ಸಾರ್ವಜನಿಕ ಇಲಾಖೆಗಳಲ್ಲಿ ಕನ್ನಡದ ಬಳಕೆ ಹೆಚ್ಚಲಿ

ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ 2011 ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಮೇ 30, 2011)

ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ 2011 ರ ‘ಸಾರ್ವಜನಿಕ ವಲಯದಲ್ಲಿ ಕನ್ನಡ ಭಾಷಾ ಬಳಕೆ’ ಗೋಷ್ಟಿಯಲ್ಲಿ ರಾ.ನಂ.ಚಂದ್ರಶೇಖರ್ ರವರು ನೀಡಿದ ಉಪನ್ಯಾಸವು ಬಹಳ ಅರ್ಥಪೂರ್ಣವೂ ಸಂದರ್ಭೋಚಿತವೂ ಆಗಿರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಕನ್ನಡವೇ ಕಳೆದು ಕೊಳ್ಳುವಂತಹ ಪ್ರಕ್ರಿಯೆಯೊಂದು ನಡೆಯುತ್ತಿರುವುದು ಗೋಚರಿಸುತ್ತಿದೆ.  ಸಿಂಡಿಕೇಟ್ ಬೇಂಕ್, ಕೆನರಾ ಬೇಂಕ್, ಕಾರ್ಪೋರೇಷನ್ ಬೇಂಕ್, ವಿಜಯಾ ಬೇಂಕ್, ಮೊದಲಾದುವುಗಳು ಆರಂಭದಿಂದಲೂ ಅಖಿಲ ಭಾರತ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ರಾಷ್ಟ್ರೀಕೃತ ಬೇಂಕುಗಳಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸ್ಥಾನವೇ ಇಲ್ಲವಾಗಿದೆ. ಭಾರತ ದೇಶವು ಹಲವು ಭಾಷೆಗಳುಳ್ಳ ರಾಜ್ಯಗಳ ಒಂದು ಒಕ್ಕೂಟವಾಗಿರುವುದರಿಂದ ಕನ್ನಡ ಭಾಷೆಗೂ ಕನ್ನಡಿಗರಿಗೂ ಸಮಾನ ಸ್ಥಾನಮಾನಗಳು ಸಂವಿಧಾನಬದ್ದವಾಗಿ ದೊರಕಬೇಕಿವೆ. ಒಂದು ಕಾಲದಲ್ಲಿ ಈ ಬೇಂಕುಗಳಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದ್ದ  ಕನ್ನಡ ಭಾಷೆಗೆ ಇಂದು ಸ್ಥಾನವೇ ಇಲ್ಲದಂತಾಗಿದೆ. ಹಾಗೆಯೇ ರಾಜ್ಯದ ರೈಲ್ವೇ, ಅಂಚೆ, ವಿಮೆ, ಆದಾಯ ತೆರಿಗೆ, ಸೇವಾ ತೆರಿಗೆ, ವಿವಿಧ ನಿಗಮಗಳು ಇತ್ಯಾದಿಗಳಲ್ಲಿ ಕನ್ನಡದ ಬಳಕೆಗೆ ಅವಕಾಶವೇ ಇಲ್ಲವಾಗಿದೆ. ಈ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. ರಾಜ್ಯದಲ್ಲಿನ ಕನ್ನಡ ಹಿತರಕ್ಷಣಾ ಸಂಘ ಸಂಸ್ಥೆಗಳು ಈ ವಿಷಯಕ್ಕೆ ಆದ್ಯತೆಯನ್ನು ಕೊಡುವಂತೆ ಚಳುವಳಿಯನ್ನು ಹಮ್ಮಿಕೊಂಡು ಒತ್ತಡ ಹೇರಬೇಕೆಂದು ಜನರು ಅಪೇಕ್ಷಿಸುತ್ತಾರೆ. ಅಂತೆಯೇ ಕನ್ನಡ ಸಂಸ್ಕೃತಿ ಮತ್ತು ಅಭಿವೃದ್ದಿ ಪ್ರಾಧಿಕಾರವು ಈ ವಿಚಾರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟು ರಾಜ್ಯದ ಎಲ್ಲಾ ಸಾರ್ವಜನಿಕ ಇಲಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವಂತಾಗುವಂತೆ ತನ್ನ ಕರ್ತವ್ಯವನ್ನು ನಿರ್ವಹಿಸುವರೆಂದು ಜನರು ನಿರೀಕ್ಷಿಸುತ್ತಾರೆ.

Leave a Reply

Your email address will not be published. Required fields are marked *