ಮೇ ದಿನಾಚರಣೆ

[dropcap]ಮೇ[/dropcap] ದಿನಾಚರಣೆಯನ್ನು ಇಂದು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಕಾರ್ಮಿಕ ವರ್ಗದ ಕ್ರಾಂತಿಕಾರಿ ಹೋರಾಟದ ವಾರ್ಷಿಕ ಜಾಗತಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾಗಿರುವ ಐತಿಹಾಸಿಕ ಘಟಣೆಯು ಘಟಿಸಿದ್ದು ಮೇ ತಿಂಗಳ ತಾ.1, 1786 ರಂದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಶಿಕಾಗೊ ನಗರದ ಹೇ ಚೌಕ ಎಂಬಲ್ಲಿ. ಸಾಮ್ರಾಜ್ಯಶಾಹಿ ಅಮೆರಿಕದ ಒಂದು ಪ್ರಮುಖ ನಗರದಲ್ಲಿ ನಡೆದ ಕಾರ್ಮಿಕ ದಮನದ ಈ ಘಟನೆಯು ಅಂತಹ ಮೊತ್ತ ಮೊದಲನೆಯ ಕ್ರೌರ್ಯವಾಗಿತ್ತು,  ಶ್ರಮಜೀವಿಗಳ ಮರ್ದನ, ದೌರ್ಜನ್ಯ ಹಾಗೂ ಮಾನವೀಯ ಮೌಲ್ಯಗಳ ದಮನ ಇತ್ಯಾದಿಗಳ ಆ ಆರಂಭದ ಹೆಜ್ಜೆಯ ಕರಿ ಛಾಯೆಯುಇಂದಿಗೂ ಪ್ರಕಟಗೊಳ್ಳುತ್ತಿರುವುದನ್ನು ಕಾಣಬಹುದು. ಸಾಮ್ರಾಜ್ಯವಾದದ ತುತ್ತ ತುದಿಗೆ ಏರಿ ಜಗತ್ತಿನ ಮೇಲೆ ಪರಮಾಣು ಆಯುಧದಂತಹ ವಿನಾಶಕಾರಿ ಸಾರ್ವಭೌಮ ಅಧಿಕಾರ ಹೊಂದಿರುವ ಸಾಮ್ರಾಜ್ಯವಾದವು ಖಾಸಗಿ ಲಾಭದ ಗಳಿಕೆ ಮತ್ತು ಅಧಿಕಾರ ಒಂದೇ ಪರಮ ಗುರಿಯಾಗಿ ಇರುವಂತಹ ನೆಲೆಗೆ ಬಂದು ತಲುಪಿದೆ. ಅಂದಿನ ಸಾಮ್ರಾಜ್ಯವಾದಕ್ಕೂ ಇಂದಿನ ಒಬಾಮ ನಿರ್ದೇಶಿತ ವಿಶ್ವರಾಜಕಾರಣದ ಪ್ರದರ್ಶನಕ್ಕೂ ಬಹಳ ವ್ಯತ್ಯಾಸವಿದೆ. ಅಂದು ಸಾಮ್ರಾಜ್ಯವಾದದ ಗುರುತು ಇನ್ನೂ ಸ್ಪಷ್ಟ ಸ್ವರೂಪ ಹೊಂದಿರಲಿಲ್ಲ. ಪ್ರಜಾಪ್ರಭುತ್ವದ ಮೊಸಳೆ ಕಣ್ಣೀರಿನ ವಿಷ ಎಂತಹುದೆಂಬುದು ಅಂದು ಪ್ರತ್ಯಕ್ಷವಾಗಿರಲಿಲ್ಲ. ಆದರೆ ಬಂಡವಾಳಶಾಹಿಯೆಂಬ ಒಂದು ಮನುಷ್ಯ ನಿರ್ಮಿತ ಸಮಾಜದ ಸ್ವರೂಪ ಹಾಗೂ ಉತ್ಪಾದನಾ ವಿಧಾನಗಳ ಅಮಾನುಷ ಸ್ವರೂಪ  ಸಾಕಷ್ಟು ಬೆಳಕಿಗೆ ಬಂದಿತ್ತು. ಇಂದು ಎಲ್ಲ ದೇಶಗಳ ಪ್ರಭುತ್ವಗಳು ಸಹಾ ಕಾರ್ಮಿಕರಿಗೆ ಮಾನವೀಯ ಮೌಲ್ಯಗಳ ಅಧಿಕಾರ ಇದೆ ಎಂಬುದಕ್ಕೆ ಬರೇ ಮಾತಿನ ಅಂಗೀಕಾರ ದೊರಕಿರುವುದೇನೋ ನಿಜ. ಆದರೆ ಕಾರ್ಯದಲ್ಲಿ ವಿಶ್ವದ ಮಾನವ ಕೋಟಿಯ ಬದುಕನ್ನು ಸಾಮ್ರಾಜ್ಯವಾದವೆಂಬ ಆಡಳಿತ ಕ್ರಮವು, ರಾಜಕೀಯ ವಿಚಾರವು, ಸಂವಿಧಾನಿಕ ಪ್ರಭುತ್ವಗಳ ಸ್ವರೂಪಗಳು ಎಂತೆಂತಹ ಅಂದ-ಚೆಂದದ ವೇಷಗಳನ್ನು ಧರಿಸಿ ಈ ಧರೆಯಲ್ಲಿ ತಾಂಡವ ನೃತ್ಯ ಆಡುತ್ತಿದೆ. ಭಾರತದ ಮಟ್ಟಿಗಂತೂ ಒಂದೇ ಒಂದು ಪ್ರತ್ಯಕ್ಷ ನಿದರ್ಶನದಿಂದಲೇ  ಅದರ ನಿಜ ಬಣ್ಣವನ್ನು ಬಯಲುಗೊಳಿಸುವುದು ಸಾಧ್ಯವಾಗುತ್ತದೆ.

ಅತೀ ಹಿರಿಯ ಹಾಗೂ ಅತ್ಯಂತ ಉತ್ಕೃಷ್ಟವಾದ ಪ್ರಜಾಪ್ರಭುತ್ವ ಎಂದುಕೊಳ್ಳುವ ಈ ನಾಡಿನಲ್ಲಿ ಒಟ್ಟು ಜನ ಸಂಖ್ಯೆಯ ಶೇ.80 ಮಂದಿ ಪ್ರಜೆಗಳು ತಮ್ಮ ಮತದಾನದಿಂದಲೇ ತಮ್ಮ ಮೇಲೆ ಹೇರಿಕೊಂಡಿರುವ ವ್ಯವಸ್ಥೆಯಲ್ಲಿ ದಿನಕ್ಕೆ 20 ರೂ.ಗಳಲ್ಲಿ ಇಡೀ ದಿನದ ಕಷ್ಟಕಾರ್ಪಣ್ಯಗಳನ್ನು ತುಂಬಿದ ಬದುಕನ್ನು ನಿಭಾಯಿಸಬೇಕಾದ ಶಾಪವನ್ನು ಸುತ್ತಿಕೊಂಡಿದ್ದಾರೆ. ಅದೇ ಸಮಯದಲ್ಲಿ ದಿನಕ್ಕೆ 20 ಕೋಟಿ ರೂ.ಗಳನ್ನೂ ಮೀರಿದ ಆದಾಯ ಮತ್ತು ಐಶಾರಾಮಿ ಜೀವನ ನಡೆಸುವ ಮನುಷ್ಯ ಪ್ರಾಣಿಗಳ ಅಧಿಕಾರದ ಅಡಿಯಲ್ಲಿ ಈ ಜನರು ನರಳುತ್ತಿರುವುದು ಕಂಡುಬರುತ್ತಿದೆ. ಇದು ವಿಶ್ವದ ಬಂಡವಾಳಶಾಹಿ ವ್ಯವಸ್ಥೆಯ ಒಟ್ಟು ಫಲಿತಾಂಶ ಎನ್ನುವಾಗ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಪಥದಲ್ಲಿ ಶೋಷಣೆ ಮರ್ದನೆಗಳನ್ನೆಲ್ಲಾ ಅಳಿಸಿ  ಮಾನವ ಸಂಕುಲದ ಅತ್ಯಂತ ಸುಂದರವಾದ ಕನಸುಗಳನ್ನು ನನಸಾಗಿಸುವ ಪಥದಲ್ಲಿ ಮುಂದೆ ಹೆಜ್ಜೆ ಹಾಕುವುದಕ್ಕೆ ಶ್ರಮಜೀವಿ ವರ್ಗ ಸನ್ನದ್ಧರಾಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಿಚ್ಚಳವಾಗುತ್ತದೆ. ಕಾಲವೇನೋ ಇಂತಹ ಅನೇಕ ಸನ್ನಿಹಿತ ಸಂಧಿ ಘಟ್ಟಗಳನ್ನು ದಾಟಿ ದಾಟಿ ಸಫಲತೆ ಕಾಣದ ಹೆಜ್ಜೆ ಗುರುತುಗಳನ್ನಷ್ಟೇ ಬಿಟ್ಟು ಹೋಗಿದೆ. ಇಂದಿನ ಪರಿಸ್ಥಿತಿಯನ್ನು ಅಂತಹ ಒಂದು ಹೆಜ್ಜೆ ಗುರುತೆಂದು ಹೇಳಬಹುದೆಂದಾದರೂ ಸಹಾ ಅದು ಮಾನವ ಸಂಕುಲದ ಕ್ರಾಂತಿಕಾರಿ ಯುಗ ಪರಿವರ್ತನೆಯ  ಯಶಸ್ಸನ್ನು ಕಾಣುತ್ತದೆಯೋ ಅಥವಾ ಬರಿ ಗುಲ್ಲುಗಳ ಮತ್ತು ಹೊಸ ಸಂಕೋಲೆಗಳ ಸೃಷ್ಟಿಯಾಗಿ ಇನ್ನೂ ದೀರ್ಘ ಕಾಲ ಮನುಷ್ಯನನ್ನು ಪೀಡಿಸುತ್ತಿದೆಯೋ ಎನ್ನುವುದರ ಬಗ್ಗೆ ಆಳವಾಗಿ ಮತ್ತು ವ್ಯಾಪಕವಾಗಿ ಸಮಸ್ತ ಮಾನವ ಸಂಕುಲದ ಇರವು ಅರಿವು ಗಳ ಅವಲೋಕನದಿಂದಷ್ಟೇ ಊಹಿಸಲು ಸಾಧ್ಯವಾಗಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಇಂದಿನ ದುರಂತಗಳಲ್ಲಿ ಒಂದು ಎಂದರೆ ತಪ್ಪಾಗದು, ಮನುಷ್ಯ ಸಂಕುಲವು ಕ್ರಾಂತಿಕಾರಿ ಪರಿವರ್ತನೆಯ ಹಲವಾರು ಮಜಲುಗಳನ್ನು ದಾಟಿ ಬಂದಿದೆ. ಆದರೆ ಮನುಷ್ಯನು ತನ್ನ ಒಡಲೊಳಗಿನ ಚೇತನದ ಚೇತನ ಎನ್ನಬಹುದಾದ ಉತ್ಕೃಷ್ಟ ಉತ್ಪಾದನಾ ಸಾಮರ್ಥ್ಯ ಮತ್ತು ಶ್ರಮ ಶಕ್ತಿಯನ್ನು ಒಂದು ಅಗ್ಗದ ಸರಕಾಗಿ 3 ಕಾಸಿಗೆ ವಿಕ್ರಯಿಸಿ ಬದುಕಬೇಕಾದಂತಹ ದಾಸ್ಯ ಸಂಕೋಲೆಗಳಿಂದ ಪಾರಾಗುವುದಕ್ಕೆ ಅನೇಕ ಪ್ರಯತ್ನಗಳನ್ನು ನಡೆಸಿ ಜಯಗಳಿಸಿ ದೀರ್ಘ ಕಾಲ ಉಳಿಸಿ ಬೆಳೆಸಿ ಭವ್ಯವಾದ ಸಮಾಜವಾದಿ ವ್ಯವಸ್ಥೆಯೊಂದನ್ನು ಕಟ್ಟಿ ಬೆಳೆಸಿ ಹಿಟ್ಲರ್ ನಂಥಹ ಪಿಶಾಚಿಯೊಂದನ್ನು ನಿರ್ಮೂಲನಗೊಳಿಸಿ ಜಾಗತಿಕ ಜಯದ ಹಂತಕ್ಕೆ ತಲುಪಿದ್ದನ್ನು ಇಂದು ನಾವು ನೆನಪಿಸಿಕೊಳ್ಳಬೇಕು. ವಿಶ್ವಕಾರ್ಮಿಕರು ಒಗ್ಗಟ್ಟಾಗಿ ಸಮಾಜವಾದಿ ವ್ಯವಸ್ಥೆಯನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ಒಂದಾಗಿ ಮಾನವನ ಇರವು ಅರಿವುಗಳು  ಹೋರಾಟದ ಕೆಂಬಾವುಟವಾಗಿ ನಭೋಮಂಡಳದಲ್ಲಿ ಎಂದೆಂದಿಗೂ ಹಾರಾಡುತ್ತಿರುವಂತೆ ಮಾಡುವ ಗುರಿಯನ್ನು ನಮ್ಮದಾಗಿಸೋಣವೇ ಎಂಬ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಬೇಕಾಗಿದೆ. ನಮ್ಮೊಳಗಿನ ಕಚ್ಚಾಟದಿಂದ ಕೈ ಕೊಡವಿ ದಾಸ್ಯ ಸಂಕೋಲೆಗೆ ಹತ್ತು ಹಲವು ನಾಮಗಳ ಪಟ್ಟಿಗಳನ್ನು ಬೆಸೆಯುವುದರಲ್ಲಿ ತೃಪ್ತಿ ಗೊಂಡು ಸಾಗುತ್ತಿರುವ ದುರವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಯಾವುದು 224 ನೆಯ ಶಿಕಾಗೋ ಹೋರಾಟದ ಸಂಸ್ಮರಣೆಯ ದಿನಾಚರಣೆಯ ಆಯ್ಕೆ ಎಂಬ ಪ್ರಶ್ನೆ ಇಂದು ನಮ್ಮನ್ನು ದಿಟ್ಟಿಸಿ ನೋಡುತ್ತಿದೆ. ಈ ಕಿರು ಬರಹದಲ್ಲಿ ಅದನ್ನು ಸಮರ್ಪಕವಾಗಿ ಮತ್ತು ಸವಿಸ್ತಾರವಾಗಿ ನಿರೂಪಣೆ  ಮಾಡುವ ಸಾಹಸ ಇದು ಆಗಲಾರದು. ಅದರ ಒಂದು ಕಿರು ಇಣುಕು ನೋಟ ಮಾತ್ರ ಇದಾಗಬಹುದೇನೋ.

2010 ರ ಈ ವರ್ಷದ ಮೇ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಂಘಟಿತ ಕಾರ್ಮಿಕ ವರ್ಗವು ಬೆಲೆ ಏರಿಕೆಯ ವಿರುದ್ದ ಮತ್ತು ಬೆಲೆ ಏರಿಕೆಯನ್ನು ಸರಿದೂಗಿಸುವ ಕನಿಷ್ಠ ವೇತನ ಸಹಿತ ತುಟ್ಟಿ ಭತ್ತೆಯ ಹಕ್ಕನ್ನು ಎಲ್ಲ ಶ್ರಮಜೀವಿಗಳು ಪಡೆಯುವಂತೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾರ್ಯ ತಂತ್ರ ರೂಪಿಸೋಣ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಎಲ್ಲ ಹಕ್ಕುಗಳನ್ನು, ಸೌಲಭ್ಯಗಳನ್ನು ಕಾರ್ಯತ: ಇನ್ನೂ ಪಡೆಯದ ವಿಭಾಗದ ಜನರನ್ನು ಸಂಘಟಿತ ಕಾರ್ಮಿಕ ವಲಯವನ್ನಾಗಿ ಹೋರಾಟಕ್ಕೆ ಇಳಿಸುವುದು ಇಂದಿನ ರಾಷ್ಟೀಯ ಕಾರ್ಮಿಕ ಸಂಘಟಣೆಗಳ ಅಂಗೀಕೃತ ಕರ್ತವ್ಯವಾಗಿದೆ. ಶ್ರಮಜೀವಿಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಇದ್ದಾರೆ. ಅವರು ಮಹಿಳೆಯಾಗಿ ಮಾತ್ರವಲ್ಲ ಶ್ರಮಜೀವಿಗಳಾಗಿಯೂ ಎಲ್ಲ ಬಗೆಯ ಮಾನವೀಯ ಹಕ್ಕುಗಳ ಸೌಲಭ್ಯಗಳ ಗಳಿಕೆಗೂ ಅರ್ಹರಾಗಿದ್ದಾರೆ. ಅವರ ಪೋಷಣೆ, ರಕ್ಷಣೆ, ಸಬಲೀಕರಣ ಇತ್ಯಾದಿಗಳು ಇಂದು ಕಾರ್ಮಿಕ ಸಂಘಟಣೆಗಳ ಚಳುವಳಿಗಳ ಆದ್ಯ ಕರ್ತವ್ಯವೆನಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಪೌಷ್ಟಿಕ ಹಾಗೂ ಸಾಕಷ್ಸ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುವ ಆಹಾರ ಪೂರೈಕೆಯ ಭದ್ರತೆಯು ಇಂದು ಸರಕಾರದ ಕೃತಕ ಬಿಪಿಯಲ್, ಯೆಪಿಯಲ್ ರೇಖೆಗಳಿಂದ ವಿರಹಿತವಾಗಿ ದುಡಿಯುವವರಿಗೆಲ್ಲರಿಗೂ ಕ್ರಮಬದ್ದವಾದ ಪೂರೈಕೆಯ ಹಕ್ಕನ್ನು ಇಂದಿನ ಆಡಳಿತಗಾರರು ಯಾವ ಸಬುಬೂ ನೀಡದೆ ಅನುಸರಿಸಬೇಕಾಗಿದೆ. ಕೊನೆಯದಾಗಿ ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ. ಪ್ರಸ್ತುತ ಮೇ ದಿನ ಈ ದಿಸೆಯಲ್ಲಿ ನಮಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವಂತಾಗಲಿ.