Archive | June 2011

ಭಾರತದ ಕಮ್ಯೂನಿಸ್ಟ್ ಪಕ್ಷಗಳು ಮತ್ತೆ ಒಗ್ಗೂಡಲಿ

ಭಾರತದ ಕಮ್ಯೂನಿಸ್ಟ್ ಪಕ್ಷಗಳ ಪುನರೇಕೀಕರಣದ ಬಗ್ಗೆ ಸೀತಾರಂ ಯೆಚೂರಿಯವರ ಹೇಳಿಕೆಗೆ ಪ್ರತಿಕ್ರಿಯೆ
(ದಿನಾಂಕ ಜೂನ್ 18, 2011)

ಭಾರತ ಕಮ್ಯುನಿಸ್ಟ್ ಪಕ್ಷವು 1964 ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940 ರಲ್ಲಿ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ನಿರಂತರ ಮತ್ತು ಸಕ್ರಿಯ ಪಾತ್ರ ವಹಿಸಿದ್ದೇನೆ.  ಭಾರತೀಯ ರಾಜಕಾರಣದಲ್ಲಿ  ಕಮ್ಯುನಿಸ್ಟ್  ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿತ್ತು. ಕಮ್ಯುನಿಸ್ಟ್  ಚಳುವಳಿಯು ವಿಭಜಿತವಾದ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ ಹಾಗೂ ತನ್ನ ಸ್ಥಾನ ಮಾನಗಳನ್ನೂ ಕಳೆದುಕೊಂಡಿದೆ. ಇದೀಗ ಹಿಂದೆಂದೂ ಕಾಣದ ಸೋಲನ್ನೂ ಅನುಭವಿಸಿದೆ. ಅಲ್ಲದೆ ಹಿಂದೆ ಲೆಕ್ಕಕ್ಕೇ ಇಲ್ಲ ಎಂಬ ಸ್ಥಾನದಲ್ಲಿದ್ದ ಬಲ ಪಂಥೀಯ ಕೋಮುವಾದಿ ಅರ್ ಎಸ್ ಎಸ್ ನೇತೃತ್ವದ ಭಾರತೀಯ ಜನತಾ ಪಕ್ಷವು ಇಂದು ಪ್ರಬಲವಾಗಿ ಬೆಳೆದು ದ್ವಿತಿಯ ಸ್ಥಾನಕ್ಕೆ ಏರಿ ನಿಂತಿದೆ. ಇದು ಕಮ್ಯುನಿಸ್ಟ್  ಪಕ್ಷದ ವಿಭಜನೆಯ ನೇರ ಪರಿಣಾಮ. ಈ ಒಡಕಿನ ದುರ್ಲಾಭವನ್ನು ಸಮಯ, ಸಂಧರ್ಭಸಾಧಕರು ಪಡೆದು ಸರಕಾರವು ಬಂಡವಾಳಶಾಹಿ ಧೋರಣೆಗಳನ್ನು ಹಮ್ಮಿಕೊಂಡು ತೀವ್ರಗತಿಯಲ್ಲಿ ಅವುಗಳನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಕಾಣುತ್ತೇವೆ. ಸೇವಾ ಕ್ಷೇತ್ರಗಳಾದ ರಸ್ತೆ, ಸಂಚಾರ, ವಿದ್ಯುತ್, ನೀರು ಸರಬರಾಜು, ವಿಮೆ, ಅಂಚೆ, ದೂರವಾಣಿ, ದೂರದರ್ಶನ, ಆಕಾಶವಾಣಿ, ಇತ್ಯಾದಿಗಳನ್ನು ಸಹಾ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ಕಾಣುತ್ತೇವೆ. ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮಣೆಹಾಕಿ ಸ್ವಾಗತಿಸುತ್ತಾ, ದೇಶದ ಅಮೂಲ್ಯ ಪ್ರಾಕೃತಿಕ ಸಂಪತ್ತೆಲ್ಲಾ ಸೂರೆಗೊಂಡು ಪರದೇಶಕ್ಕೆ ಕಳ್ಳಸಾಗಣೆಯಾಗುತ್ತಿರುವುದೂ ಕಂಡುಬರುತ್ತಿದೆ. ದುಡಿಯುವ ಕಾರ್ಮಿಕರು ಹಿಂದೆ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ಪಡೆದಿದ್ದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲಸದ ನಿಶ್ಚಿತತೆ, ಕಾಯಾಮಾತಿ ಇಲ್ಲದೆ ಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಅವರನ್ನು ಅನೇಕ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ನಮ್ಮ ದೇಶದ ಜನರಲ್ಲಿ ಶೇ 70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಸರಕಾರದ ಕೆಟ್ಟ ಕೃಷಿ ನೀತಿಯಿಂದಾಗಿ ಅವರ ಬದುಕೇ ಚಿಂತಾಜನಕವಾಗಿದೆ. ಬೆಳೆದ ಬೇಳೆಗೆ, ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲದೆ, ತೆಗೆದ ಸಾಲಗಳನ್ನು ಮರುಪಾವತಿಸಲಾಗದೆ ಹೊಲ ಗದ್ದೆಗಳನ್ನು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆಗೈಯುತ್ತಿದ್ದಾರೆ. ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಬಂಡವಾಳಶಾಹಿಗಳು ವಶೀಕರಿಸಿ ದುರ್ಲಾಭ ಪಡೆಯುತ್ತಿದ್ದಾರೆ. ಶಿಕ್ಷಣವು ಖಾಸಗೀಕರಣಗೊಡು ವ್ಯಾಪಾರದ ಸರಕಾಗಿ ಬಡ ಕಾರ್ಮಿಕರ ರೈತರ ಮಕ್ಕಳಿಗೆ ಮರೀಚಿಕೆ ಯಾಗಿದೆ. ಸರಕಾರದ ಕಾರ್ಯಕ್ರಮಗಳು ಇನ್ನೂ ತೀವ್ರಗತಿಯಲ್ಲಿ ಖಾಸಗೀಕರಣದತ್ತ ಸಾಗುತ್ತಿರುವುದನ್ನು ಕಾಣುವಾಗ ಭೀತಿ ಹುಟ್ಟುತ್ತದೆ. ಆಂತೆಯೇ ಸರ್ವ ಸವಲತ್ತುಗಳನ್ನು ಸರಕಾರದಿಂದ ಪಡೆದು ಸ್ಥಾಪಿತವಾದ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಬಡವರನ್ನು ಸುಲಿಯುವ ಮತ್ತು ಬಡ ರೋಗಿಗಳನ್ನು ಪ್ರಯೋಗಾಲಯದ ಬಲಿ ಪಶು(ಗಿನಿ ಪಿಗ್) ಗಳಂತೆ ಹೊಸ ಮದ್ದುಗಳ ಮತ್ತು ಆವಿಷ್ಕಾರಗಳ ಪ್ರಯೋಗಕ್ಕೆ ಅವರನ್ನು ಬಳಸಲಾಗುತ್ತಿದ್ದರೆ, ಶ್ರೀಮಂತರಿಗೆ  ಅವು  ಐಷಾರಾಮಿ ವಿರಾಮ ಕೇಂದ್ರಗಳಾಗಿರುವುದನ್ನು ಕಾಣುತ್ತೇವೆ. ಮನೆ ಬಾಡಿಗೆ ನಿಯಂತ್ರಣಗಳಿಲ್ಲದೆ ಬಾಡಿಗೆ ವಸತಿದಾರರ ಬದುಕೇ ದುಸ್ತರವಾಗಿದೆ. ಲಂಚ, ಭ್ರಷ್ಟಾಚಾರಗಳು ಬಂಡವಾಳಿಗಳ ಶನಿ ಸಂತಾನಗಳಾಗಿ ದೇಶವನ್ನು ಕಾಡುತ್ತಿವೆ. ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ, ದುರ್ವ್ಯವಹಾರ ಮತ್ತು ವಿದೇಶೀ ಬೇಂಕುಗಳಲ್ಲಿ ಕಳ್ಳ ಕಪ್ಪು ಹಣದ ಶೇಖರಣೆಗಳು ಮುಗಿಲು ಮುಟ್ಟಿರುವ ವರದಿಗಳನ್ನು ನಾವು ಕಾಣುತ್ತೇವೆ. ಮೂಲಭೂತ ಜಾತಿವಾದಿಗಳು ದೇಶದಾದ್ಯಂತ ಭಯೋತ್ಪಾಧನೆ ಮತ್ತು ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿದು ಕೊಳ್ಳುವ ಸಂಚಿನ ರಹಸ್ಯ ಬಯಲಾಗಿದ್ದನ್ನೂ ಕಾಣುತ್ತೇವೆ.

ಇಂಥಾ ದುಸ್ಥಿತಿಯಲ್ಲಿ ಎಡ ಪಕ್ಷಗಳ ಏಕೀಕರಣವನ್ನು ಒಂದು ಆಶಾಕಿರಣವಾಗಿ ಭಾರತದ ಶ್ರಮ ಜೀವಿಗಳು ಎದುರು ನೋಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯನ್ನು ಮನಗಂಡು ಕಮ್ಯುನಿಸ್ಟ್(ಮಾ) ಪಕ್ಷದ ಮುಂದಾಳು ಸೀತಾರಾಂ ಯೆಚೂರಿಯವರು ಎರಡೂ ಪಕ್ಷಗಳ ಏಕೀಕರಣಕ್ಕೆ ಕರೆಕೊಟ್ಟಿದ್ದಾರೆ. ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಅಂತಹ ಸಂದಿಗ್ಧ ಪರಿಸ್ಥಿಯನ್ನು ಎದುರಿಸಿ ಬಳಿಕ ಒಂದುಗೂಡಿ ಚೇತರಿಸಿರುವುದನ್ನು ನಾವು ಕಂಡಿದ್ದೇವೆ.  ಕಮ್ಯುನಿಸ್ಟ್ ಪಕ್ಷಗಳು ಒಂದುಗೂಡಿದರೆ ಎಡ ಪ್ರಜಾಪ್ರಭುತ್ವವಾದಿ ಕ್ರಾಂತಿಕಾರಿ ಪಕ್ಷಗಳ ಪುನರೇಕೀಕರಣದ ಸಂಭವದ ಧ್ವನಿಯೂ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿದೆ. ಅಂತಿರುವಾಗ ಇದು  ಖಂಡಿತವಾಗಿಯೂ ಒಂದು ಉತ್ತಮ ಸಲಹೆ ಹಾಗೂ ಸಂಧರ್ಬೋಚಿತವೂ ಅಗಿದೆ. ಅಂತೆಯೇ ನಾವೂ ಅದನ್ನು ಸ್ವಾಗತಿಸುತ್ತೇವೆ. ಸುಮಾರು 5 ದಶಕಗಳ ಕಾಲ ಬೇರೆ ಬೇರೆಯಾಗಿದ್ದ ಪಕ್ಷಗಳೆರಡು ಕೇವಲ ನಾಯಕರ ತೀರ್ಮಾನದಿಂದ ಮಾತ್ರವೇ ಒಂದಾಗಿಬಿಡುತ್ತವೆ ಎಂಬ ಭ್ರಮೆ ನಮಗಿಲ್ಲ. ಪ್ರತ್ಯ ಪ್ರತ್ಯೇಕ ವಾಗಿ ಬೆಳೆದ ಸಂಘಟನೆಗಳು ತಮ್ಮದೇ ಆದ ನಡವಳಿಕೆಗಳನ್ನು ಹೊಂದಿರುವುದು ಸಹಜ. ಆದುದರಿಂದ ಎರಡೂ ಪಕ್ಷಗಳು ಮುಂದಿನ ಮಹಾ ಅಧಿವೇಶನಗಳ ಸಿದ್ಧತೆ ಮಾಡುವ ಸಂದರ್ಭಗಳಲ್ಲಿ ಪಕ್ಷಗಳ ಪ್ರತೀಯೊಂದು ಘಟಕಗಳಲ್ಲಿ ಸಹಾ ಈ ಬಗ್ಗೆ ಗಂಭೀರವಾದ ಚರ್ಚೆ ನಡೆದು ಅಭಿಪ್ರಾಯ ಮತ್ತು ಸಮನ್ವಯತೆಯನ್ನು ಸಾಧಿಸಿ ಮುಂದಿನ ಮಹಾ ಅಧಿವೇಶನಗಳಲ್ಲಿ ಏಕಾಭಿಪ್ರಾಯಕ್ಕೆ ಬರುವ ಮೂಲಕ ಈ ಏಕೀಕರಣದ ಪ್ರಕ್ರಿಯೆಯು ಸಾರ್ವತ್ರಿಕವಾಗಿ ನಡೆಯಬೇಕೆಂದು ನಾವು ಹಾರೈಸುತ್ತೇವೆ. ಹಿಂದಿನ ಕಹಿ ಅನುಭವಗಳನ್ನು ತೊಡೆದು ಹಾಕಿ ಪುನರೇಕೀಕರಣ ಪ್ರಕ್ರಿಯೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಎಲ್ಲಾ ಹಂತಗಳಲ್ಲಿಯೂ ಭಾಗಿಗಳಾಗ ಬೇಕೆಂದು ನಮ್ಮ ಅಪೇಕ್ಷೆ. ಈ ಹಿಂದೆಯೇ ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಏಕೀಕರಣದ ಕರೆಯನ್ನು ಕೊಟ್ಟಿದ್ದರೂ ಅದು ಕಾರ್ಯಗತವಾಗಿರಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆರಂಭದಲ್ಲಿ ಪ್ರದಾನ ಕಾರ್ಯದರ್ಶಿಯಾಗಿದ್ದ ರಾಜೇಶ್ವರ ರಾಯರು, ಬಳಿಕ ಇಂದ್ರಜಿತ್ ಗುಪ್ತ, ಆ ಬಳಿಕ ಎ ಬಿ ಬರ್ಧನ್‌ರವರು ಪಕ್ಷಗಳ ಏಕೀಕರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿರುವುದನ್ನು ನೆನಪಿಸುತ್ತೇನೆ. ಅಲ್ಲದೆ ಪಕ್ಷದ ಪ್ರತಿಯೊಂದು ಮಹಾ ಅಧಿವೇಶನಗಳಲ್ಲಿಯೂ ಸಹಾ ಎರಡೂ ಪಕ್ಷಗಳ ಐಕ್ಯತೆಗೆ ಕರೆ ನೀಡುತ್ತಾ ಐಕ್ಯವು ಭಾರತೀಯ ರಾಜಕೀಯದಲ್ಲಿ  ಹೊಸ ತಿರುವನ್ನು ಉಂಟು ಮಾಡಲು ಆರಂಭದ ಹೆಜ್ಜೆಯಾಗಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ. ಆದರೆ ಕಮ್ಯುನಿಸ್ಟ್(ಮಾ) ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದೇ ಇದ್ದುದರಿಂದ ಏಕೀಕರಣದ ಕಾರ್ಯವು ದೂರದ ಕನಸಾಗಿಯೇ ಉಳಿದಿತ್ತು. ಈಗಲಾದರೂ ಕಮ್ಯುನಿಸ್ಟ್ ಪಕ್ಷಗಳ ಸೋಲಿನ ಅನುಭವದಿಂದ ಏಕೀಕರಣದ ಕರೆಯ ಧ್ವನಿಯು ಆ ಪಕ್ಷದ ನಾಯಕ ಸೀತಾರಾಂ ಯೆಚೂರಿಯವರಿಂದಲೇ ಮೊಳಗಿದ್ದನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ದೂರದರ್ಶನದಲ್ಲಿ ಪ್ರಸಾರಗೊಂಡ ಅವರ ಹೇಳಿಕೆಯಲ್ಲಿ ವಿಲೀನದ ಅಗತ್ಯವನ್ನು ಬಹಳ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ ಮತ್ತು ಅದು ಉನ್ನತ ಮಟ್ಟದಲ್ಲಿ ಮಾತ್ರ ಆದರೆ ಸಾಲದು, ಅದು ಪಕ್ಷಗಳ ಎಲ್ಲ ಹಂತ ಗಳಲ್ಲಿಯೂ ನಡೆಯ ಬೇಕೆಂಬ ಅವರ ಸಲಹೆಯು ಅತ್ಯುತ್ತಮವಾಗಿದೆ. ಆದರೆ ಇದರ ಬಗ್ಗೆ  ಕೆಲವು ನಾಯಕರು ಕಹಿ ಪ್ರತಿಕ್ರಿಯೆ ನೀಡಿರುವುದು ಒಡಕು ದನಿಗಳ ಸಂಕೇತವಾಗಿದೆ. ಇದು ಪಕ್ಷಗಳೊಳಗಿನ ಚರ್ಚೆಯಿಂದ ಸಮನ್ವಯಗೊಂಡು ಪರಿಹಾರವಾಗುವುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಕಾಲದ ಅವಶ್ಯಕತೆಯಾಗಿದೆ.
ಎರಡೂ ಪಕ್ಷಗಳ ಮಹಾ ಅಧಿವೇಶನಗಳು ಮುಂದಿನ ತಿಂಗಳುಗಳಲ್ಲಿ ನಡೆಯಲಿವೆ. ಕಮ್ಯುನಿಸ್ಟ್ ಪಕ್ಷಗಳ ಕ್ರಮದಂತೆ ಮಹಾ ಅಧಿವೇಶನಗಳ ಮೊದಲು ಪಕ್ಷಗಳ ರಾಜ್ಯ, ಜಿಲ್ಲೆ, ಹಾಗೂ ಕೆಳ ಮಟ್ಟದ ಎಲ್ಲಾ ಘಟಕಗಳಲ್ಲಿ ಅಧಿವೇಶನದ ಮುಂದೆ ಬರಲಿರುವ ಮುಖ್ಯ ನಿರ್ಣಯಗಳನ್ನು ಚರ್ಚಿಸಿ ಅಭಿಪ್ರ್ರಾಯ ವನ್ನು ಕ್ರೋಢೀಕರಿಸಿ ಕೆಳಗಿನಿಂದ ಮೇಲಿನ ಹಂತದ ಏಕಾಭಿಪ್ರಾಯವನ್ನು ಮೂಡಿಸುವಂತಾಗಬೇಕು. ಕಮ್ಯುನಿಸ್ಟ್ ಚಳುವಳಿಯಲ್ಲಿ ಏಳು ದಶಕಗಳ ಸಕ್ರಿಯ ಅನುಭವವುಳ್ಳ ನಾನಂತೂ ಈ ಬಗ್ಗೆ ಬಹಳ ಆಶಾ ಭಾವನೆ ತಳೆದಿದ್ದೇನೆ. ಇದು ಕೇವಲ ನನ್ನ ಆಶೆ ಮಾತ್ರವಲ್ಲ, ನಮ್ಮ ಪಕ್ಷದ, ಅದರ ನೇತೃತ್ವದಲ್ಲಿರುವ ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ಇತರ ಎಲ್ಲಾ ಸಾಮೂಹಿಕ ಸಂಘಟನೆಗಳ ಹಾಗೂ ಪಕ್ಷದ ಬಗ್ಗೆ ಸದಭಿಪ್ರಾಯವುಳ್ಳ  ಮತ್ತು ಪಕ್ಷವನ್ನು ಬೆಂಬಲಿಸುವ ಎಡ ಅಭಿಪ್ರಾಯವುಳ್ಳ ಬುದ್ಧಿ ಜೀವಿಗಳು ಸಹಾ ಇದೇ ಅಭಿಪ್ರಾಯವನ್ನು ತಳೆದಿದ್ದಾರೆ ಎಂದು ತಿಳಿದಿದ್ದೇನೆ. ಅಂತೂ ಯೆಚೂರಿಯವರ ಏಕೀಕರಣದ ಕರೆಯು ಕಾರ್ಯ ರೂಪಕ್ಕೆ ಬರಲಿ ಮತ್ತು ಕಮ್ಯುನಿಸ್ಟ್  ಪಾರ್ಟಿಯು ತನ್ನ ಹಿಂದಿನ ವರ್ಚಸ್ಸನ್ನು ಪಡೆದು ದೇಶದ ಆಡಳಿತವೇ ಎಡ ಪ್ರಜಾಪ್ರಭುತ್ವವಾದಿ ದಿಸೆಯಲ್ಲಿ ರೂಪುಗೊಳ್ಳಲಿ ಎಂದು ಒಬ್ಬ ಹಿರಿಯ  ಕಮ್ಯುನಿಸ್ಟ್ ಕಾರ್ಯಕರ್ತನಾಗಿ ನಾನು ನಿವೇದಿಸಿಕೊಳ್ಳುತ್ತೇನೆ ಮತ್ತು ಇದು ನನ್ನ ಜೀವಿತಾವಧಿಯಲ್ಲೇ ಜರಗಲಿ ಎಂದು ನನ್ನ ಜೀವಿತದ ಕೊನೆಯ ಹಂತದಲ್ಲಿರುವ ನಾನು ಹಾರೈಸುತ್ತೇನೆ.

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುವುದು ಒಳ್ಳೆಯದೇ

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುವ ಬಗ್ಗೆ ಪೇಜಾವರ ಸ್ವಾಮಿಗಳ ಆಕ್ಷೇಪಕ್ಕೆ ಪ್ರತಿಕ್ರಿಯೆ (ದಿನಾಂಕ ಜೂನ್ 12, 2011)

ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿರುವ ಬಗ್ಗೆ ಉಡುಪಿ ಪೇಜಾವರ ಮಠದ ಶ್ರೀಪಾದರು ಮತ್ತು ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಇವರುಗಳ ಮದ್ಯೆ ಇತ್ತೀಚೆಗೆ ಒಂದು ಸ್ವಾರಸ್ಯಕರ ಚರ್ಚೆ ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಇವರ ವಾದವಿವಾದಗಳು ತೀರಾ ವ್ಯತಿರಿಕ್ತವಾಗಿದ್ದು, ಸ್ವಾಮಿಗಳು ಶತಮಾನಗಳಿಂದ ಚಾತುರ್ವರ್ಣೀಯ ಅಧಾರದ ಮೇಲೆ ನಿಂತಿರುವ ಹಿಂದೂ ಸಮಾಜವನ್ನು ಚಂದಗಾಣಿಸುವ ಮತ್ತು ಅದರಿಂದ ಶತಮಾನಗಳಿಂದ ನೋವುಂಡು ತುಳಿತಕ್ಕೂ, ದಮನಕ್ಕೂ ಒಳಪಟ್ಟು ಸಮಾಜದಿಂದ ಬಹಿಷ್ಕೃತರಾಗಿ ನರಳುತ್ತಿರುವ ದಲಿತರನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತದೆ. ಸ್ವಾಮಿಗಳು ಅಸ್ಪೃಶ್ಯತೆಯನ್ನು ನಿವಾರಿಸುವ ಮಟ್ಟಿಗೆ ಆಸಕ್ತಿ ಹೊಂದಿರಬಹುದು. ಆದರೆ ಅವರ ಪ್ರಯತ್ನಗಳು ಯಾವುದೇ ಫಲ ನೀಡಿಲ್ಲ. ಚಾತುರ್ವರ್ಣೀಯ ಕರ್ಮ ಸಿದ್ದಾಂತವನ್ನು ಪ್ರತಿಪಾದಿಸುವವರು ವೈಷ್ಣವ ದೀಕ್ಷೆ ಕೊಟ್ಟ ಮಾತ್ರಕ್ಕೆ ಯಾವ ಬದಲಾವಣೆಗಳನ್ನು ಮಾಡಿಸಲು ಸಾಧ್ಯ?  ಶ್ರೀಗಳು ಈ ಹಿಂದೆ ಮೂರು ಬಾರಿ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಅಧಿಕಾರವನ್ನು ಸ್ವೀಕರಿಸಿದ್ದರೂ ಅವರ ಆ ಕಾಲಾವಧಿಯಲ್ಲಿ ಮಠದಲ್ಲಿ ಯಾವುದೇ ರೀತಿಯ ಸುಧಾರಣೆಯನ್ನಾಗಲಿ, ವರ್ಣ ಬೇಧವನ್ನು ತೊಡೆದು ಹಾಕುವ ಪ್ರಯತ್ನಗಳಾಗಲಿ ನಡೆಸಿರುವುದು ಕಂಡು ಬಂದಿಲ್ಲ. ಅವರ ಸಂಪ್ರದಾಯ ಬದ್ಧತೆ ಅವರಿಗೆ ಅವಕಾಶ ನೀಡಲಿಲ್ಲ ಹಾಗೂ ಸಂಪ್ರದಾಯವನ್ನು ಮುರಿದು ಸುಧಾರಣೆಯನ್ನು ತರುವ ಮನೋಧರ್ಮವನ್ನೂ ಅವರು ಪ್ರದರ್ಶಿಸಲಿಲ್ಲ. ಪುತ್ತಿಗೆ ಮಠದ ಶ್ರೀಪಾದರು ಅಮೆರಿಕಕ್ಕೆ ಹೋಗಿ ತನ್ನ ಭಕ್ತಾದಿಗಳನ್ನು ಕಂಡು ಬಂದರು ಎಂಬ ಒಂದೇ ಕಾರಣದಿಂದ ಅವರು ಪರ್ಯಾಯ ಪೀಠ ಸ್ವೀಕರಿಸುವ ದಿನ ಅವರ ವಿರುದ್ದ ಸತ್ಯಾಗೃಹ ಹೂಡಿದ್ದರು. ತಮ್ಮ ಅಷ್ಠ ಮಠದ ಯತಿಗಳೊಳಗೆಯೇ ಸಮನ್ವಯವನ್ನು ಮೂಡಿಸಲು ಅಸಮರ್ಥರಾದ ಶ್ರೀಗಳು ಅನಾದಿ ಕಾಲದಿಂದಲೂ ಶ್ರೇಣೀಕೃತ ಸಮಾಜದಲ್ಲಿ ದಮನಿತರಿಗಾಗುವ ಶೋಷಣೆಗಳನ್ನೂ ಅನಾಚಾರಗಳನ್ನೂ ತೊಡೆದುಹಾಕುವರೆಂದು ನಂಬಲು ಸಾಧ್ಯವೇ? ಚಾತುರ್ವರ್ಣೀಯವು ಹಿಂದೂ ಧರ್ಮದ ಒಂದು ಅಖಂಡ ಅಂಗವೆಂದು ಶ್ರೀಗಳಂಥವರು ಪ್ರತಿಪಾಧಿಸುವುದು ನಿಜವಲ್ಲವೇನು? ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ರಿಯೆಯಲ್ಲಿ ಕೂಡಾ ಪುರುಷ ಸೂಕ್ತದ ಪಠಣ ಕಡ್ಡಾಯವಲ್ಲವೇನು? ಹಿಂದೂಗಳ ಯಾವುದೇ ಪಂಥದವರು ಸಹಾ ಚಾತುರ್ವಣ್ಯವನ್ನು ತಮ್ಮ ಧರ್ಮದ ಮೂಲಭೂತ ಆಧಾರವಾಗಿ ಪ್ರತಿಪಾದಿಸುವುದಿಲ್ಲವೇನು? ಈ ವೈದಿಕ ಧರ್ಮಗಳಲ್ಲಿರುವ ಅನಾಚಾರಗಳನ್ನು ಸಂಪೂರ್ಣವಾಗಿ ತೊರೆದಿರುವ ಬೌದ್ಧ ಧರ್ಮವನ್ನು ಸ್ವೀಕರಿಸುವವರಿಗೆ ಹಿಂದುತ್ವದ ಕಟ್ಟುಪಾಡುಗಳನ್ನು ಮೀರಿ ನಡೆಯುವ ಸ್ವಾತಂತ್ರ್ಯಲಭಿಸುವುದಿಲ್ಲವೇನು? ಇದಕ್ಕಾಗಿ ಅಲ್ಲವೇ ಬಾಬಾ ಸಾಹೇಬ್ ಅಂಬೆಡ್ಕರ್‌ರವರು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ ಎಂದು ಸಾರಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು?  ಅವರ ಹಾದಿಯನ್ನು ಇತರ ದಲಿತರು ಅನುಸರಿಸಿದರೆ ಏಕೆ ಶ್ರೀಗಳು ಚಿಂತಿತರಾಗಬೇಕು? ಅವರ ಬಿಡುಗಡೆಯ ದಾರಿಯನ್ನು ಅವರೇ ಕಂಡುಕೊಳ್ಳಲಿ.

ಶ್ರೀಗಳು  ಇತರ ಧರ್ಮವನ್ನು ಹೆಸರಿಸಿ ಅವರಲ್ಲಿ ದಲೈಲಾಮವಾಗಲಿ, ಪೋಪ್ ಆಗಲು ಸಾಧ್ಯವೇ ಎಂಬ ವಿತಂಡವಾದವನ್ನು ಮುಂದಿರಿಸಿರುವರು. ಬೇರೆ ಯಾವುದೇ ಧರ್ಮದಲ್ಲಿಯೂ ಧರ್ಮದೊಳಗಿನ ಹುಟ್ಟು ಅವನು ಯಾವ ಸ್ಥಾನವನ್ನು ಹೊಂದುವುದಕ್ಕೂ ಅಡ್ಡಿ ಬರುವುದಿಲ್ಲ ಎನ್ನುವುದು ಶ್ರೀಗಳಿಗೆ ತಿಳಿಯದಿರುವುದು ವಿಷಾದನೀಯ. ಹಿಂದೂ ಧರ್ಮದಲ್ಲಿ ಪ್ರತಿಪಾದಿಸಿದಂತೆ ಪುರುಷಸೂಕ್ತನ ಪಾದದಿಂದ ಹುಟ್ಟಿದ ಶೂದ್ರನು ಆತನ ಮುಖ, ಭುಜ, ತೊಡೆಗಳಿಂದ ಜನಿಸಿದವರ ಸೇವೆಯನ್ನು ಸದಾ ಸಲ್ಲಿಸುವ ಕರ್ತವ್ಯವನ್ನು ಹೊತ್ತುಕೊಂಡೇ ಜನಿಸುತ್ತಾನೆ. ಪಾದ ಧೂಳಿಯಿಂದ ಜನಿಸಿದ ಪಂಚಮನು, ಅಂದರೆ ದಲಿತನು, ಸಮಾಜದಿಂದಲೇ ಹೊರಗುಳಿದು ಇತರರೆಲ್ಲರಿಂದ ಬಹಿಷ್ಕೃತನಾಗಿ ತ್ಯಾಜಗಳನ್ನಷ್ಟೇ ಉಂಡು ಬದುಕುವುದಕ್ಕೆ ಮಾತ್ರ ಅರ್ಹನಾಗಿರುತ್ತಾನೆ. ಇದನ್ನು ಒಪ್ಪಿಕೊಂಡು ಅಂತಹ ನಿಕೃಷ್ಟ, ಅಮಾನವೀಯ ಸ್ಥಿತಿಯನ್ನು ಹೊತ್ತುಕೊಂಡೇ ಬಾಳಬೇಕೇನು? ಈ ಪರಿಯ ಅಸಹ್ಯ ಮತ್ತು ಅನಿಷ್ಠತೆಯನ್ನು ಪ್ರತಿಪಾದಿಸುವ ದುರ್ಗುಣಗಳು ಅತ್ಯಂತ ಶ್ರೇಷ್ಠ ಎಂದು ಬೊಗಳೆ ಬಿಡುವ ಹಿಂದೂ ಧರ್ಮದಲ್ಲಿ ಮಾತ್ರ ಅಲ್ಲದೆ  ಪ್ರಪಂಚದ ಇತರ ಯಾವುದೇ ಧರ್ಮಗಳಲ್ಲಿ ಶತಮಾನಗಳಿಂದಲೂ ಕಾಣಸಿಗುವುದಿಲ್ಲ ಹಾಗೂ ಅದನ್ನು ಸಮರ್ಥಿಸುವವರು ಶಿಕ್ಷಿಸಲ್ಪಡುವರು. ಆದರೆ ನಮ್ಮಲ್ಲಿ ಅದನ್ನು ಪ್ರತಿಪಾದಿಸುವವರು ಸಂತರೆಣಿಸಿಕೊಳ್ಳುವುದು ನಮ್ಮ ದುರಂತ. ಇಂತಹ ಧರ್ಮಾವಲಂಬಿಯಾಗಿ ಹೆಮ್ಮೆಪಟ್ಟು ತಾನು ಹಿಂದೂ ಎಂದು ಗರ್ವದಿಂದ ಹೇಳಲು ಕರೆ ಕೊಡುವವರನ್ನು ಏನೆನ್ನಬೇಕು? ಕುವೆಂಪುರವರಂಥ ಮಹಾನ್ ಜ್ಞಾನವಂತ ರಾಷ್ಟ್ರಕವಿಯವರು ಪ್ರತಿಪಾದಿಸುವ ವಿಶ್ವ ಮಾನವ ಧರ್ಮವು ಹಿಂದೂ ಧರ್ಮಕ್ಕೆ ಹೊರತಾದುದೇ? ಠಾಗೋರ್‌ರವರ ಸಮಸ್ತ ಮಾನವ ಕುಲದ ಏಕತೆಯ ಭಾವನೆಯು ಹಿಂದೂ ಧರ್ಮಕ್ಕೆ ವಿರೋಧವಾದುದೇ? ಅವುಗಳನ್ನು ಹಿಂದೂಗಳಿಗೆ ಒಂದು ಆದರ್ಶವೆಂದು ಶ್ರೀಗಳು ಯಾಕೆ ಹೇಳುತ್ತಿಲ್ಲ? ಉದಾತ್ತ ಭಾವನೆಗಳೆಲ್ಲವನ್ನೂ ತಿರಸ್ಕರಿಸಿ ಕೇವಲ ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಕಾರ್ಯ ಸೂಚಿಯಾದ ಅನ್ಯ ಧರ್ಮ ದ್ವೇಷ, ಸ್ವಧರ್ಮ ಶ್ರೇಷ್ಠತೆಯನ್ನು ಏಕೆ ತನ್ನದನ್ನಾಗಿಸಿಕೊಂಡಿದ್ದಾರೆ? ಈ ರೀತಿಯ ಘೋಮುಖ ವ್ಯಾಘ್ರದಂತಹ ಕಪಟ ಮುಖವಾಡವನ್ನು ತೊಟ್ಟುಕೊಂಡು ದಲಿತರನ್ನು ದಾರಿ ತಪ್ಪಿಸುವ ಪ್ರಕ್ರಿಯೆಗಳನ್ನು ತೊರೆದು ತಾನು ಪಡೆದ ದೀಕ್ಷೆಗನುಗುಣವಾಗಿ ಪೂಜೆ ಪುರಸ್ಕಾರಗಳನ್ನು ಕ್ರಮದಂತೆ ಮುಂದುವರಿಸಿಕೊಂಡು ಬಂದರೆ ಶ್ರೇಯಸ್ಕರವೆಂದು ಭಾವಿಸುತ್ತೇವೆ.
ಚಾತುರ್ವರ್ಣೀಯ ಜಾತ್ಯಾಧಾರಿತ ಉಚ್ಛ, ನೀಚ ಜಾತಿಗಳ ಪರಿಗಣನೆ ಇತ್ಯಾದಿಗಳ ವಿರುದ್ಧ ದಮನಕ್ಕೊಳಗಾದವರು ಪ್ರತಿಭಟನೆ ಮಾಡತೊಡಗಿದ್ದಾರೆ. ಸ್ವಾತಂತ್ರ್ಯವನ್ನು ಘೋಷಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪರಿವರ್ತನೆ ಮತ್ತು ಪ್ರತಿಭಟನೆ ಎಲ್ಲೇ ಆರಂಭವಾಗಲಿ, ಯಾರೇ ಪ್ರಾರಂಭಿಸಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಬೌದ್ಧ ಧರ್ಮದ ದೀಕ್ಷೆ ತಳೆಯುವುದು ಅವುಗಳಲ್ಲೊಂದು. ಜಾತ್ಯಾಧಾರಿತ ವರ್ಗೀಕೃತ ಸಮಾಜದ ಸಮರ್ಥಕರ, ದಲಿತರ ದಮನವನ್ನು ನ್ಯಾಯೀಕರಿಸುವ ಸಂತರೆಣಿಸಿಕೊಳ್ಳುವವರ ವಾದಗಳನ್ನು ಸೈದ್ಧಾಂತಿಕವಾಗಿಯೂ, ನಡೆವಳಿಕೆಗಳಲ್ಲೂ ಪ್ರತಿಭಟಿಸುವುದು ಸಮಾಜದ ಒಳಿತನ್ನು ಬಯಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಂತೆಯೇ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಚಳುವಳಿಗೆ ನಮ್ಮ ಶುಭಕಾಮನೆಗಳು.