Archive | August 2011

ಜನ ಲೋಕಪಾಲ್ ಒಂದೇ ಸಾಲದು; ಸರ್ವರಿಗೂ ನೈಜ ಅಧಿಕಾರ ದೊರೆಯಲಿ

ನಾವಿಂದು ಬಹು ದೊಡ್ಡ ಜನಾಂದೋಲನವನ್ನು ಕಾಣುತ್ತಿದ್ದೇವೆ. ಇದು ಪೂರ್ಣ ಸ್ವಾತಂತ್ರ್ಯದ ಎರಡನೇ ಆಂದೋಲನ ಎಂದು ಈಗಾಗಲೇ ಕರೆಯಲ್ಪಟ್ಟಿದೆ. ಈ ಆಂದೋಲನಕ್ಕೆ ದುರಾಳಿತ ನಡೆಸಿದ ಕಾಂಗ್ರೆಸ್ ಪಕ್ಷವು  ಕಾರಣವಾಗಿದ್ದರೆ ಅದರ ದುರ್ಲಾಭವನ್ನು ಪಡೆಯಲು ಅದಕ್ಕಿಂತಲೂ ಭ್ರಷ್ಠವಾದ, ಬಂಡವಾಳವಾದಿ ಪ್ರತಿಗಾಮಿ ಪಕ್ಷಗಳಾದ ಭಾಜಪ ಮತ್ತು ಸಂಘಪರಿವಾರಗಳು ಹೊಂಚುಹಾಕುತ್ತಿರುವುದನ್ನು ಕಾಣುತ್ತೇವೆ. ಅಣ್ಣಾ ಹಜಾರೆಯವರ ತಂಡದವರು ಸಚ್ಚಾರಿತ್ರರು ಎಂದಾದರೂ ಜನಾಂದೋಲನವು ಯಶಸ್ವಿಯಾಗಿ ಅಧಿಕಾರವು ಪ್ರತಿಗಾಮಿ ಪಕ್ಷಗಳ ಹಿಡಿತಕ್ಕೊಳಗಾದರೆ  ಜನರಿಗೆ ಜನಲೋಕಪಾಲ ಮಸೂದೆಯಿಂದ  ಎಷ್ಟು ಒಳಿತು ಆಗಬಲ್ಲುದೋ ಅದರ ಶತ ಪಾಲು ಸಂಕಷ್ಟಗಳು ಬಂದೊದಗಿ ಸರಿಮಾಡಲಾಗದ ದುಃಸ್ಥಿತಿಯು ಬಂದೊದಗಬಹುದೆಂದು ಈ ಸಂದರ್ಭದಲ್ಲಿ ಜನರಿಗೆ ಮನಗಾಣಿಸುವುದು ಅವಶ್ಯವಾಗಿದೆ.  ಇತ್ತೀಚೆಗೆ ರಾಮ್‌ದೇವ್ ರವರ ಸತ್ಯಾಗ್ರಹದ ಪ್ರಹಸನವನ್ನು  ನಾವು ಕಂಡಿದ್ದೇವೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿಯುವ ಸಂಚನ್ನು ಸಂಘಪರಿವಾರದವರು ರೂಪಿಸಿದ್ದದ್ದು ಬಯಲಾದುದನ್ನು ನಾವು ಅರಿತಿದ್ದೇವೆ. ಆ ಸಂಚಿನ ರೂವಾರಿಗಳಾದ ಅರೆಸ್ಸೆಸ್ ಮತ್ತು ಸಂಘಪರಿವಾರದವರು ಅಣ್ಣಾ ಹಜಾರೆಯವರ ಗುಂಪಿನೊಳಗೂ ನುಸುಳುವ ಪ್ರಯತ್ನವಾಗಿ ತಮ್ಮ ಸಹಕಾರವನ್ನು ಈಗಾಲೇ ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾಂತಿಪ್ರಿಯ ನಾಗರಿಕರು ಜಾಗೃತರಾಗಿದ್ದು ಅಂತಹ ವಿನಾಶಕಾರಿ ದುಃಶ್ಶಕ್ತಿಗಳನ್ನು ದೂರವಿಟ್ಟು ಶಾಂತ ರೀತಿಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಅಗತ್ಯವು ಬಹಳವಿದೆ.
ದೇಶದ ಸ್ವಾತಂತ್ರ್ಯದ ‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಎಂಬ ಆದರ್ಶವು ನಿಜವಾಗಬೇಕಿದ್ದರೆ ದೇಶದ ಸರ್ವ ಸಂಪತ್ತು, ನೆಲ, ಜಲ, ಉತ್ಪಾದನೆ, ರವಾನೆ, ವಿತರಣೆಗಳೆಲ್ಲವೂ ಸಂಪೂರ್ಣವಾಗಿ ಜನರ ನಿಯಂತ್ರಣಕ್ಕೆ ಒಳಪಡಬೇಕು. ಇವುಗಳ ಖಾಸಗೀಕರಣವನ್ನು ಕೈಬಿಟ್ಟು ಉತ್ಪತ್ತಿಯಾಗುವ ಸಂಪತ್ತಿನ ವಿತರಣೆಯು ಸಮಾನವಾಗಬೇಕು. ಆಡಳಿತಾಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಜನಹಿತ ಸಹಕಾರಿ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಆಗ ಮಾತ್ರ ಬಡತನವು ಇಲ್ಲವಾಗಿ ಭ್ರಷ್ಟಾಚಾರವು ಸಂಪೂರ್ಣವಾಗಿ ತೊಲಗುವುದು. ನಮ್ಮ ಸ್ವಾತಂತ್ರ್ಯದ ಗುರಿ ಅದಾಗಬೇಕು. ಆ ಗುರಿಯನ್ನಿಟ್ಟುಕೊಂಡು ಸರ್ವಸಮಾನತೆಯ ಸ್ವಾತಂತ್ರ್ಯ ಗಳಿಸುವವರೆಗೆ ಚಳುವಳಿಯನ್ನು ಮುನ್ನಡೆಸೋಣ. ವ್ಯತಿರಿಕ್ತವಾಗಿ ದೇಶದ ಉತ್ಪಾದನೆಯ ಸಂಪತ್ತಿನ ಬಹು ಪಾಲು  ಕೆಲವೇ ಜನರ ಸೊತ್ತಾಗುತ್ತಾ ಬಹು ಜನರ ಪಾಲಿಗೆ ಅಲ್ಪಾಂಶವೇ ದೊರಕಿ ಶ್ರೀಮಂತರ ಮತ್ತು ಬಡವರ ಅಂತರವು ಬಹು ವೇಗದಿಂದ ಹೆಚ್ಚುತ್ತಾ ಹೋದುದೇ ಭ್ರಷ್ಟಾಚಾರವು ತಾರಕಕ್ಕೇರುವುದಕ್ಕೂ, ಬಹು ಸಂಖ್ಯಾತ ಬಡ ಜನರ ಸಂಕಷ್ಟಗಳಿಗೂ ಕಾರಣವಾಯಿತು. ಇದು ಉದಾರಿಕರಣದ ಮತ್ತು ಜಾಗತೀಕರಣದ ಆರ್ಥಿಕ ನೀತಿಯಿಂದಾಗಿ ತೀವ್ರವಾಗಿ ವೃದ್ಧಿಯಾಯಿತು. ಭ್ರಷ್ಟಾಚಾರ ತಡೆ ಕಾನೂನುಗಳು ಎಷ್ಟೇ ಕಠಿಣವಾಗಿದ್ದರೂ ಬಡವರನ್ನು ಹಾಗೂ ನಿರ್ಗತಿಕರನ್ನು ಮಣಿಸಲು ಉಳ್ಳವರಿಗೆ ದಾರಿಗಳು ಹಲವಾರಿವೆ. ಕೋಟ್ಯಾಧೀಶರ ಎದುರು ಜನ ಸಾಮಾನ್ಯನಿಗೆ ಸ್ಪರ್ಧಿಸಲು ಕಾರ್ಯಥಾ ಅಸಾಧ್ಯ  ಕಳ್ಳತನ ಮತ್ತು ಭ್ರಷ್ಟಾಚಾರಕ್ಕೆ ಶಿಕ್ಷೆ ಎಷ್ಟು ಮುಖ್ಯವೋ ಅದಕ್ಕಿರುವ ಅವಕಾಶಗಳನ್ನು ಮತ್ತು ಅವಶ್ಯಕತೆಗಳನ್ನು ಇಲ್ಲವಾಗಿಸುವುದು ಅದಕ್ಕಿಂತಲೂ ಮುಖ್ಯವಾದುದು.
ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ನೆಲೆಗೊಂಡಿರುವುದೋ ಅಲ್ಲಿಯವರೆಗೆ ಭ್ರಷ್ಟಾಚಾರ ಒಂದಲ್ಲ ಒಂದು ರೂಪದಲ್ಲಿ ಮುಂದುವರಿಯುವುದು. ಇದನ್ನು ಶ್ರಮಜೀವಿಗಳು, ವಿದ್ಯಾರ್ಥಿಗಳು, ಯುವಜನರು,  ರೈತರು, ಸಾರ್ವಜನಿಕರೆಲ್ಲರೂ ಮನಗಂಡು ಕಾರ್ಯೋನ್ಮುಖರಾಗಬೇಕು. ಸರ್ವ ಸಮಾನತೆಯ ಸ್ವಾತಂತ್ರ್ಯದ ಆದರ್ಶವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಧೋರಣೆ ಮತ್ತು ಬದ್ದತೆ ಉಳ್ಳ ಪಕ್ಷಗಳೆಂದರೆ ಕಮ್ಯುನಿಸ್ಟ್ ಪಕ್ಷಗಳು ಮಾತ್ರ. ದುರದೃಷ್ಟವಶಾತ್ ಇವುಗಳು ಆ ಧೋರಣೆಗಳನ್ನು ಅನುಷ್ಠಾನಗೊಳಿಸುವ ಕಾರ್ಯತಂತ್ರಗಳಲ್ಲೇ ಭಿನ್ನಾಭಿಪ್ರಾಯ ಹೊಂದಿ ವಿಭಜನೆಗೊಂಡು ಬಳಿಕ ನಿಶ್ಶಕ್ತಗೊಂಡದ್ದು ನಮ್ಮ ದುರಂತ. ಈಗಿನ ಈ ಅಪಾಯಕಾರಿ ವಿಷಮಯ ಪರಿಸ್ಥಿತಿಯಲ್ಲಿ ಆ ಪಕ್ಷಗಳು ಕಾರ್ಯೋನ್ಮುಖರಾಗಬೇಕಾಗಿದೆ ಮತ್ತು ಪ್ರಭುತ್ವವನ್ನು ದುಷ್ಟ ಶಕ್ತಿಗಳು ಷಡ್ಯಂತ್ರಗಳ ಮೂಲಕ ವಶಪಡಿಸಿಕೊಳ್ಳುವ ಅಪಾಯವನ್ನು ತಡೆಯುವ ಪ್ರಯತ್ನವನ್ನು ಮಾಡಬೇಕಾಗಿದೆ. ವಿಭಜನೆಗೊಂಡ ಕಮ್ಯುನಿಸ್ಟ್ ಪಕ್ಷಗಳು ವಿಲೀನಗೊಂಡು ಪ್ರಜಾಪ್ರಭುತ್ವವಾದಿ ಮತ್ತು  ಸಮಾಜವಾದಿ ಪಕ್ಷಗಳ ಒಕ್ಕೂಟವನ್ನು ರಚಿಸಿ ಜನಪರ ಸರಕಾರದ  ರಚನೆಗೆ ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ ಮತ್ತು ಈ ಜನಾಂಧೋಲನದಲ್ಲಿ ಭಾಗವಹಿಸಿ ಅದರ ದಿಕ್ಕು ಸರಿದಾರಿಯಲ್ಲಿ ಸಾಗುವಂತೆ ಪ್ರಯತ್ನಿಸಿ ಜನಲೋಕಪಾಲ್ ಮಸೂದೆಯು ಲೋಕ ಸಭೆಯಲ್ಲಿ ಮಂಡನೆಯಾಗಿ ಅದು ಶಾಸನವಾಗುವಂತೆ ಸರ್ವ ಪ್ರಯತ್ನವನ್ನು ಮಾಡುವುದರೊಂದಿಗೆ ಸರ್ವಜನರಿಗೆ ಸರ್ವಸಮಾನತೆ ದೊರಕುವವರೆಗೆ ವಿರಮಿಸದಿರಲಿ ಎಂದು  ನಾವು ಹಾರೈಸುತ್ತೇವೆ.

ಉರುಳು ಸೇವೆಯ ಬದಲಿಗೆ ಜನಸೇವೆ ಮಾಡಿ

ಕಾಂಗ್ರೆಸ್ ಅಧ್ಯಕ್ಷೆ  ಶ್ರೀಮತಿ ಸೋನಿಯಾ ಗಾಂಧಿ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪರಿಣತ ತಜ್ಞರ ಚಿಕಿತ್ಸೆಯನ್ನು ಪಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರಲ್ಲಿ ಸದ್ಭಾವನೆಯುಳ್ಳವರೆಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂಬ ಕಳಕಳಿಯನ್ನು ಹೊಂದಿರುವುದೂ ಪ್ರಕಟವಾಗಿದೆ. ಅದು ಸಹಜವೂ ಹೌದು. ಅಮೆರಿಕಾದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಾಗಲಿ, ಚಿಕಿತ್ಸೆಯನ್ನು ನೀಡುವ ವೈದ್ಯರಾಗಲಿ ಯಾವುದೇ ದೇವಾಲಯಗಳಲ್ಲಿ, ಇಗರ್ಜಿ, ಮಸೀದಿಗಳಲ್ಲಿ ಯಾವುದೇ ತರದ ಹರಕೆಯನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡಿಕೊಂಡ ವರದಿ ಪ್ರಕಟವಾಗಲಿಲ್ಲ. ವೈದ್ಯರು ವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಮಾತ್ರ ಅನುಸರಿಸಿ ಸೋನಿಯಾ ಗಾಂಧಿಯವರನ್ನು ಗುಣಪಡಿಸಲು ತಮ್ಮ ಶಕ್ತಿ ಮೀರಿ ವೈಜ್ಞಾನಿಕ ಕ್ರಿಯೆಗಳಲ್ಲಿ ಮಗ್ನರಾಗಿದ್ದಾರೆ.

ಆದರೆ ಸೋನಿಯಾ ಗಾಂಧಿಯವರು ಗುಣಮುಖರಾಗುವಂತೆ ನಮ್ಮಲ್ಲಿಯ ಕೆಲವು ದೇವಾಲಯಗಳಲ್ಲಿ ಉರುಳು ಸೇವೆ ನಡೆಸುವ ಹಾಸ್ಯಾಸ್ಪದ ಮತ್ತು ನಾಟಕೀಯ ಕ್ರಿಯೆಗಳು ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಮುಖ್ಯವಾಗಿ ಮಾಜೀ ಸಂಸತ್ ಸದಸ್ಯ ಮತ್ತು ಚುನಾವಣೆಗಳಲ್ಲಿ ಸೋತು ಈಗ ಬಹುತೇಕ ಮೂಲೆಗುಂಪಾಗಿರುವ ಜನಾರ್ಧನ ಪೂಜಾರಿಯವರು ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಇತರ ದೈವದೇವರುಗಳಿಗೆ ಪ್ರಾರ್ಥಿಸಿ, ಉರುಳು ಸೇವೆಯನ್ನು ಆರಂಭಿಸಿದ್ದಾರೆ. ಇದರ ಹಿಂದೆ ಸೋನಿಯಾ ಗಾಂಧಿಯವರು ಗುಣಮುಖರಾಗಬೇಕೆಂಬ ಕಾಳಜಿಗಿಂತಲೂ ತಮ್ಮ ರಾಜಕೀಯ ಪುನರುಜ್ಜೀವನಕ್ಕೆ ಈ ಸಂದರ್ಭವನ್ನು  ಬಳಸಿಕೊಳ್ಳುವ ಪ್ರಯತ್ನವು ಕಾಣುತ್ತಿದೆ. ಇವರಿಗೆ ಹಿಂದೆ ಜೆಡಿಯಸ್‌ನಲ್ಲಿ ಇದ್ದು ಅಲ್ಲಿ ಬೇಳೆ ಬೇಯಿಸಲಾಗದೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡು ಗುರುತಿಸಿಕೊಳ್ಳಲು ಹವಣಿಸಿ ಪ್ರಚಾರ ಮತ್ತು ಒಲವು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿರುವ ಐವನ್ ಡಿಸೋಜರೂ ಸಾಥ್ ನೀಡಿದ್ದಾರೆ. ಅಲ್ಲದೆ ಇತರ ಕೆಲವು ಚೇಲಗಳನ್ನೂ ಸೇರಿಸಿ ಉರುಳಿದ್ದಾರೆ. ಶಾಸಕ ಯುಟಿ ಖಾದರ್‌ರವರೂ ಜತೆಗಿದ್ದು ಕಾರ್ಯಗಳಿಗೆ ಮೆರಗು ನೀಡಿದ್ದಾರೆ. ರಾಜಕಾರಣವನ್ನು ಯಾವುದೇ ಧರ್ಮದ ಹರಕೆಯಿಂದ ಸಾಧಿಸುವ ಮನೋಧರ್ಮವನ್ನು ಅನ್ಯಧರ್ಮೀಯರು ಹೇಗೆ ಸಮರ್ಥಿಸುವರೋ ತಿಳಿಯದು.

ಮೂಢನಂಬಿಕೆಗಳನ್ನು ಇನ್ನೂ ಪ್ರಮಾಣಿಕವಾಗಿ ಬಳಕೆಮಾಡುವ ಅವಿದ್ಯಾವಂತ, ಬಡ ಜನ ಸಮುದಾಯದವರು ಅನುಸರಿಸಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು, ರಾಜಕೀಯ ಕಾರ್ಯಕರ್ತರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮೂಢ ಕಾರ್ಯಾಚರಣೆಗಳ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣುವಾಗ ಅಸಹ್ಯವೆನಿಸುತ್ತದೆ, ಅದು ಅಕ್ಷಮ್ಯವಾಗುತ್ತದೆ. ಜನಾರ್ಧನ ಪೂಜಾರಿಯವರ ಮೊದಲನೆಯ ಪಾರ್ಲಿಮೆಂಟರಿ ಚುನಾವಣೆಯಿಂದ ತೊಡಗಿ ಕೊನೆಯ ಸೋಲಿನ ತನಕ ಕೂಲಂಕಶವಾಗಿ ಅಧ್ಯಯನ ಮಾಡಿ ತಿಳಿದುಕೊಂಡಿರುವ ನಮ್ಮಂಥವರಂತೂ ಅವರ ಈ ವರ್ತನೆಯನ್ನು ಖಂಡಿಸದೆ ಬಿಟ್ಟರೆ, ಮೂಢನಂಬಿಕೆಗೆ ಚಾಲನೆ ನೀಡುವ ಇಂತಹ ಆಟಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದರೆ ಅದಕ್ಕೆಲ್ಲ ಪರೋಕ್ಷ ಪ್ರೋತ್ಸಾಹ ನೀಡಿದಂತಾದೀತು. ಇನ್ನಾದರೂ ಇಂಥಾ ಮೂಢ ಕಾರ್ಯಾಚರಣೆಗಳ ಮೂಲಕ ಪ್ರಚಾರಪ್ರಿಯತೆಗೆ ಹವಣಿಸದೆ, ನೇರ ಮಾರ್ಗಗಳಲ್ಲಿ ಜನಪರ ಕಾರ್ಯಗಳನ್ನು ಕೈಗೆತ್ತಿ ಬಡಜನರ ಮೌಢ್ಯತೆಯನ್ನು ಹೋಗಲಾಡಿಸುವಂಥಾ ಕಾರ್ಯ ವೈಖರಿಯನ್ನು ರೂಪಿಸಿಕೊಂಡು ಕಾರ್ಯನಿರತರಾಗುವರೆಂದು  ಹಾರೈಸುತ್ತೇವೆ.

ಬಿನಾಯಕ್ ಸೆನ್ ಅವರನ್ನು ಬೆಂಬಲಿಸಿ

ಮಾನವ ಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್‌ಸೇನ್ ಅವರಿಗೆ ಚತ್ತೀಸ್‌ಘಡ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದುದಕ್ಕೆ ವಿರುದ್ದವಾಗಿ ದೇಶದಾದ್ಯಂತ ಖಂಡನೆಗಳು ವ್ಯಕ್ತವಾಗಿವೆ. ಈ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿಯನ್ನು ಉಚ್ಛ ನ್ಯಾಯಾಲಯವೂ ತಿರಸ್ಕರಿಸಿತ್ತು. ಆ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಅವರು ನೀಡಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಅವರಿಗೆ ಜಾಮೀನು ನೀಡಿದೆ ಮಾತ್ರವಲ್ಲದೆ ಅವರು ಯಾವುದೇ ದೇಶದ್ರೋಹದ ಕೆಲಸವನ್ನು ಮಾಡಿರುವುದು ತೋರುವುದಿಲ್ಲ ಎಂದು ಪರಿಗಣಿಸಿ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆಜ್ಞಾಪಿಸಿರುವುದು ಮಾನವ ಹಕ್ಕುಗಳ ಹೋರಾಟಗಾರರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿನಾಯಕ್‌ಸೇನ್ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದಕ್ಕೆ ಮತ್ತು ತನ್ನ ಬಿಡುಗಡೆಗೆ ಮಾನವ ಹಕ್ಕುಗಳ ಸಂರಕ್ಷಣೆಗೆ ತಾವು ನಡೆಸಿದ ಹೋರಾಟದ ಸಲುವಾಗಿ ತನಗೆ ದ.ಕೋರಿಯಾ ಸರಕಾರವು ನೀಡಿದ  ಪ್ರತಿಸ್ಠಿತ ಗ್ವಾಂಗ್ಜು ಪ್ರಶಸ್ತಿಯನ್ನು ಸ್ವೀಕರಿಸುವ ಸಂಧರ್ಭದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ನರಮೇಧ ಹಾಗೂ ಮಾನವ ಹಕ್ಕುಗಳ ದಮನದ ಬಗ್ಗೆ ತನ್ನ ಅನುಭವದ ಕಹಿ ಅನಿಸಿಕೆಗಳನ್ನು ವಿವರಿಸುತ್ತಾ ಮಾಡಿದ್ದ ಭಾಷಣವು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಓದಿರುವೆವು.

ಅವರು ಮಾಡಿದ್ದಾದರೂ ಏನು? ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರುವ ಹಾಗೆ ಮಾಡಲು ಪ್ರಭುತ್ವವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕೈಜೋಡಿಸಿ ಗಣಿಗಾರಿಕೆಗೆ ಅರಣ್ಯಭೂಮಿಯನ್ನು ನೀಡಿ ಶತಮಾನಗಳಿಂದ ಅಲ್ಲಿ ವಾಸಮಾಡಿಕೊಂಡಿದ್ದ  ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡು ನಿರ್ವಸಿತರನ್ನಾಗಿ ಮಾಡಿರುವುದನ್ನು ವಿರೋಧಿಸುವವರೊಡನೆ ಕೈ ಜೋಡಿಸಿದ್ದಾಗಿದೆ. ನಗರದಲ್ಲಿ ಸಿಗಬಹುದಾದ ಐಶಾರಾಮಿ ಬದುಕನ್ನು ನಿರ್ಲಕ್ಷಿಸಿ ಎಲ್ಲಾ ನಾಗರಿಕ ಸೌಕರ್ಯಗಳಿಂದ ವಂಚಿತರಾದ ಅರಣ್ಯವಾಸಿಗಳಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಅವರ ಸಾವು ನೋವುಗಳಿಗೆ ಸ್ಪಂದಿಸುತ್ತಾ ಅವರ ಹಕ್ಕುಗಳ ಅರಿವನ್ನು ಅವರಿಗೆ ನೀಡುತ್ತಾ ಅವರೊಂದಿಗೆ ಬದುಕಿರುವುದೇ ಅಗಿದೆ. ಅವರ ಆ ಉದಾತ್ತ ಸೇವೆಗೆ ಪ್ರಭುತ್ವದಿಂದ  ಅವರಿಗೆ ದಕ್ಕಿದ ಪುರಸ್ಕಾರ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾವೋವಾದಿ, ದೇಶದ್ರೋಹಿ ಎಂದು ಪರಿಗಣಿಸಿ ಜೀವಾವಧಿ ಜೈಲು ಶಿಕ್ಷೆ! ಇಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಬಣ್ಣಿಸಿ ದಮನಿಸುವ ಕಾರ್ಯ ವೈಖರಿಯನ್ನು ಭಾರತದಿಂದ ತೊಡೆದು ಹಾಕಬೇಕೆಂದು ದೇಶದಾದ್ಯಂತ ಪ್ರಗತಿಪರ ಸಾರ್ವಜನಿಕ ಸಂಘಸಂಸ್ಥೆಗಳು, ಎಡಪಕ್ಷಗಳು ಚಳುವಳಿಯನ್ನು ಕೈಗೆತ್ತಿಗೊಳ್ಳಬೇಕೆಂದು ನಾವು ಹಾರೈಸುತ್ತೇವೆ.