ಅಭಿಮನ್ಯುವಿನಂತೆ ಹೋರಾಟಕ್ಕಿಳಿದವರು ಉತ್ತರ ಕುಮಾರನಂತೆ ವರ್ತಿಸಿದ್ದೇಕೆ?

(ವಾರ್ತಾಭಾರತಿ, ಜುಲೈ 13, 2010)

[dropcap]ಭಾ[/dropcap]ಜಪ ಮತ್ತು ಅದರ ಪರಿವಾರದವರು ಜೆಡಿಎಸ್‌ನ ನಂಟು ಕಳೆದುಕೊಂಡು ಕಾನೂನು ಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ ‘ಆಪರೇಷನ್ ಕಮಲ’ದ ಹೆಸರಲ್ಲಿ ಕೋಟ್ಯಂತರ ರೂ. ಹಣ ಭ್ರಷ್ಟರೆಲ್ಲರ ಪ್ರತಿನಿಧಿಗಳಾಗಿ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದವು. ಈ 2 ವರ್ಷಗಳಲ್ಲಿ ಕರ್ನಾಟಕದ ನೆಲ ಜಲ ಖನಿಜ ಸಂಪತ್ತು ಇಂದಿನ ಮಟ್ಟಿಗಷ್ಟೇ ಅಲ್ಲ ಸಾರ್ವಕಾಲಿಕವಾಗಿ ದೋಚಿ ಕೊಳ್ಳೆ ಹೋಗುವ ಸ್ಥಿತಿಗೆ ತಲುಪಿದೆ.

ವಿ.ವಿ.ಗಳು ಭೂಮಿ ಕಬಳಿಕೆದಾರರ ಮತ್ತು ಸಾರ್ವಜನಿಕ ಸೊತ್ತಿನ ಬಳಕೆದಾರರ ದಾಳಿಗೆ ಒಳಗಾಗಿವೆ. ವಿದ್ಯಾಭ್ಯಾಸವನ್ನು ಕೋಮುವಾದಿ ಗಳ ಆಡಳಿತಕ್ಕೊಳಪಡಿಸುವ ದಿಸೆಯಲ್ಲಿ ಮತ್ತು ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಪರಿಗಣಿತ ವಿ ವಿ ನಿಲಯಗಳಾಗಿ ಮಾರ್ಪಡಿಸುವ ದಂಧೆ ಸಾಗಿದೆ. ಸಾಮ್ರಾಜ್ಯಗಳ ಪಾಳೆಯಗಾರಿಕೆಯ ಗುಲಾಮಗಿರಿಯ ವೈಭವದ ಪ್ರದರ್ಶನಕ್ಕೆ ಭೊಕ್ಕಸದ ಕೋಟ್ಯಂತರ ಹಣವನ್ನು ದೋಚಿ ವ್ಯಯಿಸಲಾಗಿದೆ.

ಇವುಗಳ ವಿರುದ್ದ ಪ್ರಜ್ಞಾವಂತ ನಾಗರಿಕರು ಸಿಡಿದೆದ್ದಿದ್ದು ನಾವು ಕಂಡಿದ್ದೇವೆ. ಈ ವಾತಾವರಣದಲ್ಲಿ ಭ್ರಷ್ಟ ಮತ್ತು ಬೇಜವ್ದಾರಿ ಪರಿವಾರದ ನಾಯಕರ ದಾಂಧಲೆಗಳು ಸಹ ರಾಜ್ಯದ ಮತ್ತು ದೇಶದ ಸಮಚಿತ್ತವುಳ್ಳ ಜನರಲ್ಲಿ ಕಳವಳವನ್ನು ಮೂಡಿಸಿದೆ. ಈ ದುರವಸ್ಥೆಯನ್ನು ತಡೆಗಟ್ಟುವ ಕ್ರಮಗಳನ್ನು ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ಆಯುಕ್ತರು ದಿಟ್ಟತನದಿಂದ ಕೈಗೊಂಡಿದ್ದನ್ನು ಬೆಂಬಲಿಸಲು ಜನರು ಪಕ್ಷ ಪಂಗಡ, ಜಾತಿ ಮತಗಳ ಭೇದವಿಲ್ಲದೆ ಮುಂದೆ ಬಂದಿರುವುದು ನಮ್ಮ ಜನಾಂದೋಲನದ ಆಶಾಕಿರಣವಾಗಿದೆ.
ಈ ಹಿನ್ನೆಲೆಯಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ತನ್ನ ಕರ್ತವ್ಯಗಳನ್ನು ನೆರವೇರಿಸುವುದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಹಾಗೂ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಪ್ರಸ್ತುತ ಲೋಕಾಯುಕ್ತರು ಬೇಡಿಕೆಯನ್ನಿಟ್ಟಿದ್ದರು. ಅದಕ್ಕೆ ಸರಕಾರದ ಚುಕ್ಕಾಣಿ ಹಿಡಿ ದವರ ಹೊರತು ಮತ್ತೆಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಳಿನ ಬೆಂಬಲವನ್ನು ನೀಡಿದ್ದವು. ಈ ವಾತಾವರಣವನ್ನು ಮನಗಂಡು ಸ್ವಯಂ ಪ್ರೇರೇಪಿತರಾಗಿ ತಮ್ಮ ಪ್ರಯತ್ನ ಸಾರ್ಥಕ ಪಡಿಸುವ ದೃಷ್ಟಿಯಿಂದ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು.
ಆದರೆ ಸಂತೋಷ ಹೆಗ್ಡೆಯವರು ನಮ್ಮ ನಿರೀಕ್ಷೆಯಂತೆ ವರ್ತಿಸದೆ ತಮ್ಮ ರಾಜೀ ನಾಮೆಯನ್ನು ಬಜಪ ನಾಯಕ ಅಡ್ವಾನಿಯವರ ಗುರುವಾಕ್ಯವೊ ಪಿತೃ ಸಮಾನರ ವಾಕ್ಯವೋ ಎಂದು ಪರಿಗಣಿಸಿ ಜನರ ಬೆಂಬಲವನ್ನು ಮರೆತು ಅಡ್ವಾಣಿಯವರ ಖಾಸಗಿ ಮತ್ತು ಗುಪ್ತ ಆಶ್ವಾಸನೆಗಳನ್ನು ನಂಬಿ ರಾಜೀನಾಮೆಯನ್ನು ಹಿಂದೆಗೆದುಕೊಂಡದ್ದು ನಮಗೆ ಅತೀವ ವೇದನೆಯನ್ನುಂಟುಮಾಡಿದೆ.

ಸಂತೋಷ ಹೆಗ್ಡೆಯವರು ಅಡ್ವಾಣಿಯವರ ಹಿರಿತನವನ್ನು ಮಾತ್ರ ಕಂಡಿದ್ದರೆ ಈ ದೇಶದ ಸಾರ್ವ ಜನಿಕರು ಅವರೊಬ್ಬ ಕೋಮುವಾದಿಯಾಗಿ ಹಾಗೂ ಸಂಘಪರಿವಾರದ ನಾಯಕರಾಗಿ ಮಾಡಿರುವುದನ್ನು, ಹೇಳಿರುವುದನ್ನೆಲ್ಲಾ ಕಂಡು ಕೇಳಿ ತಿಳಿದಿದ್ದಾರೆ. ಅವರ ಆಶ್ವಾಸನೆಗಳಿ ಗನುಗುಣವಾಗಿ ಸ.ಹೆಗ್ಡೆಯವರು ತಮ್ಮ ರಾಜೀನಾಮೆಯನ್ನು ಹಿಂಪಡೆದದ್ದು ಹೌದಾದರೆ ಅವರಿಗೆ ಭ್ರಮನಿರಸನ ಕಾದಿದೆಯೆಂದು ನಾವು ಚಿಂತಿತರಾಗಿದ್ದೇವೆ.

ಒಂದು ವೇಳೆ ಅವರು ಅಂದುಕೊಂಡಂತೆ ಲೋಕಾಯುಕ್ತವನ್ನು ಬಲ ಪಡಿಸುವ ಮತ್ತು ತಾನು ಕೇಳಿರುವ ಅಧಿಕಾರವು ಅವರಿಗೆ ಸಕಾಲದಲ್ಲಿ ಸಿಗದೇ ಹೋದರೆ ಅವರ ಮುಂದಿನ ಹೆಜ್ಜೆ ಏನು ಎನ್ನುವುದನ್ನು ಅವ ರಿಂದಲೇ ಕೇಳಿ ತಿಳಿಯುವ ಅಪೇಕ್ಷೆ ನಮಗಿದೆ. ಅವರು ಒಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ ಮಾತು ನಮ್ಮನ್ನು ತೀವ್ರ ಕಳವಳಕ್ಕೆ ಗುರಿ ಪಡಿಸಿದೆ. ಏಕೆಂದರೆ ತನ್ನ ನಿರೀಕ್ಷೆಯಂತೆ ನಿಗದಿತ ಅವಧಿಯೊಳಗೆ ಅವರಿಗೆ ತಕ್ಕ ಅಧಿಕಾರವು ದೊರಕದ ಸಂದರ್ಭದಲ್ಲಿ ತಾವು ಏನು ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಅತ್ಯಂತ ನಿರಾಶಾದಾಯಕವಾದದ್ದು ಮತ್ತು ಅವರು ಆಕಾಶದಿಂದ ಪಾತಾಳಕ್ಕೆ ನೆಗೆದು ಬೀಳುವಂಥಾದ್ದಾಗಿದ್ದಿತ್ತು.

ತಾವು ಹೋರಾಟಕ್ಕೆ ಹೊರಟವರು. ಬೆಂಬಲಿಗರನ್ನೆಲ್ಲಾ ಬಲಿಕೊಟ್ಟು ಯಾವುದೋ ವಿದೇಶಕ್ಕೆ ಪಲಾಯನ ಮಾಡಲು ಸನ್ನದ್ಧರಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಯಾರ ಕೈಗೂ ಸಿಗದಂತೆ ನೆಮ್ಮದಿಯಿಂದಯಿರಲು ಹೊರಟು ಹೊಗುತ್ತಾರೆ ಎನ್ನುವ ಉತ್ತರವಂತೂ ಅಭಿಮನ್ಯುವಿನಂತೆ ಹೋರಾಟಕ್ಕೆ ಹೊರಟವರು ಉತ್ತರ ಕುಮಾರನಂತೆ ವರ್ತಿಸಲು ಯೋಚಿಸಿದ್ದು ಅವರಿಗೂ ಗೌರವ ತರುವಂಥದ್ದಲ್ಲ.

ಸಂತೋಷ ಹೆಗ್ಡೆಯವರು ಇರಲಿ ಬಿಡಲಿ ಲೋಕಾಯುಕ್ತವಂತೂ ಒಂದು ಶಕ್ತಿಶಾಲಿ ವ್ಯವಸ್ಥೆಯಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಆ ಹೋರಾಟದಲ್ಲಿ ಸಂತೋಷ ಹೆಗ್ಡೆಯವರು ನಮ್ಮೆಂದಿಗೆ ಇರಬೇಕೆಂಬುದಷ್ಟೇ ನಮ್ಮ ಆಶಯ. ಅದಕ್ಕೆ ಅವರು ಸನ್ನದ್ಧರಾಗಿದ್ದರೆ ಮತ್ತು ನಾಯಕರಾಗಲು ತಯಾರಾಗಿದ್ದರೆ ನಾವು ಅವರಲ್ಲಿ ಇರಿಸಿದ ನಂಬಿಕೆ, ಭರವಸೆ ಪುನ: ಚೇತರಿಸಿಕೊಂಡು ನಮ್ಮ ಬೆಂಬಲ ದೃಢವಾಗುತ್ತದೆ.

ಅವರು ಲೋಕಾಯುಕ್ತರಾದಂದಿನಿಂದ ಈವರೆಗೆ ಅವರಿಗೆ ಬೆಂಬಲ ಮತ್ತು ಗೌರವ ನೀಡುತ್ತಾ ಬಂದಿರುವ ಓರ್ವ ಎಂಬ ನೆಲೆಯಲ್ಲಿ, ಅವರ ತಂದೆ ನಿಟ್ಟೆ ಕೆ.ಎಸ್.ಹೆಗ್ಡೆ ಜೊತೆಯಲ್ಲಿ ರಾಜ್ಯ ಸಭೆಯ ಸದಸ್ಯನಾಗಿದ್ದವನೆಂಬ ಆತ್ಮೀಯತೆಯಿಂದ ಈ ಮಾತನ್ನು ಹೇಳುತ್ತಿದ್ದೇನೆ.

ಮಾನ್ಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಅವರ ಸಾಧನಾ ಸಭೆಯಲ್ಲಿ ಗಳಗಳನೆ ಅತ್ತಿದ್ದು ಹಾಗೂ ಅನಂತರದ ದಿನಗಳಲ್ಲಿ ನಯನಾಜೂಕಿನಿಂದ ತಲೆ ತಪ್ಪಿಸಿಕೊಂಡಿದ್ದು ಹಾಗೂ ಬಳಿಕ ಲೋಕಾಯುಕ್ತರ ಬೇಡಿಕೆಗಳ ಈಡೇರಿಕೆಗೆ ತಮ್ಮ ಪಕ್ಷದವರ ಸದಸ್ಯರದೇ ಬೆಂಬಲ ಇಲ್ಲ ಎಂಬ ಸಬೂಬು ಸಂತೋಷ ಹೆಗ್ಡೆಯವರು ಅರ್ಥೈಸಿಕೊಳ್ಳ ಬೇಕಾಗಿದೆ.
ಜನಪ್ರತಿನಿಧಿಗಳೆನೆಸಿಕೊಳ್ಳುವವರೆಲ್ಲರೂ ಲೋಕಾಯುಕ್ತರ ವ್ಯಾಪ್ತಿಯಿಂದ ಹೊರಗಿರಬೇಕೆಂಬ ನಿಲುವು ಆ ಸಂಸ್ಥೆಯನ್ನೇ ಅನಗತ್ಯಗೊಳಿಸುವ ಪ್ರಯತ್ನವಾಗಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಪಕ್ಷ, ಪಂಗಡ, ಜಾತಿ, ಕೋಮು, ಸ್ತ್ರಿ, ಪುರುಷ ಎಲ್ಲರೂ ಸೇರಿ ಯಾವ ಭೇದವೂ ಇಲ್ಲದೆ ನ್ಯಾಯವನ್ನು ಆಶಿಸುವವರು, ರಾಜ್ಯದ ಹಿತವನ್ನು ಬಯಸುವವರು, ಉತ್ತಮ ಭವಿಷ್ಯತ್ತನ್ನು ಅಪೇಕ್ಷಿಸುವವರು ಒಂದು ಕೂಡಿ ಸುಸಂಘಟಿತ ಚಳುವಳಿಯನ್ನು ಕಟ್ಟಿ ಈ ದುರಾಡಳಿತ ವನ್ನು ಕೊನೆಗೊಳಿಸುವ ಹೋರಾಟಕ್ಕೆ ಸಜ್ಜಾಗಬೇಕಿದೆ.