ಟು ವಿರಳವೇ ಆಗಿದ್ದು, ಅದನ್ನು ಕೂಡಾ ಮಟ್ಟ ಹಾಕುವ ಹುನ್ನಾರವು ಈ ಬಂಧನದ ಹಿಂದೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಟ್ಟಿನಲ್ಲಿ ಮಲೆಕುಡಿಯರಂತಹ ಬಡಜನರನ್ನು ಒಕ್ಕಲೆಬ್ಬಿಸಿ ಇನ್ನಷ್ಟು ನಿರ್ಗತಿಕರನ್ನಾಗಿ ಮಾಡುವುದಲ್ಲದೆ, ಅವರಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿಯು ಉನ್ನತ ವಿದ್ಯಾಭ್ಯಾಸವನ್ನು ಮಾಡದಂತೆ ತಡೆಯುವ ಈ ಸರಕಾರಿ ಷಡ್ಯಂತ್ರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆದ್ದರಿಂದ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯರ ಮೇಲೆ ಹೊರಿಸಲಾಗಿರುವ ದೇಶದ್ರೋಹದ ಆರೋಪಗಳನ್ನು ಈ ಕೂಡಲೇ ಹಿಂಪಡೆದು, ಅವರಿಬ್ಬರನ್ನೂ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಸರಕಾರದ ದುರ್ವರ್ತನೆಯು ವಿಠಲ ಮಲೆಕುಡಿಯರ ಶಿಕ್ಷಣಕ್ಕೆ ಕುತ್ತಾಗಿ ಪರಿಣಮಿಸಿರುವುದರಿಂದ ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಂಡು, ಅವರು ಪೂರ್ವ ನಿಗದಿತ ಸಮಯದೊಳಗೇ ತಮ್ಮ ಸ್ನಾತಕೋತ್ತರ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸುವುದಕ್ಕೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.
ಅದೇ ರೀತಿ, ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಬಡಜನರ ಚೂರೊಪಾರು ಅಸ್ತಿಗಳನ್ನೂ, ಅವರು ಜೀವಿಸುವ ಹಕ್ಕನ್ನೂ ಕಸಿದುಕೊಳ್ಳುವ ಎಲ್ಲ ಕ್ರಮಗಳನ್ನು ಈ ಕೂಡಲೇ ಸ್ಥಗಿತಗೊಳಿಸ ಬೇಕೆಂದು ನಾವು ಆಗ್ರಹಿಸುತ್ತೇವೆ.