Archive | June 2010

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಸಂವಿಧಾನಬಾಹಿರ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಬ್ಬರ ಆಣೆ ಪ್ರಮಾಣ ಪ್ರಹಸನದ ಬಗ್ಗೆ ಲೇಖನ (ದಿನಾಂಕ ಜೂನ್ 23, 2011)

ಇದೇ ಜೂನ್ 27ರಂದು ಧರ್ಮಸ್ಥಳದಲ್ಲಿ ನಮ್ಮ ಹಾಲೀ ಮತ್ತು ಮಾಜೀ ಮುಖ್ಯಮಂತ್ರಿಗಳಾಗಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರು ಹಿಂದೆ ಜೊತೆಗಿದ್ದುಕೊಂಡು ತಮ್ಮೊಳಗೆ ಮಾಡಿಕೊಂಡ್ಡಿದ್ದ ಮತ್ತು ಬಹುಷಃ ತಮ್ಮಿಬ್ಬರಿಗೆ ಮಾತ್ರ ತಿಳಿದಿರುವ ತಮ್ಮ ತಮ್ಮ ದುರ್ವ್ಯವಹಾರಗಳ ಕುರಿತು ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಲಿದೆ ಎಂಬ ಪ್ರಚಾರ ನಡೆದಿತ್ತು. ಈಗ ಅದರ ಬದಲು ಕೇವಲ ಮನಸ್ಸಾಕ್ಷಿಯಷ್ಟೇ ನಡೆಯುತ್ತದೆ ಎಂಬ ಹೇಳಿಕೆಗಳು ಬರತೊಡಗಿವೆ. ಅವರಿಬ್ಬರ ದುರ್ವ್ಯವಹಾರಗಳೆಲ್ಲವೂ ಬಯಲುಗೊಳ್ಳುವುದೆಂಬ ಭೀತಿಯಿಂದ ಅವರು ಈ ನೆವನವನ್ನು ಮುಂದೊಡ್ಡಿದ್ದಾರೆ ಎಂದು ತೋರುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಮಠಾಧೀಶರು ತಮ್ಮ ಸಲಹೆಗಳನ್ನು ಕೊಟ್ಟಿರುವುದೂ ಪೂರ್ವ ಯೋಜಿತವೆಂಬಂತೆಯೇ ಭಾಸವಾಗುತ್ತದೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದರ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಒಂದು ಸುಂದರವಾದ ಮತ್ತು ಅರ್ಥ ಪೂರ್ಣವಾದ ಕವನವನ್ನೇ ಬರೆದಿರುವರು. ಅದು ಪ್ರಸ್ತುತ ಸಂದರ್ಭದಲ್ಲಿ ನೆನಪಿಸುವುದು ಸೂಕ್ತವೆನಿಸುತ್ತಿದೆ. ಕುವೆಂಪುರವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವೀರೇಂದ್ರ ಹೆಗ್ಡೆಯವರ ಹಿರಿಯರಾದ  ಮಂಜಯ್ಯ ಹೆಗ್ಡೆಯವರು ಆಡಳಿತೆಯನ್ನು ನಡೆಸುತ್ತಿದ್ದರು. ಇಂದಿಗಿಂತಲೂ ಅಂದು ಧರ್ಮಸ್ಥಳದ ಮಹತ್ವದ ಬಗ್ಗೆ ಜನರ ಭೀತಿ ಅಧಿಕವಿತ್ತು. ಧರ್ಮಸ್ಥಳದಲ್ಲಿ ಸಾಮಾನ್ಯ ಜನರು ಆಚರಿಸುತ್ತಿದ್ದ ಹರಕೆ ಸಂದಾಯಗಳ ರೀತಿ ನೀತಿಗಳನ್ನು ಖುದ್ದಾಗಿ ಕಂಡು ಅದು ಅಮಾನವೀಯವೆಂದು ಮನನೊಂದು ಧರ್ಮಸ್ಥಳ ಎಂಬ ಒಂದು ಕವನವನ್ನು ಸ್ಥಳದಲ್ಲೇ ರಚಿಸಿ ಅದನ್ನು ಇಕ್ಷು ಗಂಗೋತ್ರಿ ಎಂಬ ತನ್ನ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:
ಹೃದಯ  ಧರ್ಮಸ್ಥಳದಿ ನಿನ್ನಂತರಾತ್ಮನಿರೆ, ಅಂಜುತಿಹೆ ಏಕೆ?  ..   ..
ಅಲ್ಲಿ ದರ್ಮಸ್ಥಳದಿ ಹೇಳಿಗೆಯ ಹಾವಿನೊಲು, ದೇಗುಲಕೆ ವಶನೆ ಹೇಳ್ ಮಂಜುನಾಥ? 
[ನಿನ್ನ ಅಂತರಾತ್ಮದಲ್ಲಿ ನಿಜವಾಗಿಯೂ ಮಂಜುನಾಥನು ಇರುವುದಾದರೆ ಹಾವಾಡಿಗನ ಹೇಳಿಗೆಯಂತಿರುವ ಧರ್ಮಸ್ಥಳದ ದೇಗುಲದಲ್ಲಿ ಮಂಜುನಾಥ ಬಂಧಿಯಾಗಿರುವನೇನು?]
ನಿನ್ನ  ಭಯದ ಉರಿಗೊಳ್ಳಿ ನಿನಗೆ ಅದುವೇ ಪಂಜುರ್ಲಿ; ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತ!
[ನಿನ್ನ ಭಯವೆಂಬ ಉರಿಯುವ ಕೊಳ್ಳಿಯೇ ನಿನ್ನನ್ನು ಪಂಜುರ್ಲಿಯಂತೆ ಕಾಡುತ್ತದೆ, ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತದಂತೆ ಕಾಡುತ್ತದೆ.]
ಎಲ್ಲಿ ಮತ್ಸರವುಅಳಿದು ಮೈತ್ರಿ ಮೂಡುವಲ್ಲಿ ಮೂಡಿತೆಂದೇ ತಿಳಿಯೋ ಧರ್ಮಸ್ಠಳ. ಸುಲಿಗೆ ವಂಚನೆ ಕಳೆದವನ ಮನವೇ ಮಂಜುನಾಥನ ಮಂಚ, ಹೃದಯಕಮಲ!
[ಎಲ್ಲಿ ಮತ್ಸರವು ಆಳಿದು ಗೆಳೆತನವು ಮೂಡುವುದೋ ಅಲ್ಲಿ ನಿಜವಾದ ಧರ್ಮಸ್ಥಳ ಮೂಡುತ್ತದೆ ಎಂದು ತಿಳಿ. ಸುಲಿಗೆ, ವಂಚನೆ, ಹಿಂಸೆಗಳನ್ನು ಕಳೆದವನ ಮನಸ್ಸೇ ಮಂಜುನಾಥನ ಪೀಠ!]
ಮೂಢ ಹೃದಯದ ಗೂಢ ಗಾಢಾಂಧಕಾರವನು ಹೊರ ದೂಡದೆಯೆ ರೂಢಿ ಎಂಬ ನೆವನದಿ ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದುಕೊಳೆ ಜ್ಯೋತಿ ಮೂಡುವುದೆಂದೋ ಜಡದ ಜಗದಿ?
[ಮೂಢರ ಹೃದಯಗಳ ನಿಗೂಢ ಗಾಢಾಂಧಕಾರವನ್ನು ಕಾಣಿಕೆ ಎಂಬ ಹೆಸರಲ್ಲಿ ಕಾಂಚನವನ್ನು ಸೆಳೆಯುವ ತಂತ್ರಕ್ಕೆ ಪ್ರೋತ್ಸಾಹ ಕೊಟ್ಟರೆ ಜಗತ್ತಿನಲ್ಲಿ ಜ್ಞಾನ ಜ್ಯೊತಿ ಮೂಡುವುದು ಎಂದು?]
ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ! ನಿನ್ನಂತೆ ಸಂಸ್ಥೆಯೂ ನಶ್ವರವದು!
[ಧರ್ಮಸ್ಥಳದ ಹಿರಿಯನೇ,  ಅಹಂಭಾವವನ್ನು ತೊರೆದು ಜಿನನಿಗೆ ಶರಣಾಗು, ನೀನಾಗಲಿ ನಿನ್ನ ಸಂಸ್ಥೆಯಾಗಲಿ ಶಾಶ್ವತವೇನಲ್ಲ!]
ಧರ್ಮಕ್ಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ; ಧರ್ಮವೇಷದ ಅಧರ್ಮಕ್ಕೆ ಮುನಿದೆ, ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೋ ಕೈ ಮುಗಿದೆ, ಮಣಿದೆ, ಹಿರಿದು ಕಿರಿದೆನ್ನದೆ!
[ಧರ್ಮ ಮತ್ತು ಧರ್ಮ ಸಂಸ್ಥೆಗಳಿಗೆ ನಾನು ನಿಂದಿಸುವುದಿಲ್ಲ, ಧರ್ಮದ ಹೆಸರಲ್ಲಿ ನಡೆಯುವ ಅಧರ್ಮಕ್ಕೆ ನನ್ನ ಮುನಿಸು, ನಿಜವಾದ ಧರ್ಮಕ್ಕೆ ನಾನು ತಲೆ ಬಾಗುತ್ತೇನೆ ಮತ್ತು ಕೈ ಮುಗಿಯುತ್ತೇನೆ]
ಇದು ಕುವೆಂಪುರವರ ಶ್ರೇಷ್ಠ ಕವನಗಳಲ್ಲೊಂದು ಎಂದೆನಿಸಿದೆ. ಧರ್ಮಸ್ಥಳದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು, ಆಣೆ ಇಡುವುದು  ಧರ್ಮದ ಹೆಸರಲ್ಲಿ ನಡೆಯುವ ಅಧರ್ಮವೆಂದೂ, ಜನರನ್ನು ಮೌಡ್ಯಕ್ಕೆ ತಳ್ಳುವ ಕ್ರಿಯೆಯೆಂದೂ ಅರ್ಧ ಶತಮಾನಗಳ ಹಿಂದೆಯೇ ಕುವೆಂಪುರವರು ಸಾರಿದ್ದರು. ಹಾಗಿರುವಾಗ ಜನ ನಾಯಕರೆಂದೆನಿಸಿಕೊಂಡಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರ ಕುಕೃತ್ಯಕ್ಕೆ ಅಸಹ್ಯ ಪಡುತ್ತೇವೆ ಮತ್ತು ಅದನ್ನು ಖಂಡಿಸುತ್ತೇವೆ. ಏನಿದ್ದರೂ ಎಲ್ಲ ಅವ್ಯವಹಾರಗಳನ್ನು ಬಯಲು ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಅವುಗಳನ್ನು ನಮ್ಮ ಸಂವಿಧಾನಕ್ಕನುಗುಣವಾಗಿ ಶಾಸನ ಸಭೆಗಳಲ್ಲಿಯೋ, ನ್ಯಾಯಲಯಗಳಲ್ಲಿಯೋ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಅವರದ್ದಾಗಿರುತ್ತದೆ. ಮತ್ತು ಇವುಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗಿದೆ. ಇದಕ್ಕೆ ಅವರು ಬದ್ಧರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ಪಾಲಿಸುತ್ತಾರೆ ಎಂದು ಹಾರೈಸುತ್ತೇವೆ.

ಲೋಕಾಯುಕ್ತವನ್ನು ಬಲಪಡಿಸಲು ಸರಕಾರಕ್ಕೆ ಒತ್ತಾಯ

ಕರ್ನಾಟಕ ಲೋಕಾಯುಕ್ತರ ಬಗ್ಗೆ ಜೂನ್ 15, 2010 ರಂದು ಬರೆದ ಲೇಖನ
ನಮ್ಮ ಪ್ರಸ್ತುತ ಸಂವಿಧಾನಬದ್ದವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತಗಳು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುವಂತೆ ನಿಯೋಜಿಸಲಾಗಿದೆ. ಆದರೆ ಕೇಂದ್ರಕ್ಕೆ ಸಂಭಂದಿಸಿದ ಲೋಕಪಾಲವು ನಿಜವಾಗಿ 63 ವರ್ಷಗಳಲ್ಲಿಯೂ ಅಸ್ತಿತ್ವಕ್ಕೆ ಬಂದಿಲ್ಲ. ಅದಕ್ಕೆ ಒಂದೇ ಒಂದು ಕಾರಣ ಲೋಕಪಾಲದ ವ್ಯಾಪ್ತಿಯಿಂದ ಪ್ರಧಾನ ಮಂತ್ರಿಯವರನ್ನು ಹೊರಗೆ ಇರಿಸಬೇಕೆಂಬ ಕೇಂದ್ರ ಸರಕಾರದ ನಿಲುವು. ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತಗಳು ಇವೆ. ಆದರೆ ಅವುಗಳ ವ್ಯಾಪ್ತಿಯಿಂದ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಹೊರಗೆ ಇಡಲಾಗಿದೆ. ಎಂದರೆ ಕೇಂದ್ರ ಸರಕಾರವು ನಿಜವಾದ ಅರ್ಥದಲ್ಲಿ ಲೋಕಪಾಲ ಎಂಬ ಸಂಸ್ಥೆಯ ವ್ಯಾಪ್ತಿಯಿಂದ ಸಂಪೂರ್ಣ ಅಬಾಧಿತವಾಗಿದೆ ಹಾಗೂ ರಾಜ್ಯ ಸರಕಾರಗಳೂ ಆಯಾ ರಾಜ್ಯಗಳ ಲೋಕಾಯುಕ್ತರಿಂದ ಅಬಾಧಿತವಾಗಿವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಿ ಕೆಲಸ ಮಾಡಲು ಸಾಕಷ್ಟು ಅವಕಾಶವನ್ನು ನಮ್ಮ ದೇಶವನ್ನು ಆಳಿರುವ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡಿವೆ. ಈ ಕೊರತೆಯು ಕಳೆದ 63 ವರ್ಷಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಮ್ಮನ್ನು ಆಳಿರುವ ಎಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಣ್ಣು ಮುಚ್ಚಾಲೆಯಿಂದ ನಡೆದಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸರಕಾರದ ಉನ್ನತ ಅಧಿಕಾರಿಗಳು ಅವರ ಬಲೆಗೆ ಬಿದ್ದು ಪ್ರಾಥಮಿಕ ತನಿಖೆಯಿಂದ  ಪೂರ್ಣ ನ್ಯಾಯಾಂಗ ವಿಚಾರಣೆಗೆ ಗುರಿಪಡಿಸಲು ಸಾಕಷ್ಟು ಪುರಾವೆಗಳು ದೊರೆತ ಸಂಧರ್ಭಗಳಲ್ಲಿ ಸಹಾ ಸರಕಾರದ ಕೃಪಾಕಟಾಕ್ಷದಿಂದ ಭೃಷ್ಟ ಅಧಿಕಾರಿಗಳು ತಪ್ಪಿಸಿಕೊಂಡಿರುವಂಥಾ ಉದಾಹರಣೆಗಳು ಸಾಕಷ್ಟಿವೆ.  ಈ ಮುಖ್ಯ ಪ್ರಶ್ನೆಯನ್ನು ಒಂದು ವೇಳೆ ಬದಿಗಿರಿಸಿದರೂ ಸಹಾ ಇದ್ದ ವ್ಯವಸ್ಥೆಯಲ್ಲಿಯೇ ರಾಜ್ಯಗಳ ಲೋಕಾಯುಕ್ತಗಳು ಉತ್ತಮ ಕಾರ್ಯ ನಿರ್ವಹಿಸಿವೆ ಎನ್ನುವುದು ಗಮನಾರ್ಹವಾಗಿದೆ.
ನನ್ನ ಸ್ವ ಅನುಭವದಿಂದ ಹೇಳಬಹುದಾದ ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಸರಕಾರಿ ರಸ್ತೆ ಸಾರಿಗೆ ಸಂಸ್ಥೆಗೆ  ನಷ್ಟ ಉಂಟಾಗುವಂತೆ ಹಾಗೂ ಅದರ ಕಾರ್ಯವ್ಯಾಪ್ತಿಯ ಮೇಲೆ ಅಕ್ರಮವಾಗಿ ಒಳ ನುಸುಳಿ ಆತಂಕ ಉಂಟು ಮಾಡುವಂತೆ ವರ್ತಿಸುತ್ತಿದ್ದ ಖಾಸಗಿ ರಸ್ತೆ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕಾನೂನನ್ನು ದುರ್ಬಳಕೆ ಮಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪರವಾನಿಗೆ ನೀಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಕಾರ್ಮಿಕ ಮತ್ತು ನೌಕರರ AITUC ಸಂಘಟಣೆಯ ಆಧ್ಯಕ್ಷ ಎಂಬ ನೆಲೆಯಲ್ಲಿ ಪ್ರಶ್ನಾತೀತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ನಾನೊಮ್ಮೆ ಮನವಿ ಸಲ್ಲಿಸಿದ್ದೆ. ಆ ಮನವಿಯನ್ನು ಸ್ವೀಕರಿಸಿ ಖಾಸಗಿಯವರಿಗೆ ಈ ರೀತಿ ಅವಕಾಶ ನೀಡುವುದನ್ನು 15 ದಿನಗಳೊಳಗೆ ತಡೆಗಟ್ಟದಿದ್ದರೆ ಅದಕ್ಕೆ ಕಾರಣರಾದ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಕೋರ್ಟು ನಿಂದನೆ ಕ್ರಮವನ್ನು ಜರುಗಿಸಬೇಕೆಂಬ ಆದೇಶವನ್ನು ಲೋಕಾಯುಕ್ತರು ನೀಡಿದ್ದು ಒಂದು ಶ್ಲಾಘನೀಯ ಉದಾಹರಣೆ.
ಅಲ್ಲದೆ ಲೋಕಾಯುಕ್ತರ ಇತ್ತೀಚಿಗಿನ ಕಾರ್ಯವಿಧಾನಗಳು ಅತ್ಯಂತ ಪ್ರಸಂಶನೀಯವಾಗಿವೆ. ನ್ಯಾಯಮೂರ್ತಿ.UL ಭಟ್ ಅವರಿಗೆ ಗಣಿಗಾರಿಕೆಗೆ ಸಂಭಂಧಿಸಿದ ಅಕ್ರಮಗಳ ತನಿಖೆಯನ್ನು ರಾಜ್ಯಸರಕಾರ ಒಪ್ಪಿಸಿತ್ತು. ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದ ಆರೋಪಗಳ ತನಿಖೆಯನ್ನು CBI ಗೆ ಒಪ್ಪಿಸಬೇಕೆಂಬ ನ್ಯಾ.ಮೂ.ಗಳ ಆದೇಶವನ್ನು ಕೇಂದ್ರ ಸರಕಾರ ಜಾರಿಗೆ ತರುವುದರ ಬದಲು ನ್ಯಾ.ಮೂ.ಗಳೇ ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆ ವಿಷಯವೀಗ  ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಲೋಕಾಯುಕ್ತದ ಮುಂದಿದ್ದು  ಅವರು ಗಣಿಗಾರಿಕೆಯ ಬಗ್ಗೆ ತನಿಖೆ ಮುಂದುವರಿಸಿ ವರದಿಯನ್ನು ಪೂರ್ಣಗೊಳಿಸಿ ಸರಕಾರಕ್ಕೆ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಣಿ ದೊರೆಗಳ ಪ್ರಭಾವದಿಂದಲೋ ಮಾಜೀ ಅಥವಾ ಹಾಲೀ ಮು.ಮಂತ್ರಿಗಳ ಕೈವಾಡದಿಂದಲೋ ಗಣಿ ಹಗರಣದ ವರದಿಯನ್ನು ಸರಕಾರವು ಇನ್ನೂ ವಿಚಾರಣೆಗೆ ಒಪ್ಪಿಸಲಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಹಾಗೆಯೇ ಅರಣ್ಯ ನಾಶದ ಬಗ್ಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದಿರುವಂಥಾ ಭೂಹಗರಣಗಳ ಬಗ್ಗೆ ನಡೆಸಿರುವ ತನಿಖೆಗಳು ಎಲ್ಲಿಗೆ ತಲುಪಿವೆ ಮತ್ತು ಅವುಗಳ ಫಲಿತಾಂಶವೇನು ಎಂಬ ಸುದ್ದಿ ಕೂಡಾ ಹೊರಗೆ ಬಾರದಂತೆ ತಡೆ ಹಿಡಿಯಲಾಗಿದೆ ಎಂಬುದು ಸಂಶಯಕ್ಕೆ ಎಡೆಯಾಗಿದೆ.
ಇಂತಹ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಚುರುಕಾಗಿದೆ ಹಾಗೂ ಜನರ ಸೊತ್ತುಗಳ ಅಪಹರಣಗಳ ವಿರುದ್ದ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು  ಅಯೋಗಗಳು ತಯಾರಾಗಿವೆ ಎಂಬ ಭರವಸೆ ಜನರಿಗೆ ಬೇಕಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿರುವ ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಮುಂದಾಳುತನದಲ್ಲಿರುವ ಲೋಕಾಯುಕ್ತವು ಸಲ್ಲಿಸಿರುವ ವರದಿಗಳೆಲ್ಲವೂ ಬಹಿರಂಗಗೊಳ್ಳಬೇಕು ಮತ್ತು ಅಂಗೀಕೃತವಾಗಬೇಕು ಹಾಗೂ ಮುಂದಿನ ಕ್ರಮ ಜರುಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಲೋಕಾಯುಕ್ತವು ಇನ್ನಷ್ಟು ಹೆಚ್ಹು ಕಾಲ ಅಧಿಕಾರದಲ್ಲಿ ಮುಂದುವರಿದು ಭ್ರಷ್ಟಾಚಾರದ ನಿರ್ಮೂಲನೆಗೆ ಭದ್ರವಾದ ಬುನಾದಿಯನ್ನು ನಿರ್ಮಿಸಬೇಕೆಂಬ ಸಾರ್ವಾಜನಿಕರ ಅಪೇಕ್ಷೆಯನ್ನು ಅವರ ಚಟುವಟಿಕೆಗಳನ್ನು ಕಂಡು ತಿಳಿದಿರುವ ನಾನು ಹಾರೈಸುತ್ತೇನೆ.
ಲೋಕಾಯುಕ್ತರನ್ನು ಬಲಪಡಿಸುವ ದೃಷ್ಟಿಯಿಂದ ಅವರ ವರದಿಗಳಲ್ಲಿ ತಪ್ಪಿತಸ್ಥರೆಂದು ಉಲ್ಲೇಖಿಸಲಾಗಿರುವ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಅಪಾದಿತರನ್ನಾಗಿ ವಿಚಾರಣೆಗೆ ಒಳಪಡಿಸುವ ಕ್ರಮವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಸರಕಾರ ಜಾರಿಗೆ ತರಬೇಕು ಅಲ್ಲದೆ ಆಪಾದಿತರನ್ನು ಲೋಕಾಯುಕ್ತದ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಿ ಪ್ರಾಥಮಿಕ ತೀರ್ಪು ನೀಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು. ಈ ಕ್ರಮಗಳನ್ನು ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿಯೇ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.