ಬಿ ವಿ ಕಕ್ಕಿಲ್ಲಾಯ : ಜೀವನ, ಸಾಧನೆ

1919 ಎಪ್ರಿಲ್ 11: ಕೇರಳದ ಕಾಸರಗೋಡು ಸಮೀಪದ ಬೇವಿಂಜೆಯಲ್ಲಿ ಜನನ
1922: ತಂದೆಯವರ ಅಕಾಲ ಮೃತ್ಯು
1926-1937: ಕಾಸರಗೋಡಿನ ಬಾಸೆಲ್ ಮಿಷನ್ ಮಾಧ್ಯಮಿಕ ಶಾಲೆ ಹಾಗೂ ಜಿಲ್ಲಾ ಬೋರ್ಡು ಫ್ರೌಢ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ವರೆಗಿನ ಅಧ್ಯಯನ
1937-1939: ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಅಧ್ಯಯನ; ಸ್ವಾತಂತ್ರ್ಯ ಚಳುವಳಿ ಹಾಗೂ ಕಮ್ಯೂನಿಸ್ಟ್ ಸಿದ್ಧಾಂತದತ್ತ ಆಕರ್ಷಣೆ
1939-1942: ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎ. ಅಧ್ಯಯನ; ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯ, ಹಲವು ನಾಯಕರ ಸಂಪರ್ಕ ಹಾಗೂ ಒಡನಾಟ
1940: ಭಾರತ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ
1941-42: ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನಿನ ಮಂಗಳೂರು ಘಟಕದ ಕಾರ್ಯದರ್ಶಿ
1942 ಆಗಸ್ಟ್-1943: ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿ; ನಿಷೇಧಿತ ಸಾಹಿತ್ಯ ಹೊಂದಿದ್ದ ಆರೋಪದ ಮೇಲೆ ಬಂಧನ, 9 ತಿಂಗಳು ಮಂಗಳೂರಿನ ಸಬ್ ಜೈಲಿನಲ್ಲಿ ಬಂಧಿ
1943-45: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೀಡಿ, ಹಂಚು, ನೇಯ್ಗೆ, ಗೇರುಬೀಜ ಕಾರ್ಮಿಕರ ಸಂಘಟನೆ
1944: ಮುಂಬಯಿಯಲ್ಲಿ ವಿಜಯಲಕ್ಷ್ಮಿ ಪಂಡಿತ್ ಅಧ್ಯಕ್ಷತೆಯಲ್ಲಿ ನಡೆದ ಭಾರತ-ಸೋವಿಯತ್ ಸಾಂಸ್ಕೃತಿಕ ಸಂಘದ ಸಂಸ್ಥಾಪನಾ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗಿ
1945: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸಿನ ಮೊದಲ ದ.ಕ. ಜಿಲ್ಲಾ ಸಮ್ಮೇಳನ; ಎಸ್. ಎ. ಡಾಂಗೆ ಉಪಸ್ಥಿತಿ, ದ.ಕ. ಜಿಲ್ಲಾ ಟ್ರೇಡ್ ಯೂನಿಯನ್ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ. ನಂತರ ಚೆನ್ನೈ ಯಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸಿನ ರಾಷ್ಟ್ರೀಯ ಅಧಿವೇಶನದಲ್ಲಿ ಸಿಂಪ್ಸನ್ ಸೋನ್ಸ್ ಜೊತೆ ಪ್ರತಿನಿಧಿಯಾಗಿ ಭಾಗಿ.
1945-46: ಕಾರ್ಮಿಕರ ವೇತನ, ತುಟ್ಟಿಭತ್ತೆ ಇತ್ಯಾದಿ ಬೇಡಿಕೆಗಳಿಗಾಗಿ ಹಲವಾರು ಹೋರಾಟಗಳು.
1946 ಅಕ್ಟೋಬರ್: ಮತ್ತೆ ಬಂಧನ; ವೆಲ್ಲೂರು ಹಾಗೂ ಕಣ್ಣಾನ್ನೂರು ಜೈಲುಗಳಲ್ಲಿ ಸ್ಥಾನಬದ್ಧತೆ.
1947, ಆಗಸ್ಟ್  15: ಭಾರತಕ್ಕೆ ಸ್ವಾತಂತ್ರ್ಯ; ಕಣ್ಣಾನ್ನೂರು ಜೈಲಿನಿಂದ ಬಿಡುಗಡೆ, ಮಂಗಳೂರಲ್ಲಿ ಕಾರ್ಮಿಕ ಬಂಧುಗಳಿಂದ ಅದ್ದೂರಿ ಸ್ವಾಗತ. ಮತ್ತೆ ಪಕ್ಷದ ಹಾಗೂ ಕಾರ್ಮಿಕರ ಸಂಘಟನಾ ಕಾರ್ಯ.
1948-1950: ದೇಶಾದ್ಯಂತ ಕಮ್ಯೂನಿಸ್ಟರ ಮೇಲೆ ದಬ್ಬಾಳಿಕೆ, ಬಂಧನ. ಕಕ್ಕಿಲ್ಲಾಯರು ಭೂಗತರಾಗಿದ್ದುಕೊಂಡು ಅಪಾರ ತೊಂದರೆಗಳನ್ನನುಭವಿಸಿ ರಾಜ್ಯದಲ್ಲಿ ಪಕ್ಷದ ಹಾಗೂ ಕಾರ್ಮಿಕರ ಸಂಘಟನಾ ಕಾರ್ಯದಲ್ಲಿ ಸಕ್ರಿಯ.
1950: ದಾವಣಗೆರೆಯಲ್ಲಿ ಬಂಧನ; 6 ತಿಂಗಳ ಕಾಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ, ತದನಂತರ ಒಂದು ತಿಂಗಳು ಕುಡಲೂರಿನಲ್ಲಿ ಜೈಲುವಾಸ. ಜೈಲಿನಲ್ಲಿ ಮಾರ್ಕ್ ವಾದಿ ವಿಚಾರಧಾರೆಯ ಅಧ್ಯಯನ
1950-52: ರಾಜ್ಯಾದ್ಯಂತ ರೈತ-ಕಾರ್ಮಿಕರ ಸಂಘಟನಾ ಕಾರ್ಯ; ಕೊಡಗು, ದ.ಕ. ಜಿಲ್ಲೆಗಳಿಂದ ಚುನಾವಣೆಯಲ್ಲಿ ಸ್ಪರ್ಧೆ
1952-1954: ಮದ್ರಾಸ್ ಅಸೆಂಬ್ಲಿಯಿಂದ ರಾಜ್ಯಸಭೆಗೆ ಆಯ್ಕೆ. ರಾಜ್ಯದ ಬರಗಾಲ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ, ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯ. ರಾಜ್ಯಾದ್ಯಂತ ಪ್ರವಾಸ
1952-1956: ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯ. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ
1955, ಆಗಸ್ಟ್ 15: ಗೋವಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಮಂಗಳೂರಿನ ತಂಡದ ನಾಯಕತ್ವ, ಇದ್ದುಸ್ ಎಂಬ ಹಳ್ಳಿಯೊಳಕ್ಕೆ ನುಸುಳಿ ಭಾರತದ ಧ್ವಜಾರೋಹಣ ಮಾಡುವಲ್ಲಿ ಯಶಸ್ವಿ, ಪೋಲೀಸರಿಂದ ಏಟು, ಹಲವರಿಗೆ ಗಾಯಗಳು.
1956-1962: ಭೂಸುಧಾರಣೆಗಾಗಿ ರಾಜ್ಯಾದ್ಯಂತ ರೈತರ ಹೋರಾಟದ ಸಂಘಟನೆ; ಬೆಂಗಳೂರು, ಕೋಲಾರ, ಶ್ರೀರಂಗಪಟ್ಟಣ, ಹಂಪಿ ಹಾಗೂ ಗುಲ್ಬರ್ಗಾಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸಮ್ಮೇಳನ
1960: ಕರ್ನಾಟಕದ ಅಗ್ರಗಣ್ಯ ಪ್ರಕಾಶನ ಸಂಸ್ಥೆಯಾದ ನವಕರ್ನಾಟಕ ಪ್ರಕಾಶನದ ಸ್ಥಾಪನೆ
1962: ಚೀನಾ ಯುದ್ಧದ ಸಂದರ್ಭದಲ್ಲಿ ಕಕ್ಕಿಲ್ಲಾಯ, ಕೃಷ್ಣನ್, ನರಸಿಂಹನ್, ಸಿ.ಆರ್.ಕೃಷ್ಣ ರಾವ್, ವಾಸನ್, ಗೋವಿಂದನ್ ಮುಂತಾದ ರಾಜ್ಯ ನಾಯಕರ ಬಂಧನ, ಬೆಂಗಳೂರಿನ ಜೈಲಿನಲ್ಲಿ ವರ್ಷಾಂತ್ಯದ ವರೆಗೂ ಸ್ಥಾನಬದ್ಧತೆ
1964, ಜನವರಿ 9: ಅಹಲ್ಯಾರೊಂದಿಗೆ ವಿವಾಹ
1964: ಪಕ್ಷದ ವಿಭಜನೆ, ರಾಜ್ಯ ಮಂಡಳಿಯ ಕಾರ್ಯದರ್ಶಿಯಾಗಿ ನಿಯುಕ್ತಿ
1964-1972: ರಾಜ್ಯದಲ್ಲಿ ಪಕ್ಷದ ಹಾಗೂ ರೈತ-ಕಾರ್ಮಿಕ ಸಂಘಟನೆಗಳ ಬಲವರ್ಧನೆಗೆ ಶ್ರಮ
1965, ಎಪ್ರಿಲ್ 9ಮೊದಲ ಮಗ ಶ್ರೀನಿವಾಸನ ಜನನ (ಈಗ ಮಂಗಳೂರಿನಲ್ಲಿ ತಜ್ಞ ವೈದ್ಯ)
1966, ಮೇ 11: ಎರಡನೇ ಮಗ ವೆಂಕಟಕೃಷ್ಣನ ಜನನ (ಈಗ ಅಮೆರಿಕದ ಡಲಾಸ್ ನಲ್ಲಿ ನವಜಾತ ಶಿಶುಗಳ ತಜ್ಞ)
1968: ಸೋವಿಯಟ್ ಒಕ್ಕೂಟ, ಪೋಲೆಂಡ್ ಮತ್ತು ಬಲ್ಗೇರಿಯಾ ಪ್ರವಾಸ
1969, ಜುಲೈ 22ಮೂರನೇ ಮಗ ಹರೀಶನ ಜನನ (ಈಗ ಅಮೆರಿಕದ ಬಾಲ್ಟಿಮೋರ್ ನಲ್ಲಿ ಸೂಕ್ಷ್ಮಶಸ್ತ್ರಚಿತ್ಸಾ  ತಜ್ಞ)
1972: ಬಂಟ್ವಾಳ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಭಾರೀ ಬಹುಮತದೊಂದಿಗೆ ಆಯ್ಕೆ
1975, ಮೇ 25: ನಾಲ್ಕನೇ ಮಗ ಸೂರ್ಯನಾರಾಯಣನ ಜನನ (ಈಗ ಇಂಗ್ಲೆಂಡಿನಲ್ಲಿ ಮನೋರೋಗ ತಜ್ಞ)
1972-78: ವಿಧಾನಸಭೆಯಲ್ಲಿ ಕ್ಷೇತ್ರದ ಹಾಗೂ ರಾಜ್ಯದ ರೈತ-ಕಾರ್ಮಿಕರ, ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿ; ಬಂಟ್ವಾಳದಲ್ಲುಂಟಾದ ಭೀಕರ ನೆರೆಯ ಪರಿಹಾರ ಕಾರ್ಯದಲ್ಲಿ ಅವಿಶ್ರಾಂತ ಶ್ರಮ;  ಕರಡು ಭೂಸುಧಾರಣಾ ಮಸೂದೆಯ ತಯಾರಿಯಲ್ಲಿ ಪ್ರಮುಖ ಪಾತ್ರ; ಮಸೂದೆಯು ಅನುಷ್ಠಾನಗೊಳ್ಳುವಂತೆ ರಾಜ್ಯಾದ್ಯಂತ ಹೋರಾಟಗಳ ಸಂಘಟನೆ.
1978-1983: ವಿಟ್ಲ ಕ್ಷೇತ್ರದಿಂದ ಮತ್ತೊಮ್ಮೆ ರಾಜ್ಯ ವಿಧಾನಸಭೆಗೆ ಆಯ್ಕೆ. ಕ್ಷೇತ್ರದ ಅಭಿವೃದ್ಧಿಯೂ ಸೇರಿದಂತೆ ಹಲವು ಜನಪರ ಕಾರ್ಯಗಳು; ಭೂನ್ಯಾಯ ಮಂಡಲಿಯ ಸದಸ್ಯರಾಗಿ ಜನ ಮೆಚ್ಚಿದ ಕಾರ್ಯನಿರ್ವಹಣೆ; ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷತೆ
1982: ನರಗುಂದದಲ್ಲಿ ರೈತರ ಮೇಲೆ ನಡೆದ ಗೋಲೀಬಾರನ್ನು ಪ್ರತಿಭಟಿಸಿ ಬೆಂಗಳೂರಿಗೆ ಬೃಹತ್ ರೈತ ಜಾಥಾ, ವಿಧಾನ ಸೌಧ ಚಲೋ. ದೇವರಾಜ ಅರಸು, ಡಿ.ಬಿ. ಚಂದ್ರೇಗೌಡ, ಕಕ್ಕಿಲ್ಲಾಯ ಮುಂತಾದ ನಾಯಕರ ನೇತೃತ್ವ.
1983-86: ಬರವಣಿಗೆಯತ್ತ ಗಮನ- ಕಾರ್ಲ್ ಮಾರ್ಕ್ಸ್: ಬದುಕು, ಬರಹ ಮತ್ತು ಫ್ರೆಡರಿಕ್ ಎಂಗೆಲ್ಸ್: ಜೀವನ, ಚಿಂತನೆ ಕೃತಿಗಳ ರಚನೆ
1986, ನವೆಂಬರ್ 14: ಕಾರ್ಲ್ ಮಾರ್ಕ್ಸ್: ಬದುಕು, ಬರಹ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ
1986, ಡಿಸೆಂಬರ್ 29: ಫ್ರೆಡರಿಕ್ ಎಂಗೆಲ್ಸ್: ಜೀವನ, ಚಿಂತನೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 1986ರ ಉತ್ತಮ ಕೃತಿ (ಜೀವನ ಚರಿತ್ರೆ) ಪ್ರಶಸ್ತಿ
1986-1991: ಸಂ. ಯು.ಎನ್. ಶ್ರೀನಿವಾಸ ಭಟ್ಟರ ನಿಧನಾನಂತರ ಪಕ್ಷದ ಸಾಪ್ತಾಹಿಕ ಮುಖಪತ್ರ ಕೆಂಬಾವುಟದ ಸಂಪಾದಕನ ಕಾರ್ಯಭಾರ.
1989 ಎಪ್ರಿಲ್ 1: ಪ್ರಾಚೀನ ಭಾರತದಲ್ಲಿ ಭೌತಿಕವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ (ಅನುವಾದ-ಸೃಜನೇತರ) ಪ್ರಶಸ್ತಿ
1994: ಭಾರತೀಯ ದರ್ಶನಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ (ಅನುವಾದ – 2) ಪ್ರಶಸ್ತಿ
1996: ಸ್ವಂತ ಮನೆಗೆ ಪ್ರವೇಶ
1998: ತೀವ್ರ ಹೃದಯಾಘಾತದಿಂದ ಪತ್ನಿ ಅಹಲ್ಯಾ ನಿಧನ
2000: ಹಿರಿಯ ಮಗ, ಸೊಸೆಯ ಜೊತೆ ಇಂಗ್ಲೆಂಡಿಗೆ ಪ್ರವಾಸ; ಅಲ್ಲಿದ್ದ ಮಕ್ಕಳ ಭೇಟಿ
2002: ಒಂದು ವರ್ಷ ಮಸ್ಕತ್ ಹಾಗೂ ಇಂಗ್ಲೆಂಡ್ ಗಳಲ್ಲಿ ಮಕ್ಕಳ ಜೊತೆ
2002ರಿಂದ: ಮಂಗಳೂರಿನಲ್ಲಿ ವಿಶ್ರಾಂತ ಜೀವನ; ಹಲವು ಕಿರು ಹೊತ್ತಗೆಗಳ ಪ್ರಕಟಣೆ
2003: ಬರೆಯದ ದಿನಚರಿಯ ಮರೆಯದ ಪುಟಗಳು (ಆತ್ಮಕಥೆ) ಬಿಡುಗಡೆ
2005, ಡಿಸೆಂಬರ್ 12: ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ
2006, ಅಕ್ಟೋಬರ್ 25ತುಳು ಸಾಹಿತ್ಯ ಸೇವೆಗಾಗಿ ತುಳು ಸಾಹಿತ್ಯ ಅಕಾಡೆಮಿ ಸನ್ಮಾನ
2006, ನವಂಬರ್ 1: ಏಕೀಕರಣದ ಸುವರ್ಣೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ಏಕೀಕರಣ ಸುವರ್ಣ ಪುರಸ್ಕಾರ
2008, ಮೇ 31, ಜೂನ್ 1: 90ರ ಹೊಸ್ತಿಲಲ್ಲಿ ಬಿ.ವಿ. ಕಕ್ಕಿಲ್ಲಾಯ_ ಹೊಸ ಪೀಳಿಗೆಯೊಂದಿಗೆ ಒಂದು ಸಂವಾದ – ಮಂಗಳೂರಿನಲ್ಲಿ ವಿನೂತನ ಅಭಿನಂದನಾ ಸಮಾರಂಭ; ಪ್ರಫುಲ್ ಬಿದ್ವಾಯಿ, ಕಮಲ್ ಚಿನಾಯ್,  ಸಿ.ಕೆ. ಚಂದ್ರಪ್ಪನ್, ಶಮೀಮ್ ಫೈಜೀ, ಎಂ.ಸಿ. ನರಸಿಂಹನ್, ಸುರೇಂದ್ರ ರಾವ್,  ಲಿಂಗದೇವರು ಹಳೇಮನೆ, ಮುಜಾಫರ್ ಅಸ್ಸಾದಿ, ಜಿ.ವಿ. ಜೋಷಿ, ರಹಮತ್ ತರೀಕೆರೆ, ಸಾರಾ ಅಬೂಬಕ್ಕರ್, ವಿಜಯಾ, ಸುಮಿತ್ರಾ ದೇವಿ, ಟಿ. ಆರ್. ಚಂದ್ರಶೇಖರ, ಗಾಯತ್ರಿ, ಸುಧಾ ಸೀತಾರಾಮನ್, ಸಬೀಹಾ ಭೂಮಿಗೌಡ, ಜಿ. ರಾಜಶೇಖರ್,  ಫಣಿರಾಜ್ ಮುಂತಾದ ಗಣ್ಯರ ಪಾಲ್ಗೊಳ್ಳುವಿಕೆ.
2009, ಮಾರ್ಚ್ 22: ಬೆಂಗಳೂರಿನಲ್ಲಿ ‘ನಿರಂತರ’, ಅಭಿನಂದನಾ ಗ್ರಂಥ ಸಮರ್ಪಣೆ; ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.
2010, ಅಕ್ಟೋಬರ್ 2: ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಕ್ಸಿಟ್ ಥಿಯರಿ ಮತ್ತು ಪ್ರಾಕ್ಟೀಸ್ ಸಂಸ್ಥೆಯ ವತಿಯಿಂದ ಕಾರ್ಲ್ ಮಾರ್ಕ್ಸ್ ಪ್ರಶಸ್ತಿ ಪ್ರದಾನ
ಮೇ 18, 2012: ವಿಠಲ ಮಲೆಕುಡಿಯರ ಬಂಧನದಿಂದ ಅತೀವ ಚಿಂತಿತರಾಗಿ, ಭಾರತ ಕಮ್ಯೂನಿಸ್ಟ್ ಪಕ್ಷದ  ದಕ ಜಿಲ್ಲಾ ಘಟಕದ ಕಾರ್ಯಕರ್ತರೊಡಗೂಡಿ ಜಿಲ್ಲಾಧಿಕಾರಿ ಕಛೇರಿಯೆದುರು ಪ್ರತಿಭಟನೆಯಲ್ಲಿ ಭಾಗಿ
ಮೇ 23, 2012: ಮಿದುಳಿನಲ್ಲಿ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು
ಜೂನ್ 4, 2012: ಬಿ ವಿ ಕೆ ಇನ್ನಿಲ್ಲ